ಕೆಟ್ಟು ಒಳ್ಳೆಯವನು ಎಂದೆನಿಸಿಕ್ಕೊಳ್ಳುವುದಕಿಂತ
ಪೆಟ್ಟುತಿಂದು ಜಾಣನಾಗುವುದಕ್ಕಿಂತ |
ಹಾಗೆಯೇ ಎನ್ನ ಒಳ್ಳೆಯವನೆಂದೆನಿಸು
ಛೀ…ಥೂ ಎಂದೆನಿಸದೆ ಎನ್ನ ನೀ ಬೆಳೆಸು||
ಕೆಟ್ಟಮೇಲೆ ಬುದ್ಧಿ ಬರುವುದಕ್ಕಿಂತ
ಕೈಸುಟ್ಟಮೇಲೆ ಅರಿವುಮೂಡುವುದಕ್ಕಿಂತ|
ಕೆಡುವ, ಕೈಸುಡುವ ಮೊದಲೇ ನೀನದನ
ತಿಳಿಸೆನ್ನ ದೊರೆಯೇ ಅರಿಯದ ಎನ್ನ ಹರಸೊ ಹರಿಯೇ||
ಕೋಟೆ ಲೂಟಿಯಾದ ಮೇಲೆ ಬಾಗಿಲ ಹಾಕುವುದಕ್ಕಿಂತ|
ಯೌವನ, ಶಕ್ತಿಉಡುಗಿದ ಮೇಲೆ
ತತ್ವ ಸಿದ್ಧಾಂತ ಅರಿಯುವುದಕ್ಕಿಂತ ಯೌವನ,
ಶಕ್ತಿಇರುವಾಗ ನನ್ನಿಂದ ಒಳ್ಳೆಯದ ಮಾಡಿಸು|
ನಿನ್ನ ಭಕ್ತವೃಂದದಲೆನ್ನ ಬೆರೆಸು||
ಕೈಚೆಲ್ಲಿ ಕೂರುವ ಮೊದಲು ನೀ ಕರುಣೆ ತೋರು|
ಕಣ್ಣೀರಲಿ ಕೈತೊಳೆಯುವ ಮುನ್ನವೆ ನೀ ಕಣ್ಣತೆರೆಸು
ಕಾಲ ಗರ್ಭವೆನ್ನ ಹುದುಗಿಸಿಕೊಳ್ಳುವ ಮುನ್ನ
ಕರ್ಮನೀಗಿಸಲಣುವಾಗೆನ್ನ ಬೆಳೆಸಿ ಬಳಸಿ ಕಾಪಾಡು ಕೃಷ್ಣಾ||
*****