ಎಫ್. ಎಮ್. ದೋಸ್ತೋವಸ್ಕಿಯ – Crime and Punishment

ಎಫ್. ಎಮ್. ದೋಸ್ತೋವಸ್ಕಿಯ – Crime and Punishment

ಅಪರಾಧ ಮತ್ತು ಶಿಕ್ಷೆಗಳ ಮೇಲೊಂದು ನೋಟ

“Crime and Punishment” ಜಾಗತಿಕ ಸಾಹಿತ್ಯ ರಂಗದಲ್ಲಿ ಶೇಷ್ಠ ಕಾದಂಬರಿಗಳಲ್ಲಿ ಒಂದಾದ ಈ ಕೃತಿ ದೋಸ್ತೋವಸ್ಕಿಯ ಮಾಸ್ಟರ ಪೀಸ್. ಅತಿ ಸಂಕೀರ್ಣವಾದ ಕಾದಂಬರಿ. ಬಹುಶಃ ಓದುಗನ ಮನಸ್ಸನ್ನು ತಟ್ಟಿ ಬೆನ್ನಟ್ಟುವ ಕಾದಂಬರಿ ಎನ್ನಬಹುದೇನೋ. ಆರು ಭಾಗಗಳಲ್ಲಿ ಮೂಡಿಬಂದ ಈ ಅದ್ಭುತ ಕಾದಂಬರಿ ಮೊದಲ ಭಾಗದಲ್ಲಿ ಏರು ಪ್ರಾಯದ ಸುಸಂಸ್ಕೃತ ನಾಯಕ ಆದರ್ಶವಾದಿಯಾಗಿ, ಬಡಜನರ ರಕ್ತ ಹೀರಿ ಬದುಕುತ್ತಿದ್ದ ಶ್ರೀಮಂತ ಮಹಿಳೆ Alyona ಹಾಗೂ ಆಕಸ್ಮಿಕವಾಗಿ ಅಲ್ಲಿಗೆ ಬರುವ ಆಕೆಯ ಸಹೋದರಿ Lizavetaನ್ನು ಕೊಲೆಗೈಯುತ್ತಾನೆ.

ಮುಂದಿನ ಐದು ಭಾಗಗಳು ಕೊಲೆಗಾರನನ್ನು ಪತ್ತೆಹಚ್ಚುವ ಪ್ರಕ್ರಿಯೆ ಹಾಗೂ ಕೊಲೆಗಾರನ ಮಾನಸಿಕ ತಳಮಳ, ವ್ಯಥೆಯನ್ನು ಸಾದರಪಡಿಸುತ್ತವೆ. ಆರನೇ ಅಧ್ಯಾಯದಲ್ಲಿ ಅಪರಾಧ ಒಪ್ಪಿಕೊಂಡ ನಾಯಕ ಗಡಿಪಾರಿನ ಶಿಕ್ಷೆಗೆ ಗುರಿಯಾಗುವುದನ್ನು ಹೇಳಿದರೆ ಕೊನೆಯ ಉಪಸಂಹಾರ ಅಪರಾಧದ ಕುರಿತು ಮಾತನಾಡುತ್ತದೆ.

ಕಾದಂರಿಯ ಮೂಲ ಪ್ರತಿಪಾದನೆ ಎಂದರೆ ಸದ್ಗುಣವು ಗೌರವವನ್ನು ಸಂಪಾದಿಸಿದರೆ, ಅಪರಾಧಿ ವ್ಯಕ್ತಿತ್ವ ದುರಾಚಾರಗಳು ಹೇಗೆ ಶಿಕ್ಷೆ ಮತ್ತು ಸಂಕಟಕ್ಕೆ ಈಡಾಗುತ್ತವೆ ಎಂಬುದು.

Raskolnikov ಕಪ್ಪು ಕಂಗಳು, ದಟ್ಟ ಕಂದುಬಣ್ಣದ ಕೂದಲನ್ನು ಹೊಂದಿದ, ಕಟ್ಟುಮಸ್ತಾದ ಶರೀರದ ಆತ ಸುಂದರ ಯುವಕ. ಆದರೆ ಬುದ್ದಿವಂತ ಹಾಗೂ ಆದರ್ಶಗಳ ಕನಸುಗಳನ್ನೆ ಹೊತ್ತ ಸೇಂಟ್ ಪಿಟರ್‍ಸಬರ್ಗನ ೨೩ ವರ್ಷದ ಕಾನೂನು ವಿದ್ಯಾರ್ಥಿ. ಆದರೆ ಬಡವ. ಕ್ರೂರ ಬಡತನದಿಂದ ಬಸವಳಿದಿದ್ದಾನೆ ಆತ. ಬಡತನ ಆತನ ಬದುಕಿನ ಸಂತೋಷವನ್ನು ಕಬಳಿಸಿದೆ. ಆತನ ಮನೆ ಪರಿಸ್ಥಿತಿ ಸರಿಯಿಲ್ಲ. ತನ್ನ ತಾಯಿ Pulcheria ಹಾಗೂ ತಂಗಿ Dounia ರೊಂದಿಗೆ ವಾಸಿಸುವ ಆತನ ಮನೆ ಸಣ್ಣ ಶವಪೆಟ್ಟಿಗೆಗೆ ಸಮವಾಗಿದೆ. ಅಲ್ಲಿಯೇ ತನ್ನ ಹೊಸ ಪೂರ್ವ ನಿರ್ಧರಿತ ಯೋಚನೆಯಿಂದ ಪ್ರೇರಿತನಾದ ಆತ ತಪ್ಪೊಂದನ್ನು ಮಾಡುತ್ತಾನೆ. ಆ ವೃದ್ಧ ಗಿರವಿಗಾರ್ತಿಯ ಕೊಲೆಗೆ ಸಂಚು ಮಾಡುತ್ತಾನೆ. ಅದಕ್ಕಾಗಿ ಕಾಯುತ್ತಿರುವಾಗಲೇ ಆ ಸಂದರ್ಭ ಒದಗಿ ಬರಲು ಗಿರವಿಗಾರ್ತಿ ಹಾಗೂ ಆಕಸ್ಮಿಕವಾಗಿ ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸುವ ಕೃತ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಸರಳ ಸ್ವಭಾವದ ಆಕೆಯ ಸಹೋದರಿಯನ್ನು ಕೊಲೆ ಮಾಡಬೇಕಾಗಿ ಬರುತ್ತದೆ. ಕೆಲವು ಬಂಗಾರದ ಆಭರಣಗಳನ್ನು ದೋಚಿ ಹೋಗುತ್ತಾನೆ. ಆದರೆ ಸ್ವಲ್ಪದಿನಗಳಲ್ಲಿ ಪೋಲಿಸರಿಂದ ಕರೆಬರುತ್ತಲೂ ಆತ ವಿಹ್ವಲಿತನಾಗುತ್ತಾನೆ. ತನ್ನ ಅಪರಾಧದ ಸುಳಿವು ಸಿಕ್ಕಿ ಮುಂದಿನ ಪರಿಣಾಮಗಳ ನೆನೆದು ಭಯಗೊಳ್ಳುತ್ತಾನೆ. ಅದರೆ ಅದು ಆತನ ಬಾಡಿಗೆಗಾರ್ತಿಯ ಪಿರ್ಯಾದು ಎಂದು ತಿಳಿದಾಗ ಅತಿಯಾದ ನಿರುಮ್ಮಳತೆಯನ್ನು ಪ್ರದರ್ಶಿಸಿ ಪೋಲಿಸರು ಆತನ ಮೇಲೆ ಶಂಕೆಪಡುವಂತೆ ಮಾಡುತ್ತಾನೆ. ಮನೆಗೆ ವಾಪಸ್ಸಾಗುವ ಆತ ಅತಿಯಾದ ಮಾನಸಿಕ ಒತ್ತಡವೋ ತಳಮಳದ ಕಾರಣವೋ ಜ್ವರಕ್ಕೆ ಹಾಸಿಗೆ ಹಿಡಿಯುತ್ತಾನೆ. ಆತನ ತಪಾಸಣೆಗೆ ಬಂದ ವೈದ್ಯರು ಅವನ ವರ್ತನೆ ನೋಡಿ ಸಂಶಯ ಪಡುತ್ತಾರೆ.

ಹೀಗೆ ಕಾದಂಬರಿಕಾರ ನಾಯಕನ ಪಾತ್ರದ ದ್ವಂದ್ವ ತುಮುಲದ ವ್ಯಕ್ತಿತ್ವವನ್ನು ಅದ್ವಿತೀಯ ಎನ್ನುವಂತೆ ಚಿತ್ರಿಸಿದ್ದಾರೆ. ಮಾನಸಿಕ ಗೊಂದಕ್ಕೆ ಒಳಗಾದ ಆತ ತಪ್ಪಿಗೆ ಸರಿದಾರಿ ಹುಡುಕಹೋಗುತ್ತಾನೆ. ಹೀಗೆ ದಾರಿಯಲ್ಲಿ ಹೆಂಗಸೊಬ್ಬಳ ಆತ್ಮಹತ್ಯೆಯ ಪ್ರಯತ್ನ ನೋಡಿ ಭೀತಿಗೆ ಒಳಗಾಗುತ್ತಾನೆ. ನೇರವಾಗಿ ಪೋಲಿಸರಲ್ಲಿಗೆ ಹೋಗಿ ತನ್ನ ತಪ್ಪನ್ನು ನೀವೇದಿಸಿಕೊಳ್ಳಬೇಕೆಂದು ಕೊಂಡಾಗಲೇ ಗೆಳೆಯನೊಬ್ಬ ಅಫಘಾತದಲ್ಲಿ ಮಡಿದ ಸುದ್ದಿ ತಿಳಿದು ಆತನ ಪತ್ನಿಗೆ ಕಷ್ಟಕಾಲಕ್ಕೆಂದು ತನ್ನ ತಾಯಿ ನೀಡಿದ ಹಣವನ್ನು ನೀಡುತ್ತಾನೆ. ಮನೆಗೆ ಬರುತ್ತಲೂ ತಾಯಿ ಮತ್ತು ತಂಗಿಯರನ್ನು ಎದುರಿಸಲಾಗದೇ ಗೆಳೆಯ ರುಜುಮಿಹಿನ್‌ನಲ್ಲಿ ಅವರನ್ನು ನೋಡಿಕೊಳ್ಳುವಂತೆ ವಿನಂತಿಸುತ್ತಾನೆ. ಸಹಜವಾಗೇ ಗೆಳೆಯ ರುಜುಮಿಹಿನ್‌ಗೆ ರೊಸ್ಕೊಲ್ನಿಕೊವ್‌ನ ತಂಗಿ ಡೌನಿಯಾಳ ಮೇಲೆ ಪ್ರೇಮ ಉಂಟಾಗುತ್ತದೆ. ಆದರೆ ಅದಾಗಲೇ ಆಕೆಗೆ Luzhin ನೊಂದಿಗೆ ನಿಶ್ಚಿತಾರ್ಥವಾಗಿರುತ್ತದೆ. ಆದರೆ ಅದಾಕೆಗೆ ಇಷ್ಟವಿರುವುದಿಲ್ಲ.

ರೊಸ್ಕೊಲ್ನಿಕೊವ್‌ನ ತಂಗಿ ಡೌನಿಯಾಳ ಮೊದಲಿನ ನೌಕರಿದಾತ Svidrigailov. ಆತ ರೊಸ್ಕೊಲ್ನಿಕೊವ್‌ನಿಂತ ತದ್ವಿರುದ್ದ ವ್ಯಕ್ತಿತ್ವದ ವ್ಯಕ್ತಿ. ಆತನ ಒಂದೇ ಆಶಯವೆಂದರೆ ತನ್ನೆಲ್ಲ ಬದುಕಿನ ಬಯಕೆಗಳ ಹೇಗಾದರೂ ಪೂರೈಸಿಕೊಳ್ಳುವ ಮಾರ್ಗದಲ್ಲಿ ಅಸಹಜಮಾರ್‍ಗಗಳನ್ನಾದರೂ ಗಮಿಸುವ ಆತುರತೆ. ಹೆಣ್ಣುಗಳನ್ನು ಬಣ್ಣದ ಚಿಟ್ಟೆಗಳೆಂದು ಬಗೆದು ಚೆಲ್ಲಾಟವಾಡಿದ ಆತ ಬಯಸಿದ್ದನ್ನು ಪಡೆದೆ ತೀರಬೇಕೆಂಬ ಹಂಬಲದಲ್ಲಿ. ಈಗಾಗಲೇ Luzhinನೊಂದಿಗೆ ವಿವಾಹ ನಿಶ್ಚಯವಾದ ಡೌನಿಯಾಳನ್ನು ಆರಾಧಿಸತೊಡಗುತ್ತಾನೆ. ಡೌನಿಯಾ ಮನೆಯ ಪರಿಸ್ಥಿತಿಗೋಸ್ಕರ ಲುಜಿಹಿನ್‌ನೊಂದಿಗೆ ವಿವಾಹಕ್ಕೆ ಒಪ್ಪುತ್ತಾಳೆ. ಆದರೆ ಆಕೆಯ ನಿಜವಾದ ಪ್ರೇಮ ರುಜುಮಿಹಿನ್ ನಲ್ಲಿ. ಕೊನೆಗೂ ಆಕೆ ಸಿಗದ ಕಾರಣ ತನ್ನನ್ನೆ ಕೊಂದುಕೊಳ್ಳಲು ಹೇಸದ ವ್ಯಕ್ತಿಯಾಗಿ ನಿಲ್ಲುತ್ತಾನೆ. ಅದಮ್ಯ ಜೀವನೋತ್ಸಾಹ, ಆದರೆ ಕುಸಿತಗೊಂಡ ನೈತಿಕ ಬದುಕು, ಬಯಸಿದ್ದು ಸಿಗದಾಗ ಅದೇ ಭಂಢತನದಿಂದ ಅಸಹಜತೆ ಪ್ರದರ್ಶಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಆತ ಎಲ್ಲಾ ರೀತಿಯಿಂದಲೂ ಅಂತಹ ದುಷ್ಟನಾಗಿ ಬಿಂಬಿಸಲ್ಪಟ್ಟಿಲ್ಲ. ಸೋನಿಯಾಳನ್ನು ವೈಶ್ಯಾ ಜಗತ್ತಿನಿಂದ ಹೊರತರಲು ಮೂರು ಸಾವಿರ ರೂಬಲ್ಗಳನ್ನು ನೀಡುವುದು. ಆತನ ಇನ್ನೊಂದು ಮುಖದ ಪರಿಚಯ ನೀಡುತ್ತದೆ. ಹೀಗೆ ಸಮಾಜದ ವಿವಿಧ ವ್ಯಕ್ತಿತ್ವದ ಪರಿಚಯವನ್ನು ಪಾತ್ರಗಳು ಮಾಡಿಸುತ್ತದೆ ಕಾದಂಬರಿ.

ಸ್ವಭಾವತಃ ಶಾಂತ ಸದ್ಗುಣಿಯಾದ ರೊಸ್ಕೊಲ್ನಿಕೊವ್ ದ್ವಂದ್ವ ವ್ಯಕ್ತಿತ್ವಕ್ಕೆ ಸಾಕ್ಷಿ. ಆತ ಆಗಾಗ ತನ್ನನ್ನು ಸೂಪರ್ ಮ್ಯಾನ್ ಎಂದುಕೊಳ್ಳುತ್ತಾನೆ. ಆತ ನೀಚನಲ್ಲ. ಕಟುಕನಲ್ಲ ಆದರೆ ಜಗತ್ತನ್ನು ಸುಧಾರಿಸುವ ಆದರ್ಶಗಳ ಕಾರಣವೋ ಆತ ಆ ವೃದ್ಧ ಗಿರವಿಗಾರ್ತಿಯನ್ನು ಕೊಲೆ ಮಾಡುತ್ತಾನೆ. ಇದಕ್ಕೆ ಕಾರಣ ಆತನ ಬಡತನ ಎಂದು ಅನ್ನಿಸಿದರೂ ಆಂತರಿಕವಾಗಿ ಆತನಲ್ಲಿ ಅರ್ಥೈಸಿಕೊಳ್ಳಲಾಗದ ಮಾನಸಿಕ ತುಮುಲಗಳು ಕಂಡುಬರುತ್ತವೆ.

ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರ ಸೊನಿಯಾ. ಕುಡುಕನಾದ ತಂದೆ ಮಾರ್‍ಮೆಲಡೊವ್ ಸಂಸಾರ ಸರಿಯಾಗಿ ನಿಭಾಯಿಸದೇ ಇದ್ದಾಗ ತನ್ನ ಮಲತಾಯಿಯ ಬದುಕಿಗೆ ಬೆಳಕಾಗಿ ತನ್ನ ಕನಸುಗಳನ್ನು ಕೊಂದುಕೊಂಡು ವೈಶ್ಯಾವೃತ್ತಿ ಮಾಡುತ್ತ ಬದುಕುಸಾಗಿಸುವ ಸೋನಿಯಾ ಆದರ್ಶದ ಪರಿಕಲ್ಪನೆಗೆ ಜೀವಂತ ಶಿಲ್ಪದಂತೆ ನಿಲ್ಲುತ್ತಾಳೆ. ನಾಯಕನಿಗೆ ತನ್ನೆಲ್ಲ ಬಳಲಿಕೆಗೆ ಆಕೆ ಪರಿಹಾರವಾಗಿ ಕಾಣುತ್ತಾಳೆ. ಎಲ್ಲ ಮಾನವ ಶೋಷಣೆಗೆ ಆಕೆ ಒಂದು ಸಂಕೇತದಂತೆ ನಿಲ್ಲುತ್ತಾಳೆ. ಆಕೆಯಲ್ಲಿ ತನ್ನ ಅಪರಾಧ ನಿವೇದಿಸುವ ರೊಸ್ಕೆಲ್ನಿಕೊವ್ ಅವಳ ಸಲಹೆಯಂತೆ ಪೋಲಿಸರಿಗೆ ಶರಣಾಗುತ್ತಾನೆ. ಅವಳ ಪ್ರಭಾವದಿಂದ ಆತ ಸಂಪೂರ್ಣ ಹೊಸ ವ್ಯಕ್ತಿಯಾಗುತ್ತಾನೆ, ಸೋನಿಯಾ ಹಾಗೂ ತನ್ನ ತಾಯಿ ತಂಗಿಯರ ಬಗ್ಗೆ ವಾತ್ಸಲ್ಯಭರಿತನಾಗುತ್ತಾನೆ. ಮುಂದೆ ಐದು ತಿಂಗಳ ಶಿಕ್ಷೆಯನುಭವಿಸಿ ಆತನನ್ನು ಸೈಬಿರಿಯಾಕ್ಕೆ ಗಡಿಪಾರು ಮಾಡಲಾಗುತ್ತದೆ. ಅಲ್ಲಿ ಸೊನಿಯಾ ಆತನನ್ನು ಹಿಂಬಾಲಿಸುತ್ತಾಳೆ. ಸೋನಿಯಾ ಮತ್ತು ರೊಸ್ಕೊಲ್ನಿಕೊವ್ ಮುಂದಿನ ಬದುಕಿನ ಹೊಸ ರಾಗಕ್ಕೆ ಕನಸುಕಾಣುತ್ತಾರೆ. ಹಾಗೆ ಡೌನಿಯಾ ಮತ್ತು ಗೆಳೆಯ ರುಜುಮಿಹಿನ್ ವಿವಾಹವಾಗುತ್ತಾರೆ. ಹೊಸ ಪ್ರಾರಂಭದ ಆಶಯದೊಂದಿಗೆ ಕಾದಂಬರಿ ವಿರಮಿಸುತ್ತದೆ.

ನಾಯಕ ರೊಸ್ಕೊಲ್ನಕೊವ್‌ನ ಮೂಲಕ ಅಪರಾಧ ಮತ್ತು ಶಿಕ್ಷೆಯ ಸಾಂಗತ್ಯವನ್ನು ನಿರೂಪಿಸುತ್ತಲೇ ಕಾದಂಬರಿ ಅನುಭಾವಿಕ ವಿಚಾರಗಳನ್ನು ಅಮೂರ್ತವಾಗಿ ಪಡಿಮೂಡಿಸುತ್ತಲೇ ಬರುವುದು. ಮಾನಸಿಕ ದ್ವಂದ್ವ, ತಳಮಳ ಜಿಗುಪ್ಸೆ, ಸುಪ್ತ ಮನಸ್ಸು ಅಥವಾ ಆತ್ಮಪ್ರಜ್ಷೆಯ ಅವಲೋಕನ ಇವೆಲ್ಲವನ್ನೂ ಒಳಗೊಳ್ಳುತ್ತಲೇ ಸಾಮಾಜಿಕ ಸಂದೇಶವನ್ನು ನೀಡುವ ಕಾದಂಬರಿ ಮನೋವೈಜ್ಞಾನಿಕ ನೆಲೆಗಟ್ಟಿನ ಮೇಲೂ ತಿಂಗಳ ಬೆಳಕನ್ನು ಸುರಿಸುತ್ತದೆ.

ಡಿಸೆಂಬರ ೩೦, ೧೮೨೧ರಲ್ಲಿ ಜನಿಸಿದ ೧೯ನೇ ಶತಮಾನದ ಅದ್ವಿತೀಯ ಕಾದಂಬರಿಕಾರನಾದ ದೋಸ್ತೋವಸ್ಕಿ ೧೮೮೧ರಲ್ಲಿ ಮರಣಿಸಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರವಿನ ಮನವೆ!
Next post ನಾವು ಬಡವರು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…