ವರುಣನ ಮಗ ಭೃಗು ತಿಳಿದಿದ್ದ
ಎಲ್ಲರಿಗಿಂತಲು ತಾನೇ ಬುದ್ಧ
ಒದ್ದನು ವರುಣನು ಆತನ ಪೃಷ್ಠಕೆ
ಭೃಗು ಮುಗ್ಗರಿಸಿದನಾಚೆಯ ಲೋಕಕೆ
ಭೃಗು ನೋಡಿದ-
ಅಲ್ಲೊಬ್ಬಾತ
ಇನ್ನೊಬ್ಬಾತನ ಬಿಚ್ಚುತಲಿದ್ದ
ವೃಕ್ಷದ ತೊಗಟೆಯ ಬಿಡಿಸುವ ಹಾಗೆ
ಒಂದೊಂದೇ ಪೊರೆ
ಬೀಳಲು ಕೆಳಗೆ
ಒಳಗೇನುಳಿವುದು ?
ಕೊನೆಗೇನುಳಿವುದು ?
ಇಂಥಾ ಕೆಲಸವು ಎಂದಿಗೆ ಮುಗಿವುದು ?
ಎನ್ನಲು ಭ್ರೃಗುವು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !
ಬಿಚ್ಚುವ ವ್ಯಕ್ತಿಯೆ ಬಿಚ್ಚುವುದಿಲ್ಲ
ಬಿಚ್ಚಿದುದೆಲ್ಲಾ ಮುಗಿಯುವುದಿಲ್ಲ
ಪೊರೆಯೊಳಗಿದ್ದರೆ ಪೊರಯೇನಂತೆ
ಅಷ್ಟಕೆ ಯಾತಕೆ ಯಾರಿಗೆ ಚಿಂತೆ ?
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ
ಭೃಗು ನೋಡಿದ-
ಒಬ್ಬಾನೊಬ್ಬ
ಬಾಯಿಯ ತೆರೆದು ಕೂಗುತಲಿರುವ
ಆದರು ಹೊರಡದು ಒಂದೂ ಶಬ್ದ
ಇದ ನೋಡಿದ ಭ್ರಗು-
ವಾದನು ಸ್ತಬ್ದ
ಕೂಗಿದರೇತಕೆ
ಧ್ವನಿಯೇ ಇಲ್ಲ ?
ಇದಕುತ್ತರವ ಯಾವನು ಬಲ್ಲ ?
ಎನ್ನಲು ಭೃಗು ಆತನು ಹೇಳಿದ-
ಹೊಗೆಲೊ ಹೈದ !
ವರುಣನ ಕೇಳು !
ಕಿವಿಗಳಿಗೆಲ್ಲವು ಕೇಳಲೆಬೇಕೆ ?
ಕೇಳದ ಸ್ವರವೂ ಇರದೇ ಏಕೆ?
ಕೇಳುವ ಸಮಯ ಸರಿಯಾಗಿ ಕೇಳು
ಕೇಳದ ಸಮಯ ಕಿವಿಮುಚ್ಚಿಕೊಳ್ಳು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ
ಭೃಗು ನೋಡಿದ-
ಒಬ್ಬ ವಿದೂಷಕ
ಸಿಂಹಾಸನವ ಏರಿದ ಕೌತುಕ
ನಕ್ಕವರೆಲ್ಲರ ಅಳಿಸುತಲಿದ್ದ
ಅತ್ತವರನ್ನೂ ನಗಿಸುತಲಿದ್ದ
ಅತ್ತವರಾರು ?
ನಕ್ಕವರಾರು ?
ಇಂಥ ರಾಜ್ಯದಿ ಉಳಿದವರಾರು ?
ಎನ್ನಲು ಭೃಗು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !
ಸಿಂಹಗಳಿಲ್ಲದ ಸಿಂಹಾಸನದಿ
ಕೂರದೆ ಏನು ಯಾರೂ ಸುಖದಿ ?
ನಕ್ಕರೆ ಬಾಯಿ ಅತ್ತರೆ ಕಣ್ಣು
ಹಾಲು ಕಡೆದೇ ಸಿಗುವುದು ಗಿಣ್ಣು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ.
ಭೃಗು ನೋಡಿದ-
ಕಾರ್ಗತ್ತಲೆ
ಮೈಬಣ್ಣದ ತೀರಾ ಬೆತ್ತಲೆ
ವೃಕ್ತಿಯು ಭಾರೀ ಗದೆಯನು ಹಿಡಿದು
ನದಿಯೆರಡನ್ನೂ
ಕಾಯುತ್ತಿರುವುದು
ಒಂದರ ತುಂಬಾ
ಹರಿಯುವ ನೆತ್ತರು
ಇನ್ನೊಂದರಲಿ ಯಾವುದೊ ಅತ್ತರು
ಎರಡೂ ನದಿಗಳು ಹೋಗುವುದೊಂದೇ
ಬಯಲಲಿ ತುಸು
ಹಿಂದೇ ಮುಂದೇ
ಯಾತಕೆ ಗದೆ
ಯಾತಕೆ ಬೆತ್ತಲೆ
ಯಾತಕೆ ಎರಡೂ ನದಿಗಳು ಇತ್ತಲೆ ?
ಎನ್ನಲು ಭೃಗು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !
ಹಲವರು ಸತ್ತರು ಕೆಲವರು ಅತ್ತರು
ಕಾವಲುಗಾರನ ಬಟ್ಟೆಯ ಕಿತ್ತರು
ನೀರಿನ ಗುಣ ಕೆಳಗೇ ಹರಿವುದು
ಆವಿ ಮಾತ್ರವೆ ಮೇಲೇರುವುದು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ
ಭ್ಸಗು ನೋಡಿದ-
ಮೈಕೈ ಅಸ್ಥಿ
ಆದಂಥವನೂಬ್ಬನೆ ಕುಸ್ತಿ
ಮಾಡುತ್ತಿರುವ ನೋಡುತ್ತಿರುವ
ಗಾಳಿಯ ಜತೆ
ಹೋರುತ್ತಿರುವ
ಹಲ್ಲನು ಕಡಿದು
ತಲೆಯನು ಬಾಗಿ
ತಾನೂ ಹೊಡೆತವ ಕೊಂಡವನಾಗಿ
ಯಾರೋ ದೊಪ್ಪನೆ ಕೆಡವಿಸಿ ಒಮ್ಮೆಲೆ
ಕುಳಿತಿರಬಹುದೆ
ಅವನೆದೆ ಮೇಲೆ ?
ಯಾತಕೆ ಈ ಸ್ಥಿತಿ
ಯಾತಕೆ ಅಸ್ಥಿ
ಯಾರೊಂದಿಗೆ ಈ ನಡೆಸಿದ ಕುಸ್ತಿ?
ಎನ್ನಲು ಭೃಗು ಅತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !
ಕಾಣುವುದೂಂದೇ ವಾಸ್ತವವಲ್ಲ
ಕಾಣದೆ ಇರುವುದು ಸುಳ್ಳೇನಲ್ಲ
ಆಡುವ ವ್ಯಕ್ತಿಗೆ ಆಟವೆ ಮುಖ್ಯ
ಗೆಲುವಿನಂತೆಯೆ ಸೋಲೂ ಶಕ್ಯ
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ
ಭೃಗು ನೋಡಿದ-
ಇಬ್ಬರು ಸ್ತ್ರೀಯರು
ತೊಡೆ ತೆರೆದಿದ್ದರು ಅರೆತೆರೆದಿದ್ದರು
ಲೋಕದ ಸಕಲೈಶ್ವರ್ಯವು ಅಲ್ಲಿ
ಹುದುಗಿಟ್ಟಂತೆ
ಹೊರಗೂ ಚೆಲ್ಲಿ
ಕತ್ತಲು ಬೆಳಕು
ನೆರಳಿನ ಸರ್ಪ
ಯಾರಿಗು ತಲೆ ಬಾಗದ ದರ್ಪ
ಭೃಗು ದಂಗಾದ ಎಷ್ಟೋ ಕಾದ
ಅಳುಕುತ ಅವರ
ಬಳಿಗೂ ಹೋದ
ಕತ್ತಲು ಬೆಳಕು
ಒಂದೇ ಕಡೆಯೆ !
ಸಕಲೈಶ್ಚರ್ಯಕು ಇಂಥಾ ಎಡೆಯೆ ?
ಎನ್ನಲು ಭೃಗು ಹೇಳಿದರವರು-
ನೀನಿನ್ನೂ ಕರು !
ವರುಣನ ಕೇಳು !
ಹೋಗುವ ದಾರಿಯೆ ಬರಲೂ ಬೇಕು
ಅದಕೇ ಕತ್ತಲು ಅದಕೇ ಬೆಳಕು
ಸೃಷ್ಟಿಮೂಲದ ಇಂಥ ರಹಸ್ಯ
ಯಾರಲು ಕೇಳದೆ ತಿಳಿವುದವಶ್ಯ !
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಆಚೆಗೆ ಬಿದ್ದ-
ಎಷ್ಟೋ ಯುಗ
ಹಾಗೆಯೆ ಇದ್ದ !
*****