ಕಾಡಿನ ಹಾದಿಯಲಿ ನಾನೊಬ್ಬನೆ ನಡೆವಾಗ
ಆವರಿಸಿದ ಸುಗಂಧವೇ ನಿನ್ನ ಹೆಸರು
ಯಾವ ಪುಷ್ಪ ಯಾವ ವೃಕ್ಷ ಯಾವ ವನದೇವಿ
ಯಾವ ಗಿರಿಸಾನುಗಳ ಔಷಧಿಯೆ ನಿನ್ನ ಹೆಸರು
ಸಂತೆಬೀದಿಗಳಲ್ಲಿ ಜನರ ನಡುವಿರುವಾಗ
ಬೆಳುದಿಂಗಳಂತೆ ಬಂದ ಚೆಲುವೆ
ನಿದ್ದೆ ಎಚ್ಚರಗಳಲಿ ಸ್ವಪ್ನ ಬಿದ್ದಿರುವಾಗ
ತೇಲಿಬಂದ ಬೆಳಕೇ ನಿನ್ನ ಹೆಸರು
ಯಾವ ಮುಗಿಲಂಚೆ ಯಾವ ದೈವದ ಸಂಚೆ
ಯಾವ ಅಪ್ಸರೆ ಕಣ್ಣ ಮಿಂಚೆ ನಿನ್ನ ಹೆಸರು
ನೀ ಯಾರು ನಾ ಯಾರು
ಬಂಧವೇನು ಸಂಬಂಧವೇನು
ನೆನಪು ಚೀಲಗಳ ಹುಡುಕಿ ನೋಡುವೆನು
ಸೋರಿಹೋಗಿವೆ ಎಲ್ಲವೂ
ಲೋಕ ಚೈತನ್ಯಗಳ ನನ್ನದೆಂದೆನು
ಪಡೆಯಲೆಳಸಿದೆನು ತಹತಹಿಸಿದೆನು ನನ್ನೊಳಗೆ ನಾನು
ದಹಿಸಿದೆನು ಬೂದಿಯಾದೆನು
ದೈವ ಬಯಸಿದ ಹಾಗೆ ಇದು ಹೀಗೆ ಎಂದೊ
ಉರಿವ ಮೂಲಕವೆ ಅರಿಯಬೇಕೆಂದೊ
ನಿನ್ನ ಹೆಸರು
*****