ವಸಂತ
೧
ಬಂದೆ ಬರುವನಂತೆ ಆತ
ಬಂದೆ ಬರುವನಂತೆ !
ಚೆಂದದೊಸಗೆಯನ್ನು ಕೇಳಿ
ನವಿರ ಹೊರೆಯನಾಂತೆ !
ನಿಂದೆ ಮರುಳೆಯಂತೆ….
ನಿಂದೆ ಮರುಳೆಯಂತೆ, ನೆರೆಯೆ
ಮೈಮರೆವಿನ ಸಂತೆ.
೨
ಇನಿಯ ಬರುವ ಮೊದಲೆ ನನ್ನ
ಮನೆಯನೆಂತು ಮಿನುಗಿಸುವೆ?
ಮನಸು ಮೆಚ್ಚಿ ತಕ್ಕಿಪಂತೆ
ತನುವನೆಂತು ತೊಳಗಿಸುವೆ?
ಬರಲು ನಿಲುವೆನೆಂತು….?
ಬರಲು ನಿಲುವೆನೆಂತು? ಅವನ
ಕರೆದು ನುಡಿವೆನೆಂತು?
೩
ಆತನನೆಂತಾದರಿಸಲಿ?
ಆಸನವಾವುದನಿರಿಸಲಿ?
ಪ್ರೀತಿ ಯಾವ ರಸದೊಳೇನೊ!
ಪಾಕವನಾವುದ ತರಿಸಲಿ?
ತಿಳಿಯಲೊಲ್ಲದೊಂದು….!
ತಿಳಿಯಲೊಲ್ಲದೊಂದು, ಅವನ
ತಣಿಸುವ ತೆರನಿಂದು!
೪
ತಣಿಸುವ ತೆರನೊಂದರಿಯದೆ,
ತಿಳಿದ ಜನರೊಳಾರಯ್ಯದೆ,
ಇನಿಯನ ನೋಡಲಿಕ್ಕೆ ಬರಿದೆ
ಹಲುಬಿದೆ; ಬಲು ಹುಚ್ಚಿಯಾದೆ;
ನೋಡುವೆನವನನ್ನು ….!
ನೋಡುವೆನವನನ್ನು, ಆಗ
ಮಾಡಲಿ ನಾನೇನು?
೫
ಮಾಡದಲಾವಾವುದನೂ
ಮೋಡಿವಡೆದ ತೆರದಿ ನಾನು
ನೋಡುತಲಾತನನೆ ನಿಂತು,
ಬೇಡಿಕೊಳುವೆ ನಯದೊಳಿಂತು:
“ನೋಡು ಒರೆಗೆ ಹಚ್ಚಿ….!
“ನೋಡು ಒರೆಗೆ ಹಚ್ಚಿ, ದೊರೆಯೆ
ನಾನಿರುವೆನು ಹುಚ್ಚಿ!”
೬
“ನಿನ್ನ ಕಾಂಬ ಉನ್ಮಾದದಿ
ಇನ್ನಾವುದನರಿಯದವಳು,
“ನಾಣು ಜಾಣು ರೀತಿ ನೀತಿ
ಮಾನಾದರ ಕಾಣದವಳು,
“ನೀನೆ ಹೇಳು ನಲ್ಲಾ….!
“ನೀನೆ ಹೇಳು ನಲ್ಲ, ಮಾಡ-
ಲೇನು ನಾನದೆಲ್ಲಾ!”
೭
ಬಿನ್ನವಿಸಲು ನನ್ನಿ ಕತೆ
ಉನ್ಮಾದಿನಿಯಿವಳೆನ್ನುತೆ
ಚೆನ್ನ ಮರಳಿ ತೆರಳುವನೇ-
ನನ್ನೊಳು ಕೀಳ್‌ಗಣ್ಣಿರಿಸುತೆ ?
ಅಹುದೆ ತೆರಳಬಹುದೇ…?
ಅಹುದೆ ತೆರಳಬಹುದೆ ? ಅವಗೆ
ನನ್ನಿರವಿದು ಅರಿದೇ ?
೮
ನನ್ನಿರವಿದು ತಿಳಿಯದೇನು ?
ಮನ್ನೆಯನವ ಮರುಳನೇನು ?
ನನ್ನಿ ಯು ತನಗಾಗಿ ಈಕೆ
ಉನ್ಮಾದಿನಿಯಾದಳೆನುತೆ
ಕರೆವ ಕರುಣೆಯಿಂದೆ….
ಕರೆವ ಕರುಣೆಯಿಂದೆ, ನನ್ನ –
ನಿರಿಸಿಕೊಳುವ ಮುಂದೆ.
ಇರಿಸಿಕೊಳುವ ಮುಂದೆ, ಒಡನೆ
ಬೆರೆವ ನಲುಮೆಯಿಂದೆ.
*****