ಮೊದಲು ಸೀರೆಯನುಟ್ಟಾ ಕ್ಷಣ
ಮೊದಲ ಸೀರೆಯನುಟ್ಟ ದಿನ|
ಏನೋ ಒಂಥರಾ ತರ
ಹೇಳಲಾಗದ ಹೊಸತನ
ಮೈ ನವಿರೇಳಿಸುವ ರೋಮಾಂಚನ||
ನೆರಿಗೆ ಸರಿಯಾಗಿ ಕೂರುತ್ತಿರಲಿಲ್ಲ
ಹಾಗೆ ಗಟ್ಟಿಯಾಗಲ್ಲಿ ನಿಲ್ಲುತ್ತಿರಲಿಲ್ಲ|
ಸೆರಗು ಜಾರಿ ಜಾರಿ ಬೀಳುತಲಿತ್ತು
ಭುಜದಮೇಲಿಂದ ಮೇಲೆ
ಹೇಗೋ ಎಲ್ಲ ಸರಿಮಾಡಿಕೊಂಡು
ಇನ್ನೇನು ಎರಡೆಜ್ಜೆ ಇಟ್ಟೊಡನೆ
ಕಾಲು ಎಡವಿ ಬೀಳುತಿದ್ದೆ||
ನೆರಿಗೆ ತೀಡಿತೀಡಿ ಸರಿಮಾಡಿ
ಕನ್ನಡಿ ಮುಂದೆ ನಿಂತು ನೋಡಿ|
ಸರಿಯಾಗಿದೆಯೇ ಎಂದೊಮ್ಮೆ
ನನ್ನ ನಾನೇ ಕೇಳಿಕೊಂಡು|
ನನಗೆ ನಾನೇ ಸರಿಯಿದೆಂದುಕೊಂಡು|
ಸೆರಗ ಅಂಚ ಹಿಡಿದು
ನಡೆಯಲು ಪ್ರಯತ್ನಿಸಿ ಬೀಳುತಿದ್ದೆ|
ಒಳಗೊಳಗೇ ನಸುನಗುತಾ
ಸೋಲನೊಪ್ಪಿಕೊಳ್ಳುತ್ತಿದ್ದೆ||
ಚಿಕ್ಕವಳಿದ್ದಾಗ ಅಜ್ಜಿ ನನಗೆ
ಸೀರೆ ಉಡಿಸಿ ಸೊಂಟಕೆ
ಬೆಳ್ಳಿ ಡಾಬನು ತೊಡಿಸಿ|
ದೃಷ್ಟಿತಾಕೀತೆಂದು
ಕಪ್ಪು ಬೊಟ್ಟ ಇರಿಸಿದ್ದಳು|
ಆದರಿಂದು ನಾನೇ ಸ್ವಂತಕ್ಕೆ
ಸೀರೆ ಉಟ್ಟು, ರವಿಕೆ ತೊಟ್ಟು
ನಡೆಯುವುದ ನೆನೆದರೆನೋ
ಹೊಸ ಉತ್ಸಾಹವು|
ಅಮ್ಮಾ ಇದನ್ನೆಲ್ಲಾ ಕಂಡು
ಖುಷಿಯಾಗಿ ಒಳಗೋಳಗೆ
ನಗುವುದ ನೋಡಿ
ನನಗೂ ಏನೋ ಆನಂದವು||
*****