ನಾನು ಹೆಚ್ಚಿದ ತರಕಾರಿಯಾಗಿದ್ದೀನಲ್ಲ!
ನಾನು ಸುಖ ಮಾರುವವಳಾಗಿರೋದರಿಂದ
ನನಗೆ, ನನ್ನ ಆತ್ಮಕ್ಕೆ, ನನ್ನ ಭಾವನೆಗಳಿಗೆ ಬೆಲೆಯಿಲ್ಲ ಅಲ್ವಾ!
ನನ್ನ ಬದುಕಿಗೆ ಅರ್ಥವಿಲ್ಲ
ನಾನು, ವಿಕೃತ ಮನಸ್ಸುಗಳ ಪ್ರಯೋಗದ ಪಶುವಾಗಿ
ಸ್ಪಂದನ ಕಳೆದ ಜೈವಿಕ ಯಂತ್ರವಾಗಿದ್ದೇನೆ
ನನಗೆ ಸುಖ ಯಾವುದು ಸಂತೋಷ ಯಾವುದೆಂಬುದೇ ಗೊತ್ತಿಲ್ಲ
ತಿನ್ನುತ್ತಿದ್ದೇನೆ, ಬದುಕಿದ್ದೇನೆ
ಕೆಟ್ಟ ಬದುಕು ಸಾಗಿಸುತ್ತಿದ್ದೇನೆ
ನಾನೇ ಆಗಿರಲಿ, ಯಾರೇ ಮಾಡಿರಲಿ
ನಾನೊಬ್ಬ ಸಮಾಜ ಕಂಟಕಿ;
ಸದ್ದಿಲ್ಲದೆ, ತಣ್ಣಗೆ ಇರಿಯುವ
ಘೋರವಾದ ವಿನಾಶಕಾರಿ ಜೈವಿಕ ಬಾಂಬು;
ಸುಖವನ್ನರಸಿ ಬರುವ ಪತಂಗಗಳ ರೆಕ್ಕೆ ಸುಡುವ
ದುರಂತ ಮೂರ್ತ
ಬೆಂಕಿ ಹೂವು.
ನಾನು, ಕೆಟ್ಟ ವ್ಯವಸ್ಥೆಯ
ಧಾರುಣ ಬದುಕಿನ ಒಂದು ಉಜ್ವಲ ಉದಾಹರಣೆ;
ಗಬ್ಬು ನಾರುತ್ತಿರುವ ಗಟಾರದಲ್ಲಿ ತೇಲುತ್ತಿರುವ
ಸಿಹಿ ತಿಂಡಿ
ನಾನು ಸಾಯಬೇಕು;
ಇದ್ದಷ್ಟೂ ನನಗೂ ಒಳ್ಳೆಯದಲ್ಲ,
ಸಮಾಜಕ್ಕೂ ಒಳ್ಳೆಯದಲ್ಲ.
*****