(ಸಾವಿರ ವರ್ಷದ ಹಬ್ಬದಲ್ಲಿ)
ಪದಿನೂರು ನೆರೆಯೆ, ಪಿರಿದೊಸಗೆ ಮೆರೆಯೆ,
ಪುಲಿಗೆರೆಯ ತಿರುಳ ಕನ್ನಡದ ಪುರುಳ
ರಸರಸದ ಬಾವಿ ಮನೆಮನೆಗೆ ತೀವಿ
ತನ್ನೆರಡು ಪಾಟ್ಟು ಮೆಸೆಯೆ, ನೆಲನೊಸೆಯೆ,
ತನ್ನ ಸೆರಪೇ ಸೆರಪು,
ತನ್ನ ತೇಜಮೆ ತೇಜಮ್
ಎನೆ ಬೆಳಪ ಪಂಪನ್
ಎಮ್ಮ ತಾಯ್ನುಡಿಗೀಗೆ ಪೊಸಪೊಸತು ಪೊಂಪನ್ !
ಓ ಪಂಪ, ಗುರುಪಂಪ, ಏನ್ ನೋನ್ತ ನೋನ್ಪಿಯೋ,
ಏನ್ ಪಾರ್‍ತ ಪಾರ್‍ಪೋ,
ಕಡೆದಿಟ್ಟೆ ಕಬ್ಬದೊಳ್ ಸಂಸಾರಸಾರಮನ್,
ಮಾನಮನ್, ದಾನಮನ್, ಧೀರ ಗಾಂಭೀರ್‍ಯಮನ್,
ಧರ್‍ಮಮನ್, ಕರ್‍ಮಮನ್, ಶಿವಪದದ ಮರ್‍ಮಮನ್,
ಸರ್‍ವಸ್ವಮನ್ !
ನಿನ್ನು ನಿರ್ ತುಂಬಿ,
ನಂಬುವುದೆ ನಂಬಿ,
ರನ್ನನುಂ, ಚಾವುಂಡರಾಯನುಂ ಕಂಡರ್
ಬೆಳ್ಗೊಳದ ಕಗ್ಗಲ್ಲ ಕೋಡಿನೊಳ್ ದೇವರಾ ಬಿಂಬಮನ್,
ಕಂಡು ಕಡೆದಿಟ್ಟರ್
ಪಾರುವಾ ಪಾರ್‍ಪೊಂದನಿಳೆಗೆ ತಡೆದಿಟ್ಟರ್-
ಕಲೆಯ ಸೌಂದರ್‍ಯಂ, ಜೀವದೌನ್ನತ್ಯಂ,
ತಪದೊಂದು ಭಾಗ್ಯಂ, ಕ್ರಾಂತಿಯೊಳ್ ಶಾಂತಿ,
ಪಸುಳೆವೋಲ್ ನಿಲ್ವಾಳ ನಿಲವು !
ಏನ್ ಚೆಲ್ವು ಚೆಲ್ವು !
ಓ ಪಂಪ, ನೀನ್ ತುಂಬಿ ತೊರೆದೋರೆತೆ ಪರಿವುದಿನ್ನು೦.
ಸಾವಿರಂ ಸಂದುಮದು ಪರಿವುದಿನ್ನುಂ
ಅದನೆ ಬಸವಣ್ಣನ್,
ಅದನೆ ಕುವರವ್ಯಾಸನ್
ಇನ್ನೊಮ್ಮೆ ಸಾರಿದರ್ ತಮ್ಮ ಕಣ್ಣಿನ್ ಕಂಡು
ಪೊಸಪೊಸತು ಪರಿಯಿನ್,
ಆಳ ಬಾಳನ್ ಕಡೆವ ಶಿವಕಲೆಯ ಕೃಪೆಯಿನ್ :
ಅದು ಶಿವಂ, ಸತ್ಯಮದು, ಸುಂದರಂ.
ಗುರು ಪಂಪ, ಓ ತಂದೆ ಪಂಪಾ,
ತೆಂಕನಾಡನ್ ಮರೆಯಲಾರದೆಲೆ ಜೀವಾ,
ಮರೆಯದಿರು, ಪರಸು, ಪರಸೆಮ್ಮನ್,
ಪಳೆಯ ಕರ್ನಾಟಕಂ ಮತ್ತೊರ್‍ಮೆ ಕಟ್ಟುಗೆ !
ಎಳೆಯ ಕರ್ನಾಟಕಂ ಪೊಸಪುಟ್ಟು ಪುಟ್ಟುಗೆ !
ಪಿರಿಯತನಮನ್ ಮರೆತ ಕಿರುಮಕ್ಕಳನ್ ಪರಸು,
ಪರಸು ನೀನೆಮ್ಮನ್.
*****
೧೯೪೧