ನಾವು ಮುಟ್ಟಿ ನಿಂತ ಮರದ
ಹೂವು ಉದುರಿತು
ನಾವು ನಡೆದ ಹಾದಿ ಹಸಿರು
ಉರಿದು ಹೋಯಿತು
ನಾವು ಕರೆದ ಕೆಚ್ಚಲಲ್ಲಿ
ಹಾಲು ಬತ್ತಿತು
ನಾವು ಹುಡುಕಿ ಕಂಡ ಹೃದಯ
ರಾಗ ಸತ್ತಿತು
ಸೋತ ಮುಖದ ಮನೆಗೆ ಬಳಿಯೆ
ಸುಣ್ಣ ಸಿಡಿಯಿತು
ಬಡವರೆಂದು, ಕಡೆದ ಕಲ್ಲು
ಕಣ್ಣ ಕಳೆಯಿತು
ಹಸಿರು, ಕೆಂಪು, ಬಟ್ಟಬಯಲು
ಎಲ್ಲ ಒಂದೇ ಬಣ್ಣವು
ಮಣ್ಣ ಹಾದಿ, ಟಾರು ಬೀದಿ
ಕಪ್ಪುಗಟ್ಟಿದ ತಂತಿಯು
ನಿಂತ ನೆಲದ ಬಿರುಕಿನಲ್ಲಿ
ಸುಳಿದಾಡುವ ಉಸಿರು
ಭೂಕಂಪದ ನಡುಕದಲ್ಲು
ಸಾವಿಲ್ಲದ ಹೆಸರು
*****