ಹೇಗೆ ಹೇಳಲಿ ನಿಮಗೆ ನನ್ನೊಳಗಿನ ಪಂಜಾಬು
ಸ್ವರ್‍ಣ ದೇಗುಲದಲ್ಲಿ ಕರ್‍ಣ ಕಿವುಡು
ಹೇಗೆ ಹೇಳಲಿ ನಿಮಗೆ ನನ್ನೊಳಗಿನ ಕಾಶ್ಮೀರ
ಸೇಬು ತೋಟದ ತುಂಬ ಚೀರು ಚೂರು.
ಹಾಳು ಬಾವಿಯ ಬದುಕ ಹೇಗೆ ಹೇಳಲಿ ನಿಮಗೆ
ಬಿರುದ-ಬಾವಲಿ ಎಲ್ಲ ಹೂಳು ಚಿತ್ತ
ಎಷ್ಟು ಕೊರೆದರು ಬೋರು, ನೀರು ಬರಲಿಲ್ಲ
ಸಿಡಿಮದ್ದು ಸಿಡಿಸಿದರೆ ಚಿಮ್ಮಿದ್ದು ರಕ್ತ!
ಹೇಗೆ ಹೇಳಲಿ ಎಲ್ಲ ಹೂತುಹೋಗಿದೆ ಸತ್ಯ
ಹೊಟ್ಟೆ ಬಟ್ಟೆಯ ಕಟ್ಟಿ ಖಾಲಿ ಧ್ವನಿಪೆಟ್ಟಿಗೆ
ಹೊರಗೆ ಕೇಳುವ ಸದ್ದು ಒಳಮನದ ದನಿಯಲ್ಲ
ಬಡ ಮನಸು ನಿಂತಿದೆ ಕೈ ಎತ್ತಿ ನೆಟ್ಟಗೆ.
ಕರುಳು ಕಾಶ್ಮೀರ ಸರ್‍ಪ ಸಂಕಟ ನನಗೆ
ಬುಸುಗುಡುವ ಬಡಬಾಗ್ನಿ ಪಂಜಾಬು ಒಳಗೆ
ಎದೆಯೊಳಗೆ ಗದೆಯಾಟ ನೀರಾಯ್ತು ನೆತ್ತರು
ಉಸಿರೆಲ್ಲ ಬಸಿರಾಗಿ ಮಗುವಿಲ್ಲ ಹೆತ್ತರೂ!
ಹೇಗೆ ಹೇಳಲಿ ನಿಮಗೆ ಒಳ ಉರಿಯ ಪರಿಯ
ಮಾತು ಹುಟ್ಟುತ್ತಲೇ ಹೂತು ಬಿಸಿಯೆಣ್ಣೆ ತಪ್ಪಲೆ
ಎದ್ದು ಬಿದ್ದೇಳುವ ನಾಲಗೆಯ ನರಕ
ಸುಳ್ಳು ಮುಳ್ಳಿನ ಬೇಲಿ ನಿಜವಾಯ್ತು ಬೆತ್ತಲೆ.
ಬೆಳೆಯುತ್ತ ಬಂದ, ಬಾಂಬು-ಪಂಜಾಬು
ಅನುಮಾನ ಅಸಹನೆ ಮಿತಿ ಮೀರಿ ಕಾಶ್ಮೀರ
ಗೆರೆ ಗೆರೆಗಳ ತರಿದು ಬಿರಿದು ಹೋಗುವ ಮನಸು
ಸಮಾನತೆಯ ಸಮಚಿತ್ತ ನನ್ನ ಕನಸು
*****