ಪ್ರೀತಿಯ ಗೆಳೆಯಾ,
ಈ ಸಂಜೆ ಒಬ್ಬಳೆ ಇದ್ದೆ. ತಂಗಿ ಮಳೆಹನಿ ಅರಸಿ ಉಡುಪಿಗೆ ಹೋಗಿದ್ದಾಳೆ. ಒಬ್ಬರೇ ಇದ್ದಾಗ ಯಾಕೋ ನನಗೆ ಇದ್ದಕ್ಕಿದ್ದ ಹಾಗೆ ಎದೆಕಿತ್ತು ತಿನ್ನುವ ನೆನಪುಗಳು ಕಾಡುತ್ತವೆ. ಸಂಜೆಯ ಗೌವ್ ಎನ್ನುವ ಕತ್ತಲು ಎದೆಯೊಳೆಗೆ ಇಳಿಯುತ್ತದೆ. ನೀನು ಕಂಪ್ಯೂಟರ್ ಕಲಿ ಅನ್ನುತ್ತಿ. ನನಗೋ ಈ ಸಕ್ಕರೆ ಖಾಯಿಲೆ, ಮಂಜು ಗಟ್ಟಿದ ಕಣ್ಣು, ಧೈರಾಯ್ಡಿಡ್‌ನಿಂದ ಟೊಳ್ಳು ಗಟ್ಟಿದ ಎಲುಬುಗಳು, ಈ ಮೆನೋಪಾಜ್ ಏಜ್. ಹುಚ್ಚುಚ್ಚು ಬ್ಯಾನಿ ಬೇಸರಿಕೆಗಳು, ಎಲ್ಲೆಂದರಲ್ಲಿ ನೋವು. ಮೇಲಾಗಿ ಒಂಟಿತನ. ಒಟ್ಟಿನಲ್ಲಿ ಸಂಜೆ ಶರೀರ ಹಾಗೂ ಮನಸ್ಸಿನಲ್ಲಿ ಯಾತನಾ ಶಿಬಿರ, ಹಂದರ ಹಾಕಿರುತ್ತದೆ. ಹಾಗೆ ಅಂಗಳದಲ್ಲಿ ತೇಲು ಮೋಡ ನೋಡುತ್ತ ಚಹಾ ಕುಡಿಯುತ್ತಿದ್ದೆ. ಪೋನ್ ರಿಂಗಣಿಸ ತೊಡಗಿತು. ಏಕೋ ಏಳಲು ಬೇಸರವಾಗಿ ಹಾಗೆ ಕುಳಿತಿದ್ದೆ. ನನಗೆ ಸೆಲ್ ಫೋನ್ ಕಂಪ್ಯೂಟರ್ ಯಾಕೋ ಹಿಡಿಸುವದಿಲ್ಲ. ಮತ್ತೆ ಅರ್ಧಗಂಟೆ ಬಿಟ್ಟು ಪೋನಿನ ಗಂಟೆ ಬಿಟ್ಟು ಬಿಡಲಾರದೇ ಭಾರಿಸಿತು. ತೇಲು ಮೋಡಗಳನ್ನು ಅವುಗಳ ಪಾಡಿಗೆ ಬಿಟ್ಟು, ಒಳಬಂದು ಫೋನ್ ಎತ್ತಿದಾಗ ನಮ್ಮ ಪ್ರಜಾವಾಣಿ ವರದಿಗಾರ ಆಶ್ಚರ್ಯದ, ಅಘಾತದ ಸುದ್ಧಿಯನ್ನು ಹೇಳಿದ. ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಬಂದಿದೆ ಅಂದ. ಮೊದಲು ನಂಬಲಿಲ್ಲ. ಬಹುಮಾನ ಯಾವುದೆಂದು ಮಾತ್ರ ಆತಹೇಳಲಿಲ್ಲ.
ಖುಷಿಗೆ ಹಿಗ್ಗುವ ಗುಣ ಬಂದಿದೆಲ್ಲ. ತಲೆಯ ತುಂಬ ಹೇಳಲಾಗದ ಯೋಚನೆಗಳು. ಮನಸ್ಸಿನೊಳಗೆ ಎಲ್ಲೋ ಒಂದು ಕಡೆ ಖುಷಿಯ ಅಲೆಗಳು ಎದ್ದವು. ಮನುಷ್ಯನ ಮನಸ್ಸು ಎಷ್ಟೊಂದು ವಿಚಿತ್ರ. ಖುಷಿಯ ಸುದ್ದಿ ಎಲ್ಲೇ ಅಡಗಿರಲಿ ಅದನ್ನು ಆತ ಅಟ್ಟಾಡಿಸಿ ಹುಡುಕುತ್ತಾನೆ. ನಾನು ಹಾಗೆ ಎಲ್ಲರಿಗೂ ಪೋನು ಮಾಡತೊಡಗಿದೆ. ಪ್ರತಿ ಕಡೆಯಿಂದಲೂ ಸರಿಯಾದ ಸುಳಿವು ಸಿಕ್ಕಲಿಲ್ಲ. ಒಮ್ಮೊಮ್ಮೆ ಅನಿಸುತ್ತದೆ ಈ ಪ್ರಪಂಚದಲ್ಲಿ ಮನುಷ್ಯನ ಮನಸ್ಸು ಅದಷ್ಟು ಮೋಸದ್ದಾಗಿರುತ್ತದೆ. ಇನ್ನೊಬ್ಬರನ್ನಲ್ಲ ತನ್ನನ್ನು ತಾನೇ ಎಷ್ಟೋ ಸಲ ಮೋಸಮಾಡಿಕೊಂಡಿರುತ್ತಾನೆ. ಹಾಗೆಯೇ ಮಾಡಿಕೊಳ್ಳುತ್ತ ಹೋಗುತ್ತಾನೆ, ತಾಯಿಯಸ್ಪರ್ಶ ನೀಡುವ ತಂಗಿ ಪಕ್ಕದಲ್ಲಿ ಇರಲಿಲ್ಲ. ಆ ಸಂಜೆ ಖುಷಿಯಲ್ಲೂ ಮನಸ್ಸು ವ್ಯಗ್ರವಾಗಿತ್ತು. ಆ ದಿನ ನೀನು ಕೂಡಾ ಫೋನಿಗೆ ಸಿಗಲಿಲ್ಲ. ಕಾರಣ ವಿಲ್ಲದೇ ಯಾವಕಾರ್ಯವೂ ಆಗುವುದಿಲ್ಲ. ಆದರೆ ಮನಸ್ಸಿನ ಯೋಚನೆಗಳ ಕಾರಣಗಳಿಗೆ ಕಾರ್ಯಬೇಕಾಗಿಲ್ಲ. ಅದು ಅವರವರ ಭಾವಕ್ಕೆ ಬಿಟ್ಟು ಕೊಟ್ಟ ವಿಷಯ. ಆ ಸಂಜೆ ಬಹುಮಾನದ ಖುಷಿಯ ಒಂದು ಎಳೆ ಹಿಡಿದು, ನನ್ನ ಪುಟ್ಟ ಸಂಗಾತಿ ರೇಡಿಯೋ ಅನ್ನು ಹಿಡಿದುಕೊಂಡು ಮನೆಯ ಟೇರೇಸಿನ ಮೇಲೆ ಹತ್ತಿ ರೇಡಿಯೋ ಆನ್ ಮಾಡಿದೆ. ಬೆಳ್ಳಕ್ಕಿಸಾಲು ಸಾಲು ತೇಲಿ ಗೂಡು ಅರಸಿ ಹೋಗುತ್ತಿದ್ದವು. ರಫಿ ಲಿಖೆಜೋ ಖತ್ ತುಜೆ ಓ ತೇರಿಯಾದ ಮೆ. ನನಗಾಗಿ ಪೂರ್ತಿ ನನಗಾಗಿ ಹಾಡಿದ. ಮಿಣಿ ಮಿನಿ ಮಿನುಗುವ ನಕ್ಷತ್ರಗಳು ನನ್ನನ್ನು ಕಂಡು ನಕ್ಕಂತಾಯಿತು. ಆ ಕ್ಷಣ ಗೆಳೆಯಾ ಖಂಡಿತ ನಿನ್ನ ಮರೆತಿದ್ದೆ ನಾನು. ಧ್ವನಿ ಅಡಗಿದ ನನ್ನ ಧ್ವನಿಯಲ್ಲೂ ರಾಗಗಳು ಹುಟ್ಟಿದ್ದವು. ಹೀಗೆ ಪ್ರತಿ ಮಬ್ಬಾದ ಸಂಜೆ, ದುಗುಡದ ಸಂಜೆ, ಖುಷಿಯ ಕ್ಷಣಗಳನ್ನು ನನ್ನ ಸೆರಗಿನಲ್ಲಿ ಕಟ್ಟಲಿ ಅಂತ ಹಾರೈಸು ಗೆಳೆಯಾ. ಯಾಕೆಂದರೆ ಒಮ್ಮೊಮ್ಮೆ ನೀನು ಅಮ್ಮನಂತೆ ನನ್ನ ಆರೈಕೆ ಮಾಡುತ್ತಿ.
ಮೊನ್ನೆ ಮೂವತ್ತು ವರ್ಷಗಳ ದಾವಂತ ಬದುಕಿನ ಹಿನ್ನಲೆಯಲ್ಲಿ ನಾನು ರಾಜಧಾನಿಯ ಕಡೆ ಮುಖಮಾಡಿದ್ದೆ. ಒಳಗೆ ಹೇಳಲಾಗದ ತಳಮಳ. ಜೇಡನ ನೂಲಿನಂತೆ. ಒಂದು ಖುಷಿಮಾತ್ರ ನನ್ನೊಡನೆ ಇತ್ತು. ಬೆಂಗಳೂರು ಬಸ್ಸು ಹತ್ತಿ ಕುಳಿತಾಗ ಹೇಳಲಾಗದ ಸೆಖೆಯಿಂದ ತೊಯ್ದು ತಪ್ಪಡಿಯಾಗಿದ್ದೆ. ಯಾವುದೋ ಕತ್ತಲೆಯ ಸುರಂಗದೊಳಗೆ ಸಾಗುವಂತಹ ಅನುಭವ. ಮಧ್ಯೆ ರಾತ್ರಿಯ ಹೊತ್ತಿಗೆ ಹೊಸಪೇಟೆ ಡ್ಯಾಮಿನ್ ಲೈಟುಗಳು, ಹರಿಯುವ ನೀರಿನ ಸಪ್ಪಳ ಎದೆಗೆ ಅಪುಳಿಸಿದವು. ಗಟ್ಟಿಯಾಗಿ ಕಣ್ಣು ಮುಚ್ಚಿ ತಂಗಿಯ ತೇಲುವ ಖುಷಿಯ ಮುಖ ನೆನಪು ಮಾಡಿಕೊಂಡೆ. ಮತ್ತೆ ಕಣ್ಣು ತೆರೆದಾಗ ಚಿತ್ರದುರ್ಗದ ಕಸ ತುಂಬಿದ ರಸ್ತೆಗಳು, ಶೆಟರ್ಸ್ ಎಳೆದ ಅಂಗಡಿಗಳು ತಿರುಗಿ ತಿರುಗಿ ಬರುವ ಸರ್ಕಲ್‌ಗಳು. ಕತ್ತಲಲ್ಲಿ ಚಳಿ ನರನರಗಳಲ್ಲಿ ಇಳಿಯಿತು. ಜೊತೆಯಲ್ಲಿ ಬೃಂದಾವನದ ಹುಡುಗ ಇದ್ದ. ದೀದೀಚಳಿ ಆದರೆ ಶಾಲು ಹೊಡೆದು ಕೊಳ್ಳು ಅಂದ. ಇಲ್ಲ ಆ ರಾತ್ರಿಯಲ್ಲಾ ಹೊರಗೆ ಚಳಿ ಅನಿಸಿದರೂ ಒಳಗೆಲ್ಲಾ ದಾವಂತ ಜಾರುವ ಸೋರುವ ನೆನಪುಗಳು. ಖುಜುಮಾರ್ಗದಲ್ಲಿ ನಡೆದ ನನಗೆ ದಕ್ಕಿದ್ದು ಬರೀ ಹಳವಂಡ ಅವಮಾನಗಳು. ವ್ಯಕ್ತಿಯ ಘನವಾದ ಸ್ವಭಾವವೇ ಲಜ್ಜೆ. ತಾಯಿ ತಂದೆ ಸತ್ತ ಹೆಣ್ಣು ಮಕ್ಕಳು ಅಂತರಂಗದಲ್ಲಿ ಒಂದು ಎಚ್ಚರಿಕೆಯನ್ನು ಇಟ್ಟು ಕೊಂಡಿರುತ್ತಾರೆ. ನೀನು ಅರ್ಥ ಮಾಡಿಕೊಳ್ಳ ಬಲ್ಲೆ ಗೆಳೆಯಾ. ರಾಜಧಾನಿ ಎಂದರೆ ನನಗೆ ಎದೆಯಲ್ಲಾ ನಡುಕ. ಆ ಕಾರು ಬಸ್ಸುಗಳು. ದೊಡ್ಡ ದೊಡ್ಡ ಮಹಲುಗಳು, ವಿಚಿತ್ರ ಮುಖಗಳು, ಅಪರಿಚಿತ ಕಣ್ಣುಗಳು, ಸಾಯುತ್ತಾ ಬದುಕುತ್ತಾ ಸಾಗುವ ನೋಟಗಳು, ಎದೆಯಲ್ಲಿ ಹಸಿಯಾಗಿ ರಾಡಿಯಾದ ಆತಂಕಗಳು, ಹಿಂದೆ ಬಂದ ಮನಸ್ಸಿನ ಸಾವು, ಎದುರಿಸಿದ ಅವಘಡಗಳು, ನಿಮ್ಹಾನ್ಸ ಆಸ್ಪತ್ರೆ, ಎಲ್ಲೆಲ್ಲಿಗೂ ಹಾರುವ ವಿಮಾನಗಳು, ಜಾರುವ ಬಸ್ಸುಗಳು, ಎನೆಲ್ಲಾ ನಡೆಯುವ ಚಟುವಟಿಕೆಗಳು. ನಾನು ಏನು ಎಂಬುದು ಈ ನಗರದಲ್ಲಿ Out Door. ಮೆಜೆಸ್ಟಿಕ್‌ನಲ್ಲಿ ಇಳಿದಾಗ ನನಗೆ ದಿಕ್ಕಯಾವುದು ದಿಶೆಯಾವುದು ಅಂತ ತಿಳಿಯಲಿಲ್ಲ. ಯಾವ ಪ್ರಶಸ್ತಿಯೂ ಬೇಡ. ಬಂದ ದಾರಿಗೆ ಯಾವುದಾದರೂ ಬಸ್ಸು ಇದ್ದರೆ ವಾಪಸ್ಸು ಹೊರಟು ಹೋಗ ಬೇಕೆನಿಸಿತು. ಯಾಕೋ ನನಗೆ ರಾಜಧಾನಿಯೊಂದಿಗೆ ಮುನಿಸು ಜಗಳ ತಕರಾರು.
ರಸ್ತೆಯ ತುಂಬೆಲ್ಲಾ ಗಲೀಜು. ಎಲ್ಲೆಂದರಲ್ಲಿ ತಿಪ್ಪೆಗಳು ಕಾಣಿಸಿದವು. ಮೆಜೆಸ್ಟಿಕ್ ತುಂಬಾ ಕೊಳಕಾಗಿದೆ. ಹೆಜ್ಜೆಗಳ ದಾಳಿಯಿಂದ ಬೆಂಗಳೂರಿನ ಚಂದ ಪೂರ್ತಿ ಮಂಕಾಗಿದೆ. ಎಲ್ಲೆಲ್ಲೂ ರಿಂಗು ರಸ್ತೆಗಳು. ಕಾರ್ಬನ್ನಿನಿಂದ ಕಣ್ಣು ಮುಖವೆಲ್ಲಾ ಉರಿ. ಒಂದು ಹೋಟೆಲಿನಲ್ಲಿ ರೂಮು ಹಿಯಿಡುವದರೊಳಗಾಗಿ ನನಗೆ ಉಸಿರಾಡಲು ತುಂಬಾ ಕಷ್ಟವಾಯ್ತು. ನೋವುಗಳು ಬಹಳ ಕಠಿಣ. ಒಮ್ಮೆ ಗುದ್ದಲು ಪ್ರಾರಂಭಿಸಿದರೆ ಮೈಯಲ್ಲಾ ಹಣ್ಣು ಹಣ್ಣು ಮಾಡುತ್ತದೆ. ಉಪಶಮನ ಎಂಬಂತೆ ಎಲ್ಲಾ ಅಂಗಡಿಗಳಿಗೆ ಬಣ್ಣ ಬಣ್ಣಲೈಟುಗಳನ್ನು ಹಾಕಿದ್ದರು. ಅಲ್ಲಿ ನನ್ನ ಮನಸ್ಸಿನೊಂದಿಗೆ ತಳಕು ಹಾಕಿಕೊಂಡ ಸಂಬಂಧಗಳನ್ನು ಕಲ್ಪಿಸಿಕೊಂಡೆ. ಯಾವ ಸಂಬಂಧಗಳು ತಬ್ಬಿಕೊಳ್ಳಲಿಲ್ಲ. ಎಲ್ಲವೂ ಸಂಕ್ರಮಣ ಕಾಲ.
ರಾಜಧಾನಿ ದುಬಾರಿಯಾಗಿದೆ. ವ್ಯಾಪಾರ ಮಾಡಿದರೆ ಗುರುತು ಉಳಿಸಿ ಹೋಗುವ ಗಾಯದ ಹಳವಂಡ. ರಿಕ್ಷಾಚಾಲಕರು ಬರೀ ಮೋಸ. ಮೆಜೆಸ್ಟಿಕ್ ನಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಎಪ್ಪತ್ತು ರೂಪಾಯಿ ತೆಗೆದುಕೊಂಡರು. ತೀರಾ ಬಡತನದ ಬಾಳು ಕಂಡವಳು ನಾನು. ಆದರೆ ನನಗೆ ಮೋಸ ಮಾಡುವವರನ್ನು ಕಂಡರೆ ಪಿತ್ತನೆತ್ತಿಗೆ ಏರುತ್ತದೆ. ಅವನೊಂದಿಗೆಸರಿಯಾಗಿ ಜಗಳವಾಡಬೇಕೆಂದರೆ ಧ್ವನಿ ಇಲ್ಲ. ಕಾರ್ಬನ್ ಹೊಗೆ. ಧುಮು ಧುಮು ಮಾಡುತ್ತ ರೊಕ್ಕ ಎಣಿಸಿಕೊಟ್ಟೆ.
ಸ್ಪರ್ಧೆಯಲ್ಲಿ ಗೆದ್ದ ಮನಸ್ಸು ಹಗುರವಾಗಿ ತೇಲುತ್ತಿತ್ತು. ಮತ್ತೆ ಕವಿ ನಿಸ್ಸಾರರು ಪ್ರೀತಿಯಿಂದ ಹರಸಿದರು. ಒಬ್ಬ ಧೀಮಂತ ಪ್ರೀತಿಯ ಕಳಕಳಿಯ ಕವಿ ಹೃದಯ ಎಷ್ಟೊಂದು ಪುಲಕಿತ ಕಂಪನಗಳನ್ನು ನನ್ನಲ್ಲಿ ಹುಟ್ಟಿಹಾಸಿಕಿತ್ತು. ಗೆಳೆಯಾ! ರಾತ್ರಿಯ ಪ್ರಯಾಣದ ದಿಗಿಲುಗಳು ಕನಸಾಗಿ ಕಂಗೊಳಿಸಿದವು. ಆ ಕ್ಷಣ ನಾನು ತುಂಬ ಭಾವುಕಳಾಗಿದ್ದೆ ಗೆದ್ದಿದ್ದೆ. ಬರುವಾಗ ಸುರಂಗದಲ್ಲಿ ನಡೆದು ಕಾಲು ಉಳುಕಿಸಿಕೊಂಡು ಬಹಳ ವರ್ಷಗಳ ನಂತರ ನನ್ನ ಪ್ರೀತಿಯ ರೇಲ್ವೆ ಹಳಿಗಳ ರೇಲ್ವೆ ಡಬ್ಬದಲ್ಲಿ ಕಾಲಿರಿಸಿದೆ. ಯಾಕೋ ಗೆಳೆಯಾ ರೇಲ್ವೆ ಹಳಿಗಳು, ಸ್ಟೇಷನ್ ಚಹಾ ಮಾರುವ ಹುಡುಗರು. ಬ್ಯಾಗಗಳೊಂದಿಗೆ ಗಂಡಸರನ್ನು ಹಿಂಬಾಲಿಸುವ ಹೆಣ್ಣು ಮಕ್ಕಳು, ರೇಲ್ವೆ ಸ್ಟೇಷನ್ನಿನ ಗಡಿಯಾರಗಳು. ನನಗೆ ಬದುಕಿನ ಎಲ್ಲಾ ಪಲ್ಲಟಗಳನ್ನು ಮನಸ್ಸಿನ ಉಡಿಯಲ್ಲಿ ಕಟ್ಟಿ ಬಿಡುತ್ತವೆ. ನಾನು ರೇಲ್ವೆ ಪ್ಲಾಟಪಾರಂನಲ್ಲಿ ವಿಚಿತ್ರವಾದ ಹೊಸಗಾಳಿಯಲ್ಲಿ ಉಸಿರಾಡಲು ಪ್ರಯತ್ನಿಸಿದೆ.
ಯಾರೂ ಸುಖವಾಗಿ ಇರುವಂತೆ ಕಾಣಲಿಲ್ಲ. ಎಲ್ಲರ ಯಾತನೆಗಳಲ್ಲೂ ಚಲನೆಗಳು ಇತ್ತು. ಸ್ವಾಗತಿಸಲು ಬೀಳ್ಕೊಡಲು ಜನರು ಸೇರಿದ್ದರು. ಆ ಕಪ್ಪು ಕತ್ತಲೆಯಲ್ಲಿ ನಿನ್ನಮುಖ, ನಿನ್ನ ಮುಗುಳ್ನಗೆ ಸೂಸುವ ಮುಖ ಮಾತ್ರ ನಿಚ್ಚಳವಾಗಿ ಕಾಣಿಸಿತು.
ನಾನು ಸಾಗುತ್ತಿರುವ ದಿಕ್ಕು ರಸ್ತೆ ಹಳ್ಳಿ ಡಬ್ಬಿಗಳಿಗೆ ನಾನ್ಯಾರೆಂದು ಗೊತ್ತಿಲ್ಲ. ಅದರ ಮೇಲೆ ಚಲಿಸುತ್ತಿರುವವರ ಬಗ್ಗೆ ಗೊತ್ತಿಲ್ಲ. ನಿರ್ಜೀವ ರೈಲು ಸಜೀವ ಮನಸ್ಸುಗಳನ್ನು ಹೊತ್ತು ಸಾಗಿದೆ. ಆ ಕ್ಷಣ ಎಲ್ಲರೂ ಒಂದರಲ್ಲಿ ಬಂಧಿತರಾಗಿದ್ದರು. ತಂಪಾದ ಗಾಳಿ, ತಿಳಿಬೆಳದಿಂಗಳು, ರೇಲ್ವೆ ಡಬ್ಬಿಯ ಕಿಟಕಿಗಳಿಂದ ಹಾಯ್ದು ಬಂದು ಮೈ ಮುಖ ಸವರುತ್ತಿದ್ದವು. ಆ ದಾಟಿ ಹೋಗುವ ಕತ್ತಲು, ಗಾಳಿ, ಬೆಳದಿಂಗಳು ಮಾತ್ರ ಸುಂದರವಾಗಿದ್ದವು. ಅಲ್ಲಿಯಾರು ಯಾರಿಗಾಗಿಯೂ ಕಾಯುತ್ತಿರಲಿಲ್ಲ. ನೀನು ನನ್ನನ್ನು ಮರೆತಂತೆ ಅನಿಸಿತು. ಮನಸ್ಸು ಹೊಯ್ದಟಕ್ಕೆ ಹೊಂದಿಕೊಂಡಿತ್ತು. ಯಾಕೋ ಮಾಲಕಂಸ ರಾಗದ ಧ್ವನಿಗಳು ಕಿವಿಗೆ ಬಂದು ಅಪ್ಪಳಿಸಿದವು. ಗಮನವಿಲ್ಲದ ರಾಗಗಳು ಏನನ್ನೂ ಮಾಡದೇ ಹಾಗೆಯೇ ವಾಪಸ್ಸು ಹೊರಟುಹೋದವು.
ರಾಜಧಾನಿಯಲ್ಲಿ ನಾನು ನಡೆದ ದಾರಿಯಲ್ಲಿ ಯಾರೂ ಯಾರಿಗಾಗಿ ಕಾಯುತ್ತನಿಂತಿರಲಿಲ್ಲ ಗೆಳೆಯಾ.
ನಿನ್ನ,
ಕಸ್ತೂರಿ