ತಳದಲ್ಲಿದ್ದವರು; ನಾವು ಬೂದಿಯಲೆದ್ದವರು
ಕತ್ತಲೆ ಚರಿತೆಯ ಬೆತ್ತಲೆ ಮಾಡುವ
ಕನಸನು ಹೊತ್ತವರು | ನಾವು
ಕನಸನು ಹೊತ್ತವರು ||
ನೋವನು ಉಂಡವರು, ಉಂಡು ಮೌನವ ಹೊದ್ದವರು
ಅಕ್ಷರ ದೂರದ ಕತ್ತಲೆ ಗವಿಯಲಿ
ಬದುಕನು ಕಳೆದವರು | ಬೆಳಕ
ಕಾಣದೆ ಹೋದವರು
ಬದುಕನು ಕೆತ್ತವರು; ಬೆನ್ನಲಿ ಮಹಲನು ಹೊತ್ತವರು
ಮನುಕುಲ ಕತೆಯಲಿ ವೈಭವದಡಿಯಲಿ
ಗೆದ್ದಲು ತಿಂದವರು | ಗುರುತು
ಸಿಗದೇ ಹೋದವರು
ಭೂಮಿಯ ಹೊತ್ತವರು; ಈಗ ಭೂಮಿಯ ಬಿಚ್ಚುವೆವು
ಸಮುದ್ರವಾದವರು; ಈಗ ಸಮುದ್ರ ಸೀಳುವೆವು
ಕೆಂಪು ಸೂರ್‍ಯನ ಉದಯದ ಊರಲಿ
ಕಿರಣಗಳಾಗುವೆವು | ಬೆಳಕಿನ
ರಂಗೋಲಿ ಬರೆಯುವೆವು
*****