ನನ್ನಾಕೆ ಊರಿಗೆ ಹೋಗಿ
ಒಂದೆರಡು ದಿನಗಳು ಕಳೆಯೆ
ನನ್ನೊಳಗಿನ ಕಾಮಣ್ಣ ಮಿಸುಗಾಡ ತೊಡಗಿದನು
ಏನು ತಿನ್ನಲಿ?
ಏನು ಬಿಡಲೆಂದು
ಆಕರಿಸ ತೊಡಗಿದನು
ಹಾಳಾದ ಕನಸುಗಳು
ಒಳಗಿನ ಮನಸನು ಹಿಡಿದ
ಕ್ಷ-ಕಿರಣ ಚಿತ್ರಗಳು.
ಇಲುಕಿಲ್ಲದ ಹಾಗೆ ಉಳುಕು ವಕ್ರನೆಲ್ಲಾ
ಬಯಲಿಗೆಳೆದು ಬಿಡುವ ಸತ್ಯ ಕಥಾನಕಗಳು
ಹೀಗಾಯಿತು ನೋಡಿ
ನನಗೊಂದು ಕನಸು ಬಿತ್ತು-
ನನ್ನಾಕೆ ಊರಿಗೆ ಹೋಗೋ
ಅದರಿದರ ಗಡಿ ಬಿಡಿಯಲ್ಲಿ
ಕೈ ಎಸಳ ಮರೆತು ಒಯ್ದಂತೆ
ನಾನು, ಹಿಂತಿರುಗಿ ಬಂದಾಗ
ಮನೆಗೆ ಬೀಗ ಹಾಕಿದ್ದಂತೆ
ನೆರೆಮನೆಯವರಲ್ಲಿ ಆಶ್ರಯ ಪಡೆದಿದ್ದಂತೆ.
ಹಿಂತಿರುಗಿ ಬಂದಾಗವಳು
ದೊಡ್ಡ ಹಗರಣ ಮಾಡಿ
‘ನಿನಗಾವನೋ ಗುರಿಯಿದ್ದ
ಅವನ ಸಂಗ, ಸವಿಯಲ್ಲಿ
ನಾನೆಲ್ಲಿ ಜ್ಞಾಪಕ ಬರಬೇಕಲ್ಲ’ ಎಂದೆಲ್ಲಾ ಹಾರಾಡಿದ ಹಾಗೆ.
ಬೆಳಗಾಗಿ ಇದು ನೆನಪಿಗೆ ಬಂದು
ಹೇಸಿಗೆ ಮುಟ್ಟಿದಂತಾಯಿತು.
ಹಿಂತಿರುಗಿ ಬಂದಾಗವಳಿಗೆ
ಒಂದೂ ಬಿಡದಂತೆ ಎಲ್ಲಾ ತಿಳಿಸಲೇಬೇಕು
ಕೇಳುತ್ತ ಅವಳು ಬಿದ್ದು ಬಿದ್ದು ನಗುವಂತ ಚೆಲುವನ್ನು ನೋಡಬೇಕು.
ಮತ್ತೆ ಹೇಳಿಬಿಡ ಬೇಕು-
ಇನ್ನೆಂದೂ ನೀನು ನನ್ನ ಒಂಟಿಯಾಗಿ ಬಿಟ್ಟಿರಬೇಡ
ನನ್ನೇನ್ನೇನೋ ಕಲ್ಪನೆಯಲ್ಲಿ
ಹಾಳಾದ ಕೊರೆತೆಯು
ಹೀಗೊಂದು ಚಿತ್ರವ ಬಿಡಿಸೋದು ಬೇಡ.
ಇದೆಲ್ಲಾ ಏನೂ ಆಗುತ್ತಿರಲಿಲ್ಲಾರಿ
ಎಲ್ಲಾ ಖಾಲಿ ಗಾದಿಯ ಕೈವಾಡ
ನಾನು ನನ್ನೆಲ್ಲಾ ದೇವಿಯರ ಧೇನಿಸಿ
ಉರುಳಾಡಿ, ಹೊರಳಾಡಿದ್ದರ ನಿಚ್ಚಳ ಪವಾಡ ಕಣ್ರಿ
*****