ಕತ್ತಲೆಯ ಕೊಂಬೆ ಸವರಿ
ನಕ್ಷತ್ರ ಎಲೆಗಳನೊಟ್ಟಿ ರಾಶಿಯಾಗಿಸಿ
ಹಾದಿ ಬೀದಿಯ ಸೂರ್ಯನಂತೆ ಬೆಳಗಿದ.
ಕಪ್ಪು ಮುಖ, ಕೆಂಡಗಣ್ಣು
ಹಳದಿ ಹಲ್ಲು, ತಲೆಯೋ ಹೊರೆ ಹುಲ್ಲು
ಶಂಖ ಚಕ್ರ ಗದಾಪದ್ಮ ?…
ಅಲ್ತಲ್ತು ಅಲ್ತಲ್ತು
ಗೋರೆ, ಪೊರಕೆ, ಸನಿಕೆ ಸಂಭೂಷಿತ-
ಒಂದು ಮುಂಜಾನೆ
ಮನೆಯಂಗಳದಲ್ಲಿ ಪ್ರತ್ಯಕ್ಷ.
ಮಡುಗಟ್ಟಿತ್ತು ಶತ ಶತಮಾಗಳ ಕೊಳೆ
ಸುತ್ತ ಕಸ ಕಡ್ಡಿ ಕೆಸರಿನ ಹೊಳೆ
ಹರಿಸು ತಂದೆ, ಹರಿಸು ಮುಂದೆ ಅಂದೆ
ವಿನೀತಳಾಗಿ…
ಕೊಳೆ ಕಳೆದು ಹರಿಸಿದ ನೀರು ಸರಾಗ
ಹೆಜ್ಜೆಯನಿಕ್ಕಿ ಒಪ್ಪಗೊಳಿಸಿದ ಒಳಗ
ಮೂಲೆ ಮೂಲೆಯ ಗುಡಿಸಿ
ನಿರ್ಮಲವಾಗಿಸಿದ.
ಅದೆಲ್ಲೋ ದೂರ ಗುಡಿ ಗೋಪುರ
ಇಲ್ಲಿ ಇಷ್ಟು ಹತ್ತಿರ ಅದರ ಸರದಾರ.
ತಂಗಳನ್ನವ ಉಂಡು, ಕಚ್ಚಿ ಬೀಡಿಯ ತುಂಡು
ಪೊರಕೆ, ಸನಿಕೆ ಹಿಡಿದ ಕೈಗಳನೆತ್ತಿ
‘ಮರಳಿ ಬರುವೆ’ ಎಂದು ಹೊರಟು ಹೋದ…
*****