ಗಝಲ್
೧
ಅವನಿಗಾಗಿಯೆ ಬವಣಿಯೊಂದುತ
ಎದೆಯ ಕುದಿಯೊಳು ಕಾಯುತ,
ಸವಿಯ ಕಾಣದೆ ಬಾಳಿನಲಿ ಬಿಸು-
ಸುಯಿಲ ಬೇಗೆಗೆ ಬೇಯುತ
ಸವೆಯುತಿಹೆ ನಾನಿಲ್ಲಿ….!
ಸವೆಯುತಿಹೆ ನಾನಿಲ್ಲಿ-ಕತ್ತಲು-
ಕವಿದ ಕಿರುಮನೆಯಲ್ಲಿ.
೨
ಇಲ್ಲಿ ಕತ್ತಲು ಕವಿದ ಕಿರುಮನೆ-
ಯಲ್ಲಿ ಸುಮ್ಮನೆ ಕುಳಿತರೆ,
ನಲ್ಲ ಬಂದೆನ್ನನ್ನು ತಾನೆ-
ಲ್ಲೆಲ್ಲಿಯೂ ಶೋಧಿಸಿದರೆ….!
ಹೊರಗೆ ಇರದಿರೆ ನಾನು….
ಹೊರಗೆ ಇರದಿರೆ ನಾನು-ಹಾಗೆಯೆ-
ಹೊರಟು ಬಿಡಬಹುದೇನು ?!
೩
ನಾನು ಈ ತಾಣದೊಳು ಕುಳಿತುದು
ಜಾಣನಿಗೆ ಗೊತ್ತಾಗಿ,
ಕೋಣೆಯಲ್ಲಿಯೆ ಬಂದರೀ ಕರಿ-
ಗತ್ತಲೆಯು ಒತ್ತಾಗಿ,
ಅವನ ಸಿರಿಮೊಗವನ್ನು ….
ಅವನ ಸಿರಿಮೊಗವನ್ನು-ಮರೆಯಿಸಿ-
ಸವಿಗೆಡಿಸದಿಹುದೇನು ?
೪
ಇಲ್ಲಿ ಬರಿ ಬಿದ್ದಿದ್ದರೇನದು !
ನಲ್ಲ ಬಂದರೆ ಕಾಂಬೆನೇ !
ಬೆಲ್ಲದಂತಹ ಮೊದಲ ನೋಟವ
ಹುಲ್ಲನಾಗಿಸಿಕೊಂಬೆನೆ !
ಅದಕೆ ನೆಲೆಮನೆಗೇರಿ….
ಅದಕೆ ನೆಲೆಮನೆಗೇರಿ-ಹೋಗುವೆ-
ತಿಂಗಳಂಗಳ ಸಾರಿ.
೫
ಹಗಲು ಇರುಳೂ ನಗುವ ಬೆಳಕದು
ಜಗಜಗಿಸುತಿಹುದಲ್ಲಿ,
ಬಿಗಿದು ಕಂಗಳ ಮುಗಿಸುವಾ ಕ-
ತ್ತಲೆಗೆ ನೆಲೆಯಿಲ್ಲಲ್ಲಿ,
ಅಲ್ಲಿ ಬಂದರೆ ಚೆನ್ನ ….
ಅಲ್ಲಿ ಬಂದರೆ ಚೆನ್ನ -ಅವನೊಳೆ-
ನಿಲ್ಲಿಸುವೆನೀ ಕಣ್ಣ!
ನಿಲ್ಲಿಸುವೆನೀ ಕಣ್ಣ….
ನಿಲ್ಲಿಸುವೆನೀ ಕಣ್ಣ-ನಾತಗೆ-
ಸಲ್ಲಿಸುವೆ ನನ್ನನ್ನ !
*****