ಬೋಧಿ ವೃಕ್ಷದ ಚಿತ್ರ
ಬರೆದವರೆಲ್ಲ ಬುದ್ಧರಲ್ಲ
ಹೆಚ್ಚೆಂದರೆ ಸಿದ್ದಾರ್‍ಥರು!
ಕತ್ತಲಲ್ಲಿ ಕದ್ದು ಎದ್ದು ಹೋಗುವ ಇವರು
ಬರೀ ಸಿದ್ದಾರ್‍ಥರೇ ಹೊರತು ಬುದ್ಧರಲ್ಲ.
ಯಾಕೆಂದರೆ-
ಬುದ್ಧರಾಗುವವರ ಬಾಯಲ್ಲಿ
ನರಿ, ಮರಿಹಾಕುವುದಿಲ್ಲ.
ನರಿ ನಾಲಗೆಯಲ್ಲಿ
ನಯವಾಗಿ ನೆತ್ತರು ನೆಕ್ಕುತ್ತ
ಸುಳ್ಳಿನ ಸುಗಮ ಸಂಗೀತದಲ್ಲಿ
ನಂಬಿದವರ ನರಕಿತ್ತು ಸರ ಮಾಡಿ
ಹಾಡುತ್ತ ಓಡಾಡುತ್ತಾರೆ-ಈ ಸಿದ್ದಾರ್‍ಥರು.
ದ್ರೌಪದಿಯ ದಾರಿ ಬಿಟ್ಟು ಧನುಸ್ಸು ಹಿಡಿದು
ಸನ್ಯಾಸಿಯ ಸೋಗಿನಲ್ಲಿ ಸಂ-ಸಾರ
ಹೂಡಬಯಸುತ್ತಾರೆ-ಈ ಪಾರ್‍ಥರು.
ಸಿದ್ದಾರ್‍ಥರೊಳಗಿನ ಪಾರ್‍ಥರನ್ನು ನಂಬಿ
ಕುದುರೆಯೇರಿದ ಚದುರೆಯರು
ಕಣ್ಣಪಟ್ಟಿ ಕಳಚಿಕೊಳ್ಳುವ ವೇಳೆಗೆ
ಅನ್ವರ್‍ಥದ ಆರೋಪದಲ್ಲಿ ಬೀಗುವ ಈ ಸಿದ್ಧಾರ್‍ಥರು
ಬೋಧಿವೃಕ್ಷದ ಪೊಟರೆಯೊಳಗೆ
ಚದುರೆಯರ ಚಂದ ಕನಸುತ್ತ
ಕಾಲು ಚಾಚುತ್ತಾರೆ ಜೊಲ್ಲು ಸುರಿಸುತ್ತ.
ಇತ್ತ ಬುದ್ಧ ಭ್ರಮೆಯ ಗತ್ತಿನಲ್ಲಿ ಚಿತ್ತಾದ ಚದುರೆಯರು
ಕುದುರೆಗೆ ಕಾಲು ಮುರಿದು ಕೆನದಾಗ ಕನಸೊಡೆದು
ಕಂಗಾಲಾಗುತ್ತಾರೆ ಚಡಪಡಿಸುತ್ತ.
ಇಲ್ಲ, ಬೋಧಿವೃಕ್ಷದ ಚಿತ್ರ
ಬರೆದವರೆಲ್ಲ ಬುದ್ದರಲ್ಲ,
ಹೆಚ್ಚೆಂದರೆ ಸಿದ್ದಾರ್‍ಥರು!
*****