ನನ್ನ ಮಿದುಳು ದಳವೇರಿ ದಳ್ಳಿಸಿತು ಸ್ವರ್‍ಣದೀಪ್ತಿ ಇಳಿಯೆ.
ಮನದ ಕರಿನೆರೆಯ ಹುಳುಗಳೆಲ್ಲ ಹೊತ್ತೇರಿ ನಿದ್ದೆ ತಿಳಿಯೆ.
ಜ್ಞಾನಮಯದ ಉದ್ದೀಪನಕ್ಕೆ ಪ್ರಜ್ವಲಿತವಾದ ಮೇಲೆ.
ಶಾಂತ ಕಾರ್‍ತಿಕದ ನಟ್ಟನಡುವೆ ಉರಿವಂತೆ ಪ್ರೇಮಜ್ವಾಲೆ.
ಕೊರಳಿಗಿಳಿದು ಬಂದಿರಲು ಆಹ! ಆ ನಿನ್ನ ಸರ್ಣದೀಪ
ವಾಣಿ ಇನಿದಾಗಿ ಮಾಗಿ ನುಡಿಯುತಿದೆ ಏಕರಾಗ ಭೂಪ.
ಶ್ರುತಿಯ ಮೀಟಿದರೆ, ಸ್ತೋತ್ರ ಜಲಧಿ ನಿನ್ನಡಿಗೆ ನುಗ್ಗಲುಂಟು
ಅಮೃತ ಕುಡಿದ ಗಂಧರ್‍ವಮತ್ತ ಗೀರ್‍ವಾಣ ಹಿಗ್ಗಲುಂಟು.
ನಿನ್ನ ಸ್ವರ್ಣದೀಪ್ತಿಯಲ್ಲಿ ಬೆಳಗಿತಿಗೊ ನನ್ನ ಹೃದಯ ಭಾಗ
ನಿನ್ನ ಶಾಶ್ವತದ ಉಸಿರು ಆಡುತಿದೆ ಪ್ರಾಣದಿಟುಕು ಜಾಗ.
ನಿನ್ನ ಸುತ್ತು ಕಟ್ಟಿತ್ತು ಈಗ ದೇಗುಲವೆ ರೂಪಗೊಂಡು
ಹೃದಯರಾಗಗಳು ಶಿಖರಗಟ್ಟುತಿವೆ ಧೂಪ ಎಂದುಕೊಂಡು.
ಪಾದಗಳಲಿ ಇಳಿದಿರಲು ನಿನ್ನದಾದಾ ಸುವರ್ಣದೀಪ
ನನ್ನ ಇಳೆಯು ಲೀಲಾಽಭೂಮಿ ನಿನ್ನಡಿಗೆ ಬಹು ಸಮೀಪ.
*****