ಅಗ್ನಿರಾಜ:
ಬೆಂಕಿ ನಿಲುವಂಗಿ ತೊಟ್ಟುಕೊಂಡು ಬುವಿಯಿಂದ ಬಂದ ಜೀವ
ಸಪ್ತಸ್ವರ್‍ಗಗಳ ಸುಪ್ತ ಮೌನವನು ದಾಟಿಕೊಂಡು ಯಾವ?
ನೀನು ಏನು ಅಧ್ಯಾತ್ಮದೌರಸನೊ? ಅಭವ ಸ್ವಯಂಭವನು.
ಪರಂಧಾಮದಾ ಅತಿಥಿಯೇನು? ಪೌರಾಣ ಕಾಲದವನು.
ಮನುಕುಲ ದೂತ:
ಮಾನವ್ಯಕುಲದ ಹರಿಕಾರ ನಾನು, ಆಂತರ್‍ಯದಾತ್ಮಸಾನು;
ಇರುಳನ್ನು ಕೊಡಹಿ ಸಾವನ್ನೆ ತಡೆದ ಪ್ರಪ್ರಥಮ ಪ್ರಮಥ ನಾನು;
ಅಮೃತಬಿಂಬ ಪ್ರತಿಬಿಂಬಿಸಿರುವ ಸೌಂದರ್‍ಯಲಕ್ಷ್ಮಿಸೂನು.
ಅಮರ ಜ್ಯೋತಿ ಮೃಗವೇಧಕಾಗಿ ಬಂದಂಥ ವ್ಯಾಧಶಿವನು.
ಅಗ್ನಿ ರಾಜ:
ತನ್ನ ಶಕ್ತಿಯಲಿ ನಿನ್ನ ಸುತ್ತಿರುವುದಾವ ಬೆಂಕಿ ಉರಿಯು?
ಪಾಲಿಸುತ್ತಿರೆಯು ಬರ್‍ಚಿ ನಾಲಗೆಯ ಚಾಚಿ ಕಾಯುತಿರೆಯು
ಸನಾತನದ ಸತ್ಕಾಲದಲ್ಲಿ ಸಂಚರಿಸುತ್ತಿಲ್ಲಿ ಬಂದೆ
ಕಲ್ಪನಾತೀತವಾದ ನವಕಿರಣದೊಂದು ಅಂಶವೆಂದೆ?
ಮನುಕುಲ ದೂತ:
ನವೋನವದ ಜಾಗೃತಿಯಲೆದ್ದ ಜೀವಾಗ್ನಿ ತೋಚುತಿಹುದು;
ಮರಣ ಸೀಳಿ ಉದ್ಭವಿಸಿ ಮೇಲೆ ಶಾಶ್ವತಕೆ ಚಾಚುತಿಹುದು;
ಯಜ್ಞ ಪಕ್ಷಿ ಗುರಿಯತ್ತ ಹಾರಿ ಶಿಖೆ ಏರಿ ಹರಿಯುತಿಹುದು;
ಮಾನವ್ಯದಲ್ಲಿ ಮಲಗಿದ್ದು ಎದ್ದ ದೇವತ್ವ ಉರಿಯುತಿಹುದು.
ಅಗ್ನಿರಾಜ:
ಭಂಗುರದ ಹಂಗು ಹರಕೊಂಡು ಬಂದೆ, ಓ ಮಗುವೆ ಏನೋ ಬೇಕೊ?
ಮುಕ್ತನಾಗಿ ಸಾವಿರದ ಸಯ್ತಿನಲಿ ಗುಮ್ಮನಿಹುದೆ? ಸಾಕೋ.
ಏನು ಬ್ರಹ್ಮ ಸಂಮುಖಕೆ ಸಾಕ್ಷಿಯಾಗಿರುವೆ ಎನುವೆ ನೀನು
ಅಸ್ಪರ್‍ಶ ಯೋಗ ನಿರ್‍ವಾಣದಲ್ಲಿ ಲಯವಾಗಬೇಕು ಏನು?
ಮನುಕುಲ ದೂತ:
ಪಾತಾಳಖಾತದಜ್ಞಾನದಲ್ಲು ಹೊತ್ತಿರಲಿ ದಿವ್ಯದೀಪ್ತಿ.
ನರಕಯಾತನೆಯ ಜೀವದಲ್ಲಿ ತಾನಿರಲಿ ದೇವಶಕ್ತಿ.
ಮೂರುಕಾಲಕೂ ಮೀರಿ ದುಃಖಿಸದ ಸುಖವು ಭೂಮಿಗೆಂದೆ
ಅಕ್ಷುಬ್ಧವಾದ ಹದಗೆಡದ ಶಾಂತಿ ಮಾನವಗೆ ಬೇಡಬಂದೆ.
*****