ಪೆರುಮಾಳನ ಕೆಂದಾವರೆ ಅರಳಿದೆ ನಸುನಕ್ಕೆ!
ಹರಿನೀಲದ ಬಾನೊಳಗಿನ ಸಿಂಧೂರದ ಚುಕ್ಕೆ.
ನಲಿವಿನ ನಲಿನವು ತಾನೇ ತಾನಾಗಿಯೆ ಬಿಚ್ಚೆ
ಏಳ್ಮಡಿ ಧಾಳಾಧೂಳಿಯ ಏಳ್ಳಣ್ಣದ ಕಿಚ್ಚೇ
ಕಾರಣತನುವಿನ ಕೃತಿಯೇ ಸವಿಯೇ ಹರಿವರಿಯೇ
ಮನುಹೃದಯದಿ ಚಿಗಿ ನಿಗಿನಿಗಿ ಜಿಗಿ ಮೇಲಕ್ಕುರಿಯೇ
ಹೆಸರಾಚೆಯ ಭಾವದ ಹೂ ಸುರಿಸಿದ ಹಿರಿ ಹಿಗ್ಗೇ
ಬೆಡಗಿನ ನುಡಿ ಮೌನದ ಕುಡಿಮುಗುಳೇ ಮುಮ್ಮೊಗ್ಗೇ.
ಪೆರುಮಾಳನ ಕೆಂದಾವರೆ ಬೆಳಕಿನ ಚೆಂದಿರುಳೇ
ಬಾಳಿನ ತಿರುಕೋಡೊಳಗಿನ ಬಲು ಅರಿವಿನ ಅರುಳೇ
ಕಗ್ಗೊನೆಗಾಣ್ಕೆಯ ಒಳಗಿನ ಅಕಲಂಕಿತ ಕೆಚ್ಚೇ
ನೆಲದೆದೆಯಲಿ ನೆಲೆಮಾಡೆಲೆ ಹೊನ್‌ಹೂ ಮನಮೆಚ್ಚೇ
ಗುಟ್ಟೇ ಹುಟ್ಟೇ ಮೊಟ್ಟೆಯೆ ಹುರುಳಡಗಿದ ಹೆಸರೇ
ನಿಷ್ಕಾಲದ ನಡುನೆತ್ತಿಯ ನೇಸರೆ ಹೊಂಬಸಿರೇ
ದಿವ್ಯಮುಹೂರ್ತದ ಅತಿಥಿಯೆ ಕಾದಿರುವದು ಈಗ
ಮೂರಾಳದ ಕತ್ತಲೆ ಅದ ಬೆಳಗಿಸು ಬಾ ಬೇಗ.
ಪೆರುಮಾಳನ ಕೆಂದಾವರೆ ರತ್ನಪ್ರಭೆ ಬೀರೆ.
ಇರುಳಿಂಗಿತು ಮರ್ತ್ಯರ ಸಂಕಲ್ಪವೆ ಹೊತ್ತುತಿರೆ
ಆನಂತ್ಯದ ತಪಚಿತ್ರಿತ ಚೀನಾಂಶುಕನಾಗೆ
ದಿವ್ಯಪ್ರತಾಪದ ಮಾಣಿಕ್ಯದ ಮೂರ್ತಿಯ ಹಾಗೆ
ಕಾರ್ಮೋಡದ ತಿಳಿನೀರಲಿ ಕೆಮ್ಮಿಂಚುರಿವಂತೆ
ಡಾಳಿಂಬರ ಮೈದುಂಬಿರೆ ತಾನೇ ಬಿರಿವಂತೆ
ನಿನ್ನಾ ಹಂಚಿಕೆ ಮಾಟಕೆ ಬೆಳಗಾದೊಲು ಹಣತೆ
ವಿಗ್ರಹಗಂಡೊಲು ಅಮರತೆ ನರನಾರಾಯಣತೆ.
ಪೆರುಮಾಳನ ಕೆಂದಾವರೆ ಬಾಳಿನ ತಾಣವಿದೋ
ವರ್ಣಕ್ರಮ ಬಣ್ಣ ಸರಂಗೊಂಡಿಹ ವೀಣೆಯಿದೋ
ದಿವ್ಯೇಚ್ಛೆಯೆ ಮೈದಾಳಿದೆ ನೇರಳೆ ಬಣ್ಣದೊಳು
ಶತದಳದೊಲು ದಳದಳದಲಿ ಮಣ್ಣಿನ ಕಣ್ಣಿನೊಳು
ನೆಲ ಬಾನಿಗು ನಿಚ್ಚಣಿಕೆಯ ನಿಲ್ಲಿಸು ನಿಲ್ಲಿಸೆಲೇ
ಮರ್ತ್ಯವು ಮರಣವನರಿಯದ ಹಾಗಿರಲಿಲ್ಲಿ ಸೆಲೆ
ಮಧುಮಂತ್ರದ ಛಂದಸ್ಸನು ಪಲ್ಲಟಿಸುವ ಹಾಗೆ
ಕಾಲನ ಕಂದರ ಮಾಡೈ ಮಾರ್ಕಂಡೆಯರಾಗೆ.
ಪೆರುಮಾಳನ ಕೆಂದಾವರೆ ನಲುಮೆಯ ನಲಿನವಿದೋ
ಗುರುಕಾರುಣ್ಯದ ಭಾವಜ್ವಾಲಾಮಾಲೆಯಿದೋ
ಎಂದೆಂದಿನ ಮೊಗದೊಳಗಿಹ ಹಿಗ್ಗಿನ ನಾಚಿಕೆಯೋ
ಬಾಳಿನ ಆಳವ ತುಂಬಿದ ಮಾಣಿಕವೀಚಿಕೆಯೋ
ಪ್ರಕೃತಿಯ ಪಾತಾಳದ ಎದೆಯಾಳವೆ ಬಿಕ್ಕುತಿರೆ
ಬಾ ಬಲವೇ ಬಾ ನಲಿವೇ ಚೆಲುವೇ ಉಕ್ಕುತಿರೆ.
ಬಿಸವಂದದ ನಂದನಬನ ಮಾಡೀ ಜಗವಿಂದು
ಬಾಳಾಗಲಿ ಚಿನ್ಮೋದದ ಮುತ್ತಿನ ಸರವೊಂದು.
*****