ಈ ಮೈಯೆ ಒಮ್ಮೆ ಇಡಿ ವಿಶ್ವವೆಂದು ನನಗೇಕೊ ತೋರುತಿತ್ತು.
ಈಗ ಜೀವದೀ ಹೊಟ್ಟೆ ಪೂರ್ತಿ ಎನಿಸುವದು ಎರಡೆ ತುತ್ತು.
ಜಗದ್ವ್ಯಾಡ ಸಂಚಲನಕೀಗ ಇದು ಸಣ್ಣದೊಂದು ಸಂಚಿ
ಬೃಹದ್ಭೂಮಿಯಲಿ ಬೃಹತ್ತರದ ಆದರ್ಶಕೆಂದು ಹಂಚಿ
ಒಪ್ಪಿಡಿಯ ಕವಳ ಏತಕ್ಕೆ ಸಾಕು ಅದು ಮಹಾಸುರದ ಭಿಕ್ಷೆ
ಅನಂತತೆಯ ಸಂತತಿಯನುಂಡು ತೀರಿತು, ಆ ಬುಭುಕ್ಷೆ;
ಆ ಬುಭೂಕ್ಷೆ ಒಳಮಡಿಕೆಗಳಲಿ ತುಷ್ಣೀ೦ಭಾವವಾಗಿ
ದೇವರಾಯಸವು ಆಗಿ ಇಹುದು ಶಾಶ್ವತದ ಠಾವಿಗಾಗಿ.
ಅದರ ಇದಿರು ಮುಗಿದಿರದ ಹೊತ್ತು-ಗೊತ್ತೆಲ್ಲ ಮುಗಿಲ ತಬ್ಬಿ
ಮಾಡಿದ್ದೆ ಮಾಟ ಮಟ್ಟಿದ್ದೆ ಚಿನ್ನ ಎನುವಂತೆ ಘಟನೆ ಹಬ್ಬಿ
ಹೃದಯವನು ಹೊಕ್ಕು ಬ್ರಹ್ಮಾಂಡದುಕ್ಕು ಉಕ್ಕುಕ್ಕು ಮಧುರಪೂರಾ
ಅದರ ಮನವು ಹಾಕುವದು ಎಣಿಕೆ ಧ್ರುವೆನೆಡೆಗೆ ದೂರ ದೂರಾ.
ಇಟುಕುಮನೆಯ ವಾಮನನು ಬೆಳೆದ ಹೇಗೋ – ವಿಶ್ವಯೋಗಿ
ಈ ಪ್ರಪಂಚದೊಡನೊಡನೆ ಸಾಗಿ ವಿಶ್ವಾಕಾರನಾಗಿ.
*****