ತಂಗಿ…
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…
ಕರಡಿಯೊಂದು ಕುಣಿಯುತ್ತಿದೆ
ಗೂಳಿಯೊಂದು ತಿವಿಯುತ್ತಿದೆ
ಗುಳ್ಳೆಯೊಂದು ಒಡೆಯುತಿದೆ
ಕೊಳ್ಳೆಯೊಂದು ಕರಗುತ್ತಿದೆ…
ಅಕ್ಕ…
ಷೇರುಪೇಟೆಯೇ? ಗೊತ್ತಿಲ್ಲ ಕಣೆ!
ಇಲ್ಲಿ…. ಕೇಳಿಲ್ಲಿ….
ಪುಟ್ಟ ಮೀನು ಭಾರಿ ಹಡನ್ನು
ಮುಳುಗಿಸುವುದಂತೆ ನಿಜವೇನೇ?
ಪುಟ್ಟ ಹಕ್ಕಿ ಭಾರಿ ವಿಮಾನವನ್ನು
ಉರುಳಿಸುವುದಂತೆ ನಿಜವೇನೇ?
ಗೆದ್ದಲು ಹುಳು ಭಾರಿ ಸೌಧವನ್ನು
ಕಬಳಿಸುವುದಂತೆ ನಿಜವೇನೇ?
ತಂಗಿ….
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…
ವೇಷವೊಂದು ಕಳಚುತ್ತಿದೆ
ದಿಗಿಣವೆಲ್ಲ ಅಡಗುತ್ತಿದೆ
‘ಹಾ’ಹಾಕಾರ ಏರುತಿದೆ
‘ಹೂಂ’ಕಾರ ಇಳಿಯುತಿದೆ…
ಅಕ್ಕ….
ಷೇರುಪೇಟೆಯೇ? ಗೊತ್ತಿಲ್ಲ ಕಣೆ!
ಏನದು ದೇಖು-ರೇಖು?
ಹಾಂ! ಮೀನಿಗೆ ಮಸಾಲೆ ಅರೆಯಬೇಕು
ಸದ್ಯ! ಉಪ್ಪು ಮೆಣಸು ಹುಳಿ
ತುಟ್ಟಿಯಾಗದಿದ್ದರೆ ಸಾಕು
ನೂಲೆಳೆಯುವ ಅಜ್ಜ ಹೇಳುತ್ತಿದ್ದ…
ಒಂದು ಹೂವು ಅರಳಬೇಕು
ಒಂದು ಹಕ್ಕಿ ಹಾಡಬೇಕು
ಒಂದು ಚಿಲುಮೆ ಉಕ್ಕಬೇಕು
ಒಂದು ಗುಕ್ಕು ಅನ್ನ
ಒಂದು ಗುಟುಕು ನೀರು
ಬಾಳಲು ಹೆಚ್ಚಿಗೇನು ಬೇಕು ?
ತಂಗಿ…
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…
ಅಕ್ಕ…
ಷೇರುಪೇಟೆ ಹಾಗೆಂದರೆ ಏನೇ?
ಅದು ನಮ್ಮ ಹೂವಿನ ಮಾರುಕಟ್ಟೆಗೆ ಸಮವೇನೇ?
ಇಗೋ..
ಇಲ್ಲಿ ನನ್ನೂರಲ್ಲಿ ನೆರೆದಿದೆ ಸಂತೆ
ರಾಟೆ ಸುತ್ತಬೇಕು ಪೀಪಿ ಊದಬೇಕು
ಗರಿ ಗರಿ ಚುರುಮುರಿ…
ಬಿಸಿ ಬಿಸಿ ಬಜ್ಜಿ-ಮೆಣಸಿನ ಕಾಯಿ ಮೆಲ್ಲಬೇಕು
ಇದಲ್ಲವೆ ನನ್ನ ವಿಶ್ವ? ಇದೇ ನನ್ನ ವಿಶ್ವ!
ಷೇರು ಪೇಟೆ ಕುಸಿದರೇನಂತೆ?
ಮಾರುಕಟ್ಟೆ ಮುಳುಗಿದರೇನಂತೆ?
ಕುಡಿಕೆಯಲಿ ಕಾಸು ಕೂಡಿಟ್ಟಿರುವೆ
………..ಸುಡು ಚಿಂತೆ!
*****