ಎಂತಿರಲು ಬಹುದು? ನನ್ನಾತನೆಂತಿರಬಹುದು….?
ಇಂದಿರಮ್ಮನ ಇನಿಯನಂತೆ ತಿಳಿಗಪ್ಪ-ಮೈ-
ಯಂದದರಳಿದ ಕಣ್ಣ, ತುಂಬುದಿಂಗಳ ಮೊಗದ
ತರುಣನಿರಬಹುದೊ….? ಇಲ್ಲದಿರೆ ಗೌರಮ್ಮನಾ
ಎರೆಯನಿಹನಲ್ಲವೇ? ಆತನೊಲು ಕೆಂಗಣ್ಣಿ-
ನುರಿಮೊಗದ, ಬೆರಗಾಗಿಸುವ ವೇಷ-ಭೂಷಣದ
ಮರುಳನಿರಬಹುದೋ-?
ರಾಧಾಂಬೆಯವನಂತೆ
ಎಳಸಾದ ಕಳೆಯುಳ್ಳ ಮೆಲುನಗೆಗೆ ಮನೆಯಾದ
ಚೆದುರನಿರಬಹುದೊ…., ಅಲ್ಲದೆ ಶಾರದೆಯ ಮನೆಯ
ಮನ್ನೆಯನ ತೆರದಿ ಮುದುಡಿದ ಮೆಯ್ಯ ನರೆದಲೆಯ
ಮುದಿಯನಾಗಿರ ಬಹುದೊ…?
ಕಮಲಮ್ಮನವರ ಮಗ-
ನಂತೆ ಸೌಂದರ್ಯಸಾಗರನಿರಲು ಬಹುದೊ…., ಕಾ-
ಳಬ್ಬೆಯಣುಗನ ತೆರದಿ ಡೊಂಕು ಮೋರೆಯ ಡೊಳ್ಳು-
ಹೊಟ್ಟೆಯವನಿರಬಹುದೊ…..?
ಸಿರಿವಂತರಂತೆ ಸಡ-
ಗರದುಡುಗೆ ತೊಡಿಗೆಗಳ ಧರಿಸಿರಲು ಬಹುದೊ…., ಇರ-
ದಿರೆ ಬಡವರಂದದಲಿ ಬರಿಮೆಯ್ಯ ಅರೆಬತ್ತ-
ಲೆಯನಿರಲು ಬಹುದೊ.. ?
ಎಂತಿದ್ದರೇನೆನಗೆ ?
ಎಂತಾದರೂ ಇರಲಿ, ಅವನೆನ್ನ ನನ್ನಿಯಾ
ನಲ್ಲನಲ್ಲವೆ? ನಲ್ಮೆಯೊಡೆಯನಲ್ಲವೆ? ಜಗದಿ
ಬೇಕಾದರಾ ಬೇವೆ ಮಾವಹುದು, ಬೇಡವಿರೆ
ಮಾವು ಬೇವೆನಿಸುವುದು; ಹೃದಯದೊಲವಿನದೊಂದು
ಅದುಭುತದ ಆಟವಿದು! ಆರಾರಿಗೂ ಅರಿದು!
“ಹೃದಯದೊಲವದು ಹೊರಗಣಾವಕಾರಣಗಳನು
ಹೊದ್ದಿ ಆಸರಿಸಿರದು, ಒಳಗಿರುವುದಾವುದೋ
ತಿಳಿಯದಂತಿರುವೆಳೆತ ಸೆಳೆದು ಬಿಗಿವುದು ಒಲವಿ-
ನೆದೆಗಳನು” ಎಂದು ಕವಿಭವಭೂತಿ ಹೇಳಿರನೆ?
*****