ಬಡವರಾದೆವು ನಾವು
ಬಂಧುಗಳು ಯಾರುಂಟು?
ನಾವು ಬಸಿದಾ ಬೆವರು
ಯಾರ ಹೊಟೇಲುಂಟು ?
ಕಣ್ಣ ಹನಿ ಹರಿಸಿದೆವು
ಮಗುವಂತೆ ಬೆಳಸಿದೆವು
ಕಂಡೋರ ಮನೆಗೆಲ್ಲ
ಕೊಟ್ಟು ಬಂದೆವಲ್ಲ
ತಲೆ ಮ್ಯಾಲೆ ಸಾಲ
ಹೊತ್ತು ತಂದೆವಲ್ಲ.
ಮೂಳೆ ಮೂಳೆಯ ತೇದು
ಬೆಳೆಸಿದೆವು ನಾವು
ನಮ್ಮ ಕಂದಮ್ಮಗಳು
ನಮಗಿಲ್ಲವೆ?
ನಮ್ಮ ಕೈಯ್ಯಾರ
ಬಾಳ ಕೊಲ್ಲಿಸುತಾರೆ
ಕಿವಿ ಕಣ್ಣು ಕರುಳು
ಇಲ್ಲಿಲ್ಲವೆ?
ಬಟ್ಟೆ ಕೇಳಿದರೆ
ಗೊಮ್ಮಟನ ತೋರುವರು
ಹೊಟ್ಟೆ ಹಸಿವೆಂದರೆ
ವ್ರತವೆಂದು ಹೇಳುವರು.
ಬಡವರು ನಾವೆಂದು
ಬೇರಾರು ಮೂಸೊಲ್ಲ
ಕಂಡೋರ ಒಡಲಿಗೆ
ದುಡಿಯೋಯ ನಿಂತಿಲ್ಲ.
ಬಂಧುಗಳು ಯಾರಿಲ್ಲ
ಸಾವು ಬಂದೈತೆ
ದಾರಿಗುಂಟ ಒಳ್ಳೆ
ಸೀರೆ ಹಾಸೈತೆ.
ಸಾವು ಬಂದೈತೆಂದು
ಹೋದೇವ ನಾವು?
ಬಂಧುಗಳೆ ಇಲ್ಲೆಂದು
ಭೂಮಿ ಬಿಟ್ಟೇವ?
ಸಾವ ಸರದಾರನ
ಸೋಲಿಸಿ ಕಳಿಸೇವು
ಬಂಡೆದ್ದು ಭೂಮೀಲೆ
ನಾವು ಬದುಕೇವು.
*****