ಹೊರಟೈತೆ ಮೆರವಣಿಗೆ
ನಮ್ಮೂರಿಗೆ ಭೂದೇವಿ
ಸಿರಿದೇವಿ ವನದೇವಿ
ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ ||
ಬರುತಾಳೆ ಕಾವೇರಮ್ಮ
ಕಾಲ್ ತೊಳೆಯೆ ನಿನ್ನ ….
ನಿನ್ನ ಮಕ್ಕಳ ಹರಸಮ್ಮ
ಜಗದಾಂಬೆ ಕನ್ನಡಾಂಬೆಯೆ ||
ನಿನ್ನ ಹೃದಯಂಗಳದಿ
ಹಸಿರ ತಂಪೆರೆಯಲಿ
ಹೋಲಗದ್ದೆಗಳೆ ಗುಡಿಗೋಪುರ
ರೈತ ಹೈಕಳ ಜೋಡಿ ನಿನ್ನ ಪೂಜಾರಿ
ನೇಗಿಲು ಹಲುಬೆಗಳೆ ಪೂಜಾಸಾಮಗ್ರಿ
ಹೂಗೊಂಚಲ ತರುಲತೆ ಶೃಂಗಾರಾಭರಣ
ಸೂರ್‍ಯ ಚಂದ್ರರೆ ಕರ್‍ಣದೋಲೆಗಳು
ಬೆಳ್ಳಿ ಶಿಖರಗಳೇ ಕಿರೀಟವು
ಮುತ್ತೈದೆ ವೀರಗಾಥೆಯೆ ತಿಲಕ
ಪಚ್ಚೆತೆನೆ ಧವಸಧಾನ್ಯ ನೈವೇದ್ಯ
ಕಬ್ಬಿನ ಜಲ್ಲೆ ಜೇನ ಕಣ ಅಭಿಷೇಕಾಮೃತ
ನಿನ್ನ ಮಕ್ಕಳ ಬೆವರ ಹನಿಯೆ
ಭಕ್ತಿಯ ಸ್ಮರಣೆ ಕರ್‍ಪೂರದಾರತಿ ||
ಇಳಿಯೆಂಬ ಹೊಸ್ತಿಲಲ್ಲಿ ಅಂಬರವೇ
ಪುಷ್ಪಕ ವಿಮಾನ ಲತಾಮಂಟಪ
ಸುಗ್ಗಿಯ ಸೊಬಗೇ ನಿನ್ನ ತೇರು
ಋತುಗಳೆ ತೇರನ್ನೆಳೆಯುವ ದಾತರು
ಸಂಸ್ಕೃತಿ ಸಂಪನ್ನಗಳೆ ಶ್ವೇತಾಂಬರ ರವಿಕೆ
ಶ್ರೀ ಗಂಧವೆ ಧೂಪ ತರಂಗಿಣಿ ಸೆಲೆಯೆ ತೀರ್‍ಥ
ಸಂವತ್ಸರಗಳೆ ನಿನಗೆ ಸುಪ್ರಭಾತ
ಸಂಧ್ಯಾರಾಗ ಸಮತಾಭಾವ ನಿನಗೋಕುಳಿ
ಸದ್ಗುಣ ಜ್ಞಾನಾರ್‍ಜನೆಯೆ ದೀವಿಗೆ
ಕೋಕಿಲ ಗಾನವೇ ಮಂತ್ರಾರ್‍ಚನೆ
ಪವನದೇವ ಪಂಖ ಬೀಸಲು ||
ಕೊಂಬು ಕಂಸಾಳೆ ಡೋಲು
ದುಡಿ ಮದ್ದಲೆ ದುಂದುಭಿ
ನಾಗಸ್ವರ ಮೇಳ ಹಿಮ್ಮೇಳವು
ದೇವ ಕಿನ್ನರಿ ಜವ್ವನೆಯರ ನರ್ತನ
ವೈಭವದಿಂದ ಬರುತಿರೆ ಮೆರವಣಿಗೆ ||
ನೋಡಲು ಕಣ್ಣುಗಳು ಸಾಲದಮ್ಮ
ನಿನ್ನ ವರ್‍ಣಿಸಲು ಅಸದಳವು
ಮುತ್ತೈದೆಯರು ಮುತ್ತಿನಾರತಿ ಎತ್ತಿರೆ
ತಾಯೆ ಸಿರಿದೇವಿಗೆ ತೇಲಿಬಾಗಿ
ನಮಿಸಿರೆ ಕನ್ನಡಾಂಬೆಗೆ ||
*****