ನೆಲದಡಿಯಲಿ ಮಲಗಿದ ಪ್ರೀತಿ
ಆತ್ಮಗಳು ಉಸಿರಾಡುತ್ತವೆ, ಮಂಜು
ಹನಿಗಳ ಮಧುರ ತಣ್ಣನೆಯ ಸ್ಪರ್ಶದಲಿ
ಎಲೆಯ ಮರೆಯ ನಿಧಾನದ ಗಾಳಿ
ಸವರಿ ತೇಲಿ ಹೋಗುತ್ತವೆ, ಪರಿತ್ಯಕ್ತ
ಎಲ್ಲಾ ಮನಸ್ಸುಗಳ ಮೂಲೆಯಲಿ ಲೋಕದ
ಬೆಳಕು.
ಎರೆಮಣ್ಣಿನಲಿ ಮುಸುಕಿನ ಗುದ್ದಾಟ ಮತ್ತೆ
ಕುಸುಮ ಅರಳಿ ಆಕಾಶಕ್ಕೆ ಮೊಗ ಮಾಡಿದ
ನೆಲವ ಚುಂಬಿಸಿದ ಅಗಾಧ ಆಕಾಶ ಪ್ರೀತಿ
ಹನಿಹನಿಯಾಗಿ ಬೆವರು ಭೂಮಿಗಿಳಿದ
ಮೀರಿದ ಬೆಳಕು ಕಂಡ ಹಕ್ಕಿಗಳ ಕಲರವ
ಒಡಲ ತುಂಬ ಕಂಪಿಸಿ ಘಮ್ಮೆನ್ನುವ ಕಣ್ಣ
ಬೆಳಕು.
ಭೂಮಿಯ ಆವರ್ತದಲ್ಲಿ ಅಣು ಅಣುವಿನ
ಸೂರ್ಯನ ಚಲನೆ, ಎದೆಯೊಳಕೆ ಇಳಿದು
ಸಳಸಳ ಮಿಂಚಿ ಮಾಯವಾಗುವ ಮೀನುಗಳ ಕಡಲ
ನೆತ್ತಿ ತಣಿಸುವ ಸುತ್ತ ಮುತ್ತಲಿನ ಹಸಿರು ಕಾವ್ಯ
ಕಾಯುವುದು ಪ್ರೀತಿಯಲಿ ಕಡು ಕತ್ತಲೆ ಮಳೆ
ಕಾನನದ ಹಕ್ಕಿ ಉಲಿದ ಹಾಡುಗಳು ಅರಳಿಸಿದವು
ಕವಿಯ ಒಡಲು.
ಅದರಾಚೆಯ ಮುಗಿಲ ಮೌನದ ಮೋಡಗಳು
ಗುಡುಗಿ, ಸುರಿದ ದೈವ್ಯ ನೆನಹು ಎಲ್ಲರ
ಮನಸ್ಸಿನಾಳಕೆ ಇಳಿದು ಅಲ್ಲಮ ಜಂಗಮನಾದ
ಇಷ್ಟಗಳ ನೆಲದಲಿ ಎಂತಹ ಜೀವ ಪವಾಡ
ಚಿಗುರಿದ ಮರಗಳ ಹೂಗಳ ಕಂಪನ ಮತ್ತೆ
ತೊಯ್ದ ಮಾಡು, ತೊಳೆದ ದಾರಿ ಅಮ್ಮನ ಒಲುಮೆಯಲಿ
*****