೧
ಮನವು ನಿನಗಾಗಿಯೇ ಮೊರೆಯುತಿದೆಯೇ-ಚಿನ್ನ
ನೆನಹು ನಿಡುಸುಯಿಲುಗಳ ಕರೆಯುತಿದೆಯೆ?
ಕನಸು ನಿನ್ನದೆ ಚಿತ್ರ ಬರೆಯುತಿದೆಯೇ-ನಿನ್ನ
ಇನಿದುದನಿ ಕಿವಿಗಳನ್ನು ಕೊರೆಯುತ್ತಿದೆಯೆ!
೨
ತೆಳುದುಟಿಯ ತಿಳಿಜೊಲ್ಲು, ಬಿಳಿಯ ಮೊಳೆವಲ್ಲು – ಆ
ಎಳಗಲ್ಲಗಳ ಚೆಲ್ಲು, ಮೆಲುನಗೆಯ ಸೊಲ್ಲು,
ಎಳಯುತ್ತಲಿಹವು ನನ್ನೊಳಗೆ ನಿನ್ನೊಡನೆಯೇ
ಎಳಗೂಸೆ, ನಿನ್ನೆದುರು ನನ್ನ ಬಲ ಹುಲ್ಲು!
೩
ಕೆಳೆಯ ಬಳ್ಳಿಯ ಮೊಳೆಯು ನೀನೆಂದು ಇದ್ದೆ-ಕಂ-
ಮಲರು ತನಿವಣ್ಣುಗಳ ಬೆಳೆವೆನೆಂದಿದ್ದೆ.
ಅಳಿಯಾಸೆಯಲಿ ಕಾಲ ಸೆಳೆದೊಯ್ಯೆ ತನಗೆಂದು
ಅಳಿದು ಕೆಳೆಯಾಶೆ ನಾ ಕಳವಳದಿ ಬಿದ್ದೆ!
೪
ಸಾಕಾಯಿತೇನೆ ಸವಿಸವಿಯ ಕೂಳು-ನಿನಗೆ
ಬೇಕಾಯಿತೇನೆ ಕಣ್ಣೀರ ಕಾಳು !
ಸಕ್ಕರೆಯ ತನಿವಾಲನೊಕ್ಕರಿಸಿ ಸವುಳುಪ್ಪ-
ನಿಕ್ಕಿರುವ ನೀರ ಬಯಸುವರೆ ಹೇಳು !
೫
ಆಗಸದ ತೊಟ್ಟಿಲಲಿ ತೂಗಾಡಲೆಂದು-ನೀ
ಹೋಗಿರುವೆಯೆನುತ ಬಗೆ ಹೇಳುತಿಹುದು ;
ತೂಗುದೊಟ್ಟಿಲ ಹಗ್ಗವಾಗಬೇಕೆಂದು- ತಾ-
ನೇಗಲೂ ಕರುಳು ಹುರಿಗೊಳ್ಳುತಿಹುದು.
೬
ಎಂದಿನಂದದ ನಗೆಯ ಚೆಂದಮೊಗದಿಂದ-ನೀ
ಬಂದು ಕುಳಿತಿರಲು ತೊಡೆಯಲ್ಲಿ ಕಂದ !
ಒಂದೆ ಸವಿಮುತ್ತಿಡುವೆನೆಂದಿರಲು ಎಚ್ಚತ್ತು
ಕಂದೆರೆಯಲರಿತೆ ಹಾಳ್‌ಗನಸಿನಂದ!
೭
ಎನಿತೊ ಮುತ್ತಿಟ್ಟಿದ್ದೆ, ನಲಿವ ಪಟ್ಟಿದ್ದೆ-ಮೈ-
ಮನಗಳನು ತಣಿವಿನಲಿ ತೇಲಬಿಟ್ಟಿದ್ದೆ;
ಕನಸಿನೀ ಮುತ್ತಿನಾ ಗುಣವೇನೊ! ಎದ್ದಾಗ
ಮನಸು ಮೈ ಮುಳ್‌ಬಲೆಗೆ ಬಿದ್ದ ಹಾಗಿದ್ದೆ.
೮
ಸಂತೆ ಬಯಲಾದಂತೆ ಹೃದಯ ಹಾಳು!- ಹೆರರ
ಸಂತಸದ ಸುಗ್ಗಿಯದು ನನಗೆ ಬೀಳು!
ತಂತಿ ಕಿಳ್ತಿಹ ವೀಣೆಯಂತೆ ಬಾಳು-ಇದರ
ಅಂತವೆಲ್ಲಿದೆ ಮಗುವ ಹೇಳು, ಹೇಳು!
*****