ಪ್ರೀತಿಯಾ ಗೆಳೆಯಾ,
ಈ ದಿನ ಶಿಕ್ಷಕರ ದಿನಾಚರಣೆ. ಎಷ್ಟೊಂದು ಮೃದು ಹಸ್ತಗಳು ತಬ್ಬಿದವು. ಚಾಕಲೇಟು ಹೂವು ಪೆನ್ನುಗಳು. ಕೆಂಪಗೆ ಬೆಳ್ಳಗೆ ಅಂಗೈ ಪದಕು, ಕೆಂಪು ಬಳೆಗಳು ನೀಲಿ ರಿಬ್ಬನ್‌ಗಳು. ಮತ್ತೊಂದು ಹಸ್ತದಲಿ ಜಿಬ್ಬಾದ ಚಾಕಲೇಟು. ಒಂದರ ಎಳೆಗಂಪಿನ ಅಂಗೈ ಮೇಲೆ ಬಣ್ಣದ ಪೆನ್ಸಿಲ್ಲಿನ ಚಿತ್ತಾರದ ಹುಡಿ, ಮತ್ತೊಂದರ ಬೆರಳಿನಲಿ ಆಟದ ಮೈದಾನದ ಸಣ್ಣ ಸಣ್ಣ ಹರಳುಗಳು. ಒಂದರ ಕಿಸಿಯಲ್ಲಿ ಪುಟ್ಟ, ಪ್ಲಾಸ್ಟಿಕ್ಕಿನ ಡಬ್ಬಿ, ಅದರಲ್ಲಿ ಪುಠಾಣಿಕಾಳುಗಳು. ಕೊಟ್ಟರೂ ತೆಗೆದುಕೊಂಡರೂ ಮುಗಿಲಿಗೆ ಮುಖ ಮಾಡುವ ಕೆಂಪು ಹಸ್ತಗಳು.
ಒಂದು ಮಿನುಗುವ ಲೋಲಾಕು ತೋರಿಸಿದರೆ, ಮತ್ತೊಂದು ತನ್ನ ತಲೆಯಲ್ಲಿ ಅರಳಿದ ಚಿಟ್ಟೆ ಹೇರಪಿನ್ ತೋರಿಸುತ್ತದೆ. ಚಂದದ ಫ್ರಾಕ್, ಅಂಗಾಲಿನ ಹೊಸ ಬೂಟು, ಕೈಬಳೆಗಳು. ಒಂದು ಸೀರೆಯ ಸೆರಗನ್ನು ಹಿಡಿದು ಎಳೆದರೆ ಮತ್ತೊಂದು ಮುಟ್ಟಲೋ ಬೇಡವೋ ಎಂಬಂತೆ ವಾಚ್ ಮುಟ್ಟುತ್ತದೆ. ಒಂದರ ಪುಟ್ಟ ಹನಿ ಕಣ್ಣ ತುದಿಯಲ್ಲಿ ಇಣುಕಿದರೆ, ಮತ್ತೊಂದದರ ಸದ್ದಿಲ್ಲದ ಬಿಕ್ಕು ಅದರ ಮುಖ ಕೆಂಪಗೆ ಮಾಡಿದೆ. ಒಂದು ಮುದ್ದು ಕಿರು ಬೆರಳು ತೋರಿಸಿ ಗೇಟಿನ ಹೊರಗೆ ಓಡುತ್ತದೆ. ನೀನು ಹಾಗೇ ಮಾಡಿರಬೇಕು. ಹರಿದ ಹಾಳೆಯ ತುಂಡುಗಳನ್ನು ಕಿಸೆಯಲ್ಲಿ ತುರುಕುವುದು. ಬಿದ್ದರೂ ಎದ್ದರೂ ಮತ್ತೆ ಆಕರ್ಷಕ ಧ್ವನಿಯಲ್ಲಿ ಉಲಿಯುವ ಗಿಳಿವಿಂಡು ಮುತ್ತಿನ ಚೆಂಡು. ಮಾಸ್ತರ ಆಗಬೇಕೋ ಗೆಳೆಯಾ.
ಸುಮ್ಮನೆ ಹಾಯಾಗಿ ನಮ್ಮ ಪಾಡಿಗೆ ನಾವು ಹೃದಯದ ಬಾಗಿಲು ತೆಗೆದು ಒಂದು ಪುಟ್ಟ, ಶಾಲೆಯ ಅಂಗಳಕ್ಕೆ ಬಂದು ನಿಂತರೆ, ತಮಾಷೆ ಏನು ಗೊತ್ತಾ, ನಮ್ಮ ಬಾಲ್ಯ, ಅದರ ನೆನಪು ಕ್ಷಣದ ಮಟ್ಟಿಗಿನ ಶಾಂತಿ, ನೆಮ್ಮದಿ ಹುರುಪು, ಉತ್ಸಾಹ ಎಲ್ಲವೂ ನಮ್ಮೊಳಗಿನ ಜೆಕಿಲ್ ಮತ್ತು ಹೈಡ್ ಅನ್ನೋ ಕಣ್ಣು ಮುಚ್ಚಾಲೆ ಆಟ ನಮ್ಮಲ್ಲೇ ಪ್ರಾರಂಭವಾಗಿ ಬಿಡುತ್ತದೆ. ಯಾವುದೇ ಮೋಸ ತಾರತಮ್ಯ ಜಾತಿತೊಳಲಾಟ ಇಲ್ಲದೆ ದೇವರ ಪುಟ್ಟ ಹೆಜ್ಜೆಗಳು ಮೂಡಿದ್ದು ನಮ್ಮ ಅರಿವಿಗೆ ಬರುತ್ತದೆ. ಒಂದು ಮುಗುಳ್ನಗೆ ನಿರಂಬಳ ದಾಖಲೆ ನಮ್ಮ ಮನಸ್ಸಿನಲ್ಲಿ ಕೂತು ಬಿಡುತ್ತದೆ. ಈ ಸಂತೋಷಕ್ಕೆ ಸ್ವರ್ಗದ ಮೆಟ್ಟಲುಗಳೇರುವ ಭಾವಕ್ಕೆ ನಾವೇ ಸಾಕ್ಷಿಗಳಾಗಿ ಬಿಡುತ್ತೇವೆ.
ಇಪ್ಪತೈದು ವರ್ಷಗಳಿಂದ ನನ್ನೆದೆಯ ಅಂಗಳದಲ್ಲಿ ಈ ಮಿಣಿ ಮಿಣಿ ಮಿನುಗುವ ನಕ್ಷತ್ರಗಳು, ಹೆಕ್ಕಿ ಹೆಕ್ಕಿ ಉಡಿ ತುಂಬುವಾಸ. ವರ್ಷಗಳು ಉರುಳಿದ ಹಾಗೆ ಚೀಲ ಬೆನ್ನಿಗೆ ಏರಿಸಿಕೊಂಡು ಮೃದು ಪಾದದ ಕೆಂಪನ್ನು ಮರೆಸಿ, ದೊಡ್ಡ ಪಾದಗಳ ಗಟ್ಟಿ ಹೆಜ್ಜೆಯ ಹಾಕುತ್ತ ತಿರುಗಿ ನೋಡದೇ ಹೋಗಿ ಬಿಡುತ್ತವೆ ಭರ್ರೆಂದು. ಮತ್ತದೇ ನಕ್ಷತ್ರಗಳ ಗುಂಗಿನ ತಳಮಳದ ಮನಸ್ಸುಗಳನ್ನು ತಯ್ಯಾರಿ ಮಾಡಿಕೊಡುತ್ತವೆ. ಖಾಸಗೀ ಮೌನದಲ್ಲಿ ಮನ ಅತ್ತು ಹಗುರಾಗುತ್ತವೆ. ಮತ್ತೆ ಹೊಸ ಮಿನಿಗುಗಳಾಗಿ ಕಣ್ಣು ಕಾತರಿಸುತ್ತವೆ.
ಗೆಳೆಯಾ ಒಮ್ಮೆ ನಾವು ನೀವು ನಿರ್ಭಯತೆಯ ನಕ್ಷತ್ರಗಳಾಗಿದ್ದವಲ್ಲ. ಪುಟಾಣಿ ಕೈಯಗಳಲ್ಲಿ ಪುಟಾಣಿಕಾಳು ಹಿಡಿದಿದ್ದೆವಲ್ಲ. ಪುಟ್ಟ ಪುಟ್ಟ ಕಾರಣಗಳಿಗೆಲ್ಲಾ ಹೊಳೆವ ಕಣ್ಣಂಚಿನಲ್ಲಿ ಬಿಂದುಗಳನ್ನು ಇರಿಸಿಕೊಂಡಿದ್ದೆವಲ್ಲ. ಒಮ್ಮೊಮ್ಮೆ ಮನೆಯ ನೆನಪಾಗಿ ಒಳಚಡ್ಡಿಯನ್ನು ತೋಯಿಸಿಕೊಂಡಿದ್ದೆವಲ್ಲ. ಕಳೆದ ಪೆನ್ಸಿಲ್ಲಿಗೆ, ಬಣ್ಣದ ಕಾಗದಕ್ಕೆ, ನವಿಲಿನ ಗರಿಗೆ ಬಿಕ್ಕಿದ್ದೆವಲ್ಲ. ಮನೆ ಮುಟ್ಟಿಸಲು ಬಂದ ಆಯಾ ಕೈ ಹಿಡಿದು ಜೋರಾಗಿ ಎಳೆದಾಗ ಸುಮ್ಮ ಸುಮ್ಮನೆ ಬೆದರಿದ್ದೆವಲ್ಲಾ! ಟೀಚರ್ ಹೇಳಿದ ಕಥೆಯ ಸಿಂಹ ರಾತ್ರಿ ಕನಸಿನಲ್ಲಿ ಬಂದು ಹೆದರಿಸಿದಾಗ, ಅಮ್ಮನನ್ನು ಜೋರಾಗಿ ತಬ್ಬಿ ಕನವರಿಸಿದ್ದೆವಲ್ಲಾ. ದಾಪುಗಾಲುಗಳ ಧಡಂ ಧಡಂ ಓಟದದಲಿ ಹೇಗೆ ಮರೆತೆವು ನಮ್ಮ ಆತ್ಮದ ಈ ಪುಟ್ಟ ಹಾಯಿದೋಣಿಯ? ಗೆಳೆಯಾ ನಮ್ಮ ಸರಭರ ದೊಡ್ಡ ಹೆಜ್ಜೆಯ ಅಬ್ಬರದಲಿ ನಮ್ಮ ಪುಟ್ಟ ಪುಟ್ಟ ಹೆಜ್ಜೆಗಳು ಎಲ್ಲಿ ಅಳಸಿ ಹೋದವು?
ನಮ್ಮ ಬದುಕುಗಳೇ ಹಾಗೆ. ಬರೀ ಚಪ್ಪರಿಸಿದ ಕನಸುಗಳು, ಹೊಟ್ಟೆ ತುಂಬಾ ಉಂಡು ಕಣ್ಣು ತುಂಬಿ ಮಲಗಿದ ಅನುಭವವೇ ಇಲ್ಲದ ಪಡಿಪಾಟಲು. ಖುಷಿ ಎಂದರೆ ಐದುನೂರು ರೂಪಾಯಿ ಟೀಕೇಟು ಕೊಟ್ಟು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸಂಗೀತಗಾರರ ಸಂಗೀತ ಕೇಳುವುದು, ನೃತ್ಯಗಾರರ ನೃತ್ಯ ನೋಡುವುದು ಮತ್ತೆ ಚಿತ್ರಕಲಾವಿದರ ಎಕ್ಸಿಬಿಶನ್ಗೆ ಹೋಗುವುದು. ಅಲ್ಲಿ ಪೊಕ್ತಾಗಿ ಗೂಟಕ್ಕೆ ಬಡಿದ ಹಾಗೆ ಕುಳಿತು ಯಾರನ್ನೂ ಮಾತನಾಡಿಸದೇ, ನಮ್ಮದೇ ಗತ್ತಿನಲ್ಲಿ ಸುತ್ತ ಹಾಕಿ, ತಿಳಿದೋ ತಿಳಿಯದೆಯೋ ತೇಕುಹತ್ತಿ, ಮರುದಿನ ಆಫೀಸಿನಲ್ಲಿ ಸ್ನೇಹಿತರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೇ ಮಾತನಾಡಿ ವಿಮರ್ಶೆಗೆ ಒಳಗಾಗಿ, ಮನಸ್ಸಲ್ಲೇ ಏನೋನೋ ಮಂಡಿಗೆ ತಿಂದು ಮತ್ತದೇ ಅಂತಸ್ತಿನ ಬಲೆಯಲ್ಲಿ ಅಂತರ ಪಿಶಾಚಿಗಳಾಗಿ ಬಿಡುವುದು. ಹೇಗೆ ಕಂಡಾವು ನಮ್ಮಂಗಳದಲ್ಲಿ ಮಿನುಗುವ ನಕ್ಷತ್ರಗಳ ಬೆಳಕು ನಮಗೆ?
ಈ ಎಳೆಸು ನಕ್ಷತ್ರಗಳೇ ಒಮ್ಮೆ ನಾವಾಗಿದ್ದೆವು. ನಮ್ಮ ಕನಸಿನ ಮೂಲ ಬೇರುಗಳಾಗಿದ್ದವು. ನಮ್ಮ ಅಂತರಾಳದ ಸುವಾಸನೆ ಬೀರುವ ಹೂಗಳಾಗಿದ್ದೆವು. ಸ್ವಚಂದ್ಧ ನೀಲ ಬಾನಿನಲ್ಲಿ ತೇಲುವ ಬಣ್ಣ ಬಣ್ಣದ ಗಾಳಿಪಟಗಳಾಗಿದ್ದೆವು. ಮತ್ತೆ ಪುಟ್ಟ ಪುಟ್ಟ ಅರಳಿದ ಪ್ರಾಕುಗಳಲ್ಲಿ ಚೇತನತುಂಬವ ಚಿಟ್ಟೆಗಳಾಗಿದ್ದೆವು. ಚಿನ್ನದ ಹೊಳಪಿನ ಕಣ್ಣುಗಳಲ್ಲಿ ಈ ಸೃಷ್ಟಿಯ ಸೊಬಗಿನ ಸೂರ್ಯನ ಕಿರಣಗಳ ಬಿಂಬಿಸಿದ್ದೆವು. ಮೃದು ಹಸ್ತಗಳಿಂದ ತಬ್ಬಿದ್ದೆವು, ಕೆಂದುಟಿಗಳ ಮುತ್ತು ಸುರಿಸಿದ್ದೆವು. ಯಾವ ಸ್ವಾರ್ಥ ಮೋಸ ವಿಲ್ಲದೇ ಎಲ್ಲರ ಎದೆಗೂ ಅಮರಿ ತಬ್ಬಿಕೊಂಡಿದ್ದೆವು. ಮತ್ತೆ ಎಲ್ಲ ಮರೆತು ಮರೆಮಾಚಿ ಈ ಹರಕಲು ಬರಕಲು ದಾರಿ ಸವಿಯಲು ನಾವು ತಳಮಳಿಸಬೇಕು. ಯಾವ ಕನಸುಗಳಿಗಾಗಿ ಹಳಹಳಿಸಬೇಕು.
ಅಂಗಿಬಿಚ್ಚಿ ಅಮ್ಮ ಎಣ್ಣೆ ಸ್ನಾನ ಮಾಡಿಸುವಾಗ ಬಚ್ಚಲು ಮನೆ ಬಿದ್ದು ಹೋಗುವ ಹಾಗೆ ಅವರಲಿದ್ದು, ಚಡ್ಡಿ ಹಾಕುವಾಗ ಯಾರಾದರೂ ಬಂದರೆ ಹಿಂದೊಂದು ಕೈ ಮುಂದೊಂದು ಕೈ ಇರಿಸಿದ್ದು, ಹೇಳಿದ ಅಂಗಿಯೇ ಬೇಕೆಂದು ಹಠಹಿಡಿದು ಪಡಸಾಲೆಯಲ್ಲಿ ಉರುಳಾಡಿದ್ದು, ಪಕ್ಕದ ಮನೆಯ ಪುಟ್ಟಿಯ ಚಂಡೇ ಬೇಕೆಂದು ಪೀಡಿಸಿದ್ದು, ಬಣ್ಣದ ಜರಿಹಾಳೆಯನ್ನು ಮುದುಡಿ ಪಾಟೀ ಚೀಲದಲ್ಲಿ ತುರುಕಿದ್ದು, ಹುಣಸೇ ಬೀಜ ಹುರಿದು ತಂದು ಕೊಟ್ಟವರಿಗೆ ಪೆನ್ಸಿಲ್ ತುಂಡು ಕೊಟ್ಟು ಮನೆಯಲ್ಲಿ ಗದರಿಸಿಕೊಂಡದ್ದು, ಮಗ್ಗಿ ಬರೆಯುವಾಗ ಸ್ಲೇಟಿನ ಮೇಲೆ ಒರಗಿ ಹಿಂದೆ ಬರೆದದ್ದು, ಅಳುಕಿಸಿ ಮುಂದೆ ಬರೆಯುವದರಲ್ಲೇ ಕಂದೀಲು ಪಾಪು ಒಡೆದದ್ದು, ಕಾಯಿಬೆಲ್ಲ ಪುಠಾಣಿ ಸಕ್ಕರೆ ಕಲಸಿ ಸಾಲಾಗಿ ಮಲಗಿಸಿದ ಕಲ್ಲು ದೇವರಿಗೆ ನೇವೇದ್ಯ ಮಾಡಿದ್ದು ಅಗ್ರಹಾರದ ಮಕ್ಕಳೆಲ್ಲಾ ಒಂದಾಗಿ ವಾರಾನುಗಟ್ಟಲೇ ಕಿರೀಟ ಸರಮಾಡಿ ಗಣಪತಿ ನಾಟಕ ಮಾಡಿದ್ದು, ಪೇಟೆಯ ಹಬ್ಬದಲ್ಲಿ ಬಣ್ಣದ ಬಲೂನು, ಬಣ್ಣದ ರಿಬ್ಬನ್, ಬೇಕೆ ಬೇಕೆಂದು ಹಠಮಾಡಿ ಅಜ್ಜಯ್ಯನನ್ನು ಪೀಡಿಸಿದ್ದು, ಎಲ್ಲಾ ಜೀಕುಗಳು ತುಂಟತನಗಳ ಅರಿವಾಗುವ ಹೊತ್ತಿಗೆ, ಒಮ್ಮೆಲೇ ಬಿಳಿ ಪೆಟಿಕೋಟ ಕೆಂಪಾಗಿ ಕಾಡಿತ್ತು. ತಳಮಳದ ಗೊರಬಲು ಕಲ್ಲು ಕಡಿಯ ದಾರಿ ಸವೆಯಲು ಎಲ್ಲಿ ಕಳೆದು ಹೋಯ್ತು ಖುಷಿಯ ಭದ್ರತೆಯ ಗಂಟು?
ಈ ಕನಸುಗಳು ಹೀಗೆ. ಬರೀ ಕಗ್ಗಂಟು, ಎಲ್ಲಿಯೂ ಒಂದು ಸರಳದಾರಿ ಕ್ರಮಿಸಿಕೊಳ್ಳುವದಿಲ್ಲ. ಒಳಗುದಿ ಬೇಗುದಿಯಲ್ಲಿ ತುಟಿಯ ಮೇಲೆ ಒಂದು ಮುಗುಳ್ನಗೆ ಕೂಡಾ ಸೂಸುವದಿಲ್ಲ. ಸದಾ ಹುಬ್ಬು ಗಂಟಿಕ್ಕಿ ಮಾತನಾಡುವ ಗೆಳೆಯರು. ಯಾವುದೇ ಗುಮಾನಿಯಲ್ಲಿ ಇರುತ್ತಾರೆ. ನಡೆದು ಬರುವವರನ್ನು ನಾವು ಗಮನಿಸುವುದೇ ಇಲ್ಲ. ದಿನಾಲೂ ಒಂದೇ ಬಸ್ಸು ಹತ್ತಿ ಒಂದೇ ಸ್ಟಾಪಿನಲ್ಲಿ ಇಳಿದರೂ ನಮ್ಮೆಲ್ಲರದು ಗಂಟು ಮೋರೆಯೇ. ಯಾವ ಹಿರಿಯ ವೃದ್ಧರು ಜೋಡಾಡುತ್ತ ನಿಲ್ಲಲು ಪ್ರಯತ್ನಿಸುತ್ತಿದ್ದರೆ ನಾವು ಎದ್ದು ಅವರಿಗೆ ಸೀಟು ಬಿಟ್ಟು ಕೊಡುವುದಿಲ್ಲ. ಎಲ್ಲಿ ಹೊಸಕಿ ಹಾಕಿದೆವು ಗೆಳೆಯಾ ಅಮ್ಮ ಹೇಳಿದ ಚಂದಮಾಮನ ಪರೋಪಕಾರಿ ಪಾಪಣ್ಣನ ಕಥೆಯ? ಗೌರಿ ಹಬ್ಬಕೆ ಬಳೆತೊಡಿಸಿ ಸಾಲಾಗಿ ಎಲ್ಲಾ ಸ್ನೇಹಿತೆಯರನ್ನು ಕೂಡಿಸಿ ಬಡಿಸಿದ ಪಾಕ ಬಕ್ಷಗಳ? ಯಾವ ಕಂಪ್ಯೂಟರಿನ ಕೋಣೆಯಲ್ಲಿ ಹುಡುಕಬಲ್ಲೆವು ಆ ಬೆಚ್ಚನೆಯ ಪಂಕ್ತಿಯ ಸಾಲುಗಳ, ಗೆಳೆಯಾ ಪುಟ್ಟ ಮಕ್ಕಳನ್ನು ಶಾಲೆಯಲ್ಲಿ ಕಂಡಾಗ ಮನಸ್ಸು ನವಿಲಿನಂತೆ ನರ್ತಿಸುತ್ತದೆ. ಅಮ್ಮ ಜಡೆಕಟ್ಟಿ ಬಣ್ಣದ ರಿಬ್ಬನ್ ಚಿಟ್ಟೆ ತಲೆಯಲ್ಲಿ ಅರಳಿದಾಗ, ಮಡಿಲಲ್ಲಿ ಇಟ್ಟುಕೊಂಡ ಪುಟ್ಟ ಕನ್ನಡಿ ರಂಗೇರಿ, ಅದರಲ್ಲೂ ಪುಳಕ ಕಾತರ ಕಂಡದ್ದು, ಸಂಜೇ ಮಲ್ಲಿಗೆ ಹೂವನ್ನು ಅಂಗೈತಿಕ್ಕಿ ಗುಲಾಬಿ ಬಣ್ಣ ಮಾಡಿದ್ದು, ಕಾಕೇಹಣ್ಣನ್ನು ತಂದು ಶಾಯಿಮಾಡಿ ಪುಟ್ಟ ಬಣ್ಣದ ಬಾಟಲಿಯಲ್ಲಿ ತುಂಬಿ ಇರಿಸಿದ್ದು, ಹಾಡಿಯಲ್ಲಿ ನೇರಳೆ ಹಣ್ಣು ತಿಂದು ನಾಲಿಗೆಯಲ್ಲಾ ಗಡು ನೀಲಿಯಾಗಿದು, ಭಾನುವಾರ ತಪ್ಪದೇ ಆಟ ಆಡಲು ಹೋಗುತ್ತೇವೆ ಅಂತ ಚರ್ಚಿನ ಫಾದರ ಎದುರುಗಡೆ ಸುಮ್ಮ ಸುಮ್ಮನೇ ಕನ್ಫೆಸ್ ಮಾಡಿದ್ದು, ತೋತಾಪುರಿ ಮಾವಿನ ಮರಕ್ಕೆ ಕಲ್ಲು ಒಗೆದು ಪಟೇಲರ ಮನೆಯ ಬಣ್ಣದ ಗ್ಲಾಸು ಒಡೆದದ್ದು, ಕೋಣಿಯ ಬಾಗಿಲು ಹಾಕಿಕೊಂಡು ಚಿಕ್ಕಿಯರು ಹಲಸಿನ ಹಣ್ಣಿನ ತೊಳೆಗಳನ್ನು ಬಿಡಿಸುವಾಗ, ಆಸೆ ತಡೆಯಲಾಗದೇ ಕೋಣೆಯ ಬಾಗಿಲು ಹಾಕಿಕೊಂಡು ಚಿಕ್ಕಿಯುರು ಹಲಸಿನ ಹಣ್ಣಿನ ತೊಳೆಗಳನ್ನು ಬಿಡಿಸುವಾಗ, ಆಸೆ ತಡೆಯಲಾಗದೇ ಕಿಟಕಿಯಲ್ಲಿ ಕೈಹಾಕಿ ಬೇಡುತ್ತಿದ್ದುದು, ಶಾಲೆಮೈಲಿಗೆ ಉಪ್ಪರಿಗೆ ಮೆಟ್ಟಿಲುಗಳ ಮೇಲೆ ಬಿಚ್ಚಿ ಹಾಕಿ ಬೆತ್ತಲಾಗಿ ಬಚ್ಚಲು ಮನೆಗೆ ಓಡಿ ಹೋಗಿದ್ದು, ಓಲೆ ಕೊಡೆಯ ಮೇಲೆ ಡಾಂಬರಿನ ಹೆಸರು ಹಾಕಿದ್ದು, ಸಹಜ ಅನುಭವಿಸಿದು ಅತ್ತರಿನ ಕಂಪು, ಸಂಭ್ರಮದ ಸಂಕ್ರಾಂತಿ.
ಈ ದಿನ ಶಾಲೆಯ ಮಕ್ಕಳ ಖುಷಿನೋಡಿ ನನಗೆ ಖುಷಿಗಳು ಎದೆಗೆ ಬಂದು ಅಪ್ಪಳಿಸಿದವು. ಈಗಿನ ಮಕ್ಕಳಿಗೆ ಹಾಡಿ ಇಲ್ಲ, ಅಗ್ರಹಾರವಿಲ್ಲ, ಓಲೆ ಕೊಡೆ ಇಲ್ಲಾ ಹಸಿರು ಗದ್ದೆ ಬಯಲು ನಾಚಿಕೆ ಮುಳ್ಳುಗಳ ಸ್ಪರ್ಶವಿಲ್ಲ ಎಲ್ಲೂ ಹಟ್ಟಿಯನ್ನು ಕಾಣದ ಮಕ್ಕಳು, ಹೆರೆಮಣೆ ಅರೆಯುವ ಕಲ್ಲಿನ ಸಪ್ಪಳವನ್ನೇ ಕೇಳದ ಮಕ್ಕಳು, ತೆಂಗಿನ ಹೆಡೆಯ ಚಪ್ಪರದ ಹುಂಡುಗಳು ಗೊತ್ತಿಲ್ಲ, ಎಲ್ಲಿಯೂ ಬಿಳಿನಂದೀ ಬಟ್ಟಲು ನೀಲಿ ಶಂಖ ಪುಷ್ಪ ಹೂಗಳನ್ನು ಮಕ್ಕಳ ಕೈಗಳು ಸ್ಪರ್ಶಿಸುವದಿಲ್ಲ. ಕಂದೀಲು ಅಂದರೇನು ಅಂತ ಕೇಳುವ ಮಕ್ಕಳು. ಹಂಡೆ ಎಣ್ಣೆ ನೀರು ಅಂದರೆ ಗೊಂದಲಕ್ಕೆ ಒಳಗಾಗುವ ಮಕ್ಕಳು. ಬರೀ ರಾಕ್ ಸಂಗೀತ ಪಾಪ್ ಮೂಜಿಕ್ ಕಂಪ್ಯೂಟರ್ ಆಟಗಳು, ಮಕ್ಕಳ ಎಲ್ಲಾ ಕಂಪನಗಳನ್ನೂ ಕಳೆದುಕೊಂಡಿವೆ. ಮತ್ತು ಬಟನ್ ಗೊಂಬೆಗಳತರಹ ಇವೆ ಅನ್ನಿಸುತ್ತದೆ.
ಆದರೂ ಗೆಳೆಯಾ ಮಾಸ್ತರಿಕೆ ಎಂಬುದು ನಾವೇ ಕಟ್ಟಿಕೊಂಡ ಸ್ವರ್ಗ. ಕೆಲವು ಕ್ಷಣ ಕೆಲವು ಪಲಕುಗಳು ಕೆಲವು ನೋಟಗಳು, ಕೆಲವು ಮಾತುಗಳು ಕೆಲವು ಸ್ಪರ್ಶಗಳು ಕೆಲವು ನಂಬಿಕೆಗಳು, ಜಗತ್ತಿನ ಜನರು ಕೊಡದ ಘನತೆ ಪ್ರೀತಿಯ ಒರತೆ ಮಕ್ಕಳಿಂದ ನಮಗೆ ಸಿಗುತ್ತದೆ. ನೀನು ಕೆಲದಿವಸವಾದರೂ ಮಾಸ್ತರಿಕೆ ಮಾಡಬೇಕಿತ್ತು ಗೆಳೆಯಾ.
ನಿನ್ನ,
ಕಸ್ತೂರಿ