ಎಲ್ಲಿಯದೋ ಒಂದು ಧ್ವನಿ
ಅನುರಣುಸುತ್ತಿದೆ, ಎದೆಯ ಆಳದಲಿ
ನಿತ್ಯ ನೂತನದ ತಂಗಾಳಿಯ ಅಲೆಗಳು
ಅಪ್ಪಳಿಸಿವೆ ನದಿಯ ದಂಡೆಯಲಿ.
ಕೇದಿಗೆ ಅರಳಿ ಘಮ್ಮೆಂದು ಸೂಸಿದ
ಪರಿಮಳ ಎಲ್ಲೆಲ್ಲೂ ಹರಡಿ ನದಿಗುಂಟ
ಹರಿದು ಮೂರು ಸಂಜೆಯ ಹೊತ್ತು
ನೀಲಾಂಜನದ ಬೆಳಕು ಹರಡಿದ ತಂಪು.
ಹೂವಿನಿಂದ ಹೂವಿಗೆ ಹಾರುವ ಚಿಟ್ಟೆಗಳ
ಸಂಭ್ರಮದ ಮುಂಜಾನೆ, ಸೂರ್ಯ ತನ್ನ
ಕ್ಯಾಮರಾ ಕಣ್ಣುಗಳಿಂದ ಪ್ಲಾಶ್‌ಗೊಳಿಸಿದಾಗ
ತೊಟ್ಟಿಲಲ್ಲಿ ಮಲಗಿದ ಕಂದನ ಕಣ್ಣುಗಳ ತುಂಬ
ಹೊಂಬೆಳಕು
ನವಿರಾದ ಪ್ರೀತಿ ಅರಳಿದ ಸಮಯ,
ಕವಿತೆಯ ಕೂದಲುಗಳು ಉದ್ದ ಜಡೆ ಹೆಣೆದು
ಕ್ಯಾದಿಗೆ ಮುಡಿದು, ಚಿಟ್ಟೆಗಳ ಅರಳಿಸಿ ಜೋತಾಡಿದಾಗ
ನೀನು ಬಂದು ನನ್ನ ಮನೆಯ ಬಾಗಿಲು ತಟ್ಟಿದೆ.
ಕೊನರಿದ ಕೊರಡು ಬಿದುರಿನಿಂದ ಹೊರಟ
ನಿನ್ನ ನಿನಾದ ರಾತ್ರಿಯ ಬೆಳದಿಂಗಳಲಿ
ಪಸರಿಸಿ ಸವಿ ಸಮ್ಮಿಲನದ ಸುಖದಲಿ
ಮನೆ, ಗಂಡ, ಮಗು ಎಲ್ಲರೂ ದೂರ ಉಳಿದ
ಇರಳು.
*****