ಪ್ರಿಯ ಸಖಿ,
ನಮ್ಮದು ಹಲವು ವೈರುಧ್ಯಗಳನ್ನು ದ್ವಂದ್ವದ ವಿಚಾರಗಳನ್ನು ತುಂಬಿಕೊಂಡಿರುವ ದೇಶ. ಪ್ರಜಾತಂತ್ರ ಆಡಳಿತ ವ್ಯವಸ್ಥೆಯಿರುವ ನಮ್ಮ ದೇಶವನ್ನು ನಾವು ಜಾತ್ಯಾತೀತ ದೇಶ ಎಂದು ಕರೆದುಕೊಳ್ಳುತ್ತೇವೆ. ಇಲ್ಲಿ ಲೆಕ್ಕವಿಲ್ಲದಷ್ಟು ಜಾತಿಗಳಿದ್ದರೂ ಎಲ್ಲರೂ ಸೋದರತ್ವ ಹೊಂದಿ ಬಾಳುತ್ತಿದ್ದೇವೆ ಎಂದು ಕೊಚ್ಚಿಕೊಳ್ಳುತ್ತೇವೆ. ಆದರೆ ವಾಸ್ತವ ಮಾತ್ರ ಇದಕ್ಕೆ ವಿರುದ್ಧವಾಗಿದೆ.
ಜಾತಿ, ಧರ್ಮ ಎಂಬುದು ಒಬ್ಬ ವ್ಯಕ್ತಿಯ ಅತ್ಯಂತ ವೈಯಕ್ತಿಕ ವಿಷಯವಾಗಿರಬೇಕು. ಅದು ಯಾವಾಗ ಸಾರ್ವಜನಿಕ ವಲಯವನ್ನು ಪ್ರವೇಶಿಸುತ್ತದೋ ಆಗ ಜಾತಿ, ರಾಜಕೀಯ, ಜಾತೀಯ ಗುಂಪುಗಾರಿಕೆಗಳು, ಜಾತಿಯನ್ನು ವೈಭವೀಕರಿಸಿಕೊಂಡು ತಮ್ಮ ಜಾತಿಯೇ ಹಿರಿದೆಂಬ ಹುಂಬತನದಿಂದ ಇಲ್ಲದ ವೈಷಮ್ಯ, ಹೊಡೆದಾಟ, ಗುಂಪು ಘರ್ಷಣೆಗಳು ನಡೆಯುತ್ತಾ ಹೋಗುತ್ತದೆ. ಈ ಜಾತ್ಯಾತೀತ ದೇಶದಲ್ಲಿ ಬೇರೆ ಕಾರಣಗಳಿಗಾಗಿ ಸಂಭವಿಸಿದ ಗಲಭೆಗಳಿಗಿಂತ ಈ ಜಾತಿವಾದದ ಹುಂಬತನದಿಂದಲೇ ನಡೆದಿರುವ ಸಾವು, ನೋವು, ಗಲಭೆಗಳು ಹೆಚ್ಚೆಂದು ದಾಖಲೆಗಳು ಸ್ಪಷ್ಟೀಕರಿಸುತ್ತವೆ.
ಇಲ್ಲಿ ಹೆಜ್ಜೆಹೆಜ್ಜೆಗೂ ಜಾತಿಯ ಪ್ರಶ್ನೆ ಮುಂದಾಗುತ್ತಲೇ ಇರುತ್ತದೆ. ಸರ್ಕಾರದ ಯಾವುದೇ ಅರ್ಜಿ, ಶಾಲಾ ದಾಖಲಾತಿ, ಕೆಲಸದ ಅರ್ಜಿ ಹೀಗೇ ಎಲ್ಲ ವಿಷಯದಲ್ಲಿಯೂ ಜಾತಿಗೇ ಪ್ರಥಮ ಆದ್ಯತೆ. ಎಸ್. ಸಿ. ಮತ್ತು ಎಸ್.ಟಿ. ಹಾಗೂ ಮೀಸಲಾತಿಯನ್ನು ಗುರುತಿಸುವುದಕ್ಕಾಗಿ ಜಾತಿ ನಮೂದಿಸಬೇಕೆಂದು ಸಮಜಾಯಿಷಿ ಆದರೆ ಇದನ್ನು ಗುರುತಿಸಲು ಬೇರೆ ಮಾರ್ಗಗಳಿಲ್ಲವೇ ? ಜೊತೆಗೆ ಯಾವುದೇ ಜಾತಿಯವನಾದರೂ ಅವನ ವರಮಾನದಿಂದ ಅವನ ಮೀಸಲಾತಿಯನ್ನು ಗುರುತಿಸಲು ಸಾಧ್ಯವಿಲ್ಲವೇ? ಎಲ್ಲಿಯವರೆಗೂ ವ್ಯಕ್ತಿಯನ್ನು ಜಾತಿಯಿಂದಲೇ ಅಳೆಯುತ್ತಾ ಹೋಗಬೇಕು ? ಇನ್ನು ಸಾರ್ವಜನಿಕ ಕ್ಷೇತ್ರದಲ್ಲಿಯೂ ಈ ಜಾತಿಯನ್ನು ಆಧರಿಸಿದ ಅಳೆಯುವಿಕೆಗಳು ಲೆಕ್ಕವಿಲ್ಲದಷ್ಟು.
ತಾವು ಜಾತ್ಯಾತೀತರು ಎಂದು ಹೇಳಿಕೊಳ್ಳುವ ಸ್ವಯಂಘೋಷಿತ ವಿಚಾರವಾದಿಗಳು ತಮ್ಮದೇ ಜಾತಿಯ ಜಾಲವನ್ನು ತಮ್ಮ ಸುತ್ತಲೂ ಅತ್ಯಂತ ವ್ಯವಸ್ಥಿತವಾಗಿ ಸ್ಥಾಪಿಸಿಕೊಂಡು ತಮ್ಮ ಭಾಷಣಗಳಲ್ಲಿ ಮಾತ್ರ ಬ್ರಾಹ್ಮಣ ಮನಸ್ಸುಗಳು, ಲಿಂಗಾಯಿತ ಮನಸ್ಸುಗಳು, ಶೂದ್ರ ಮನಸ್ಸುಗಳು ಎಂದು ವರ್ಗೀಕರಿಸುತ್ತಾ ಮತ್ತೆ ಮತ್ತೆ ತಾವೇ ಜಾತಿಗಳಲ್ಲಿ ಜನರನ್ನು ಒಡೆಯುತ್ತಾ ಜಾತೀಯತೆಯನ್ನು ಜನರ ಮನಸ್ಸುಗಳಲ್ಲಿ ಹುಟ್ಟುಹಾಕುತ್ತಾ, ಬೆಳೆಸುತ್ತಾ ಹೋಗುವುದನ್ನು ಕಂಡಾಗ ಜಾತೀಯತೆಯ ಬೇರುಗಳು ಎಂದಿಗೂ ನಿರ್ನಾಮವಾಗುವುದಿಲ್ಲವೇನೋ ಎಂಬ ಆತಂಕ ಕಾಡುತ್ತದೆ.
ಯಾವುದೇ ಧರ್ಮದ ಪ್ರಾರ್ಥನೆ, ಧ್ಯಾನಗಳು ವ್ಯಕ್ತಿ ಏಕಾಗ್ರತೆಯನ್ನು ಶಾಂತಿಯನ್ನೂ ಪಡೆದು ತನ್ಮೂಲಕ ಆತ್ಮೋನ್ನತಿಯನ್ನು ಹೊಂದುವ ಉದ್ದೇಶವನ್ನು ಹೊಂದಿರುತ್ತದೆ. ಇಂತಹ ಪವಿತ್ರ ಪ್ರಾರ್ಥನಾ ಮಂದಿರಗಳ ನಿರ್ಮಾಣವೇ ಅಶಾಂತಿಯ ರಕ್ತಪಾತದ ತಳಹದಿಯನ್ನು ಹೊಂದಿರುವುದಾದರೆ ಅಂತಹ ಮಂದಿರದ ನಿರ್ಮಾಣದಿಂದ ಕೋಮುದ್ವೇಷವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶವನ್ನು ಹೊರತು ಪಡಿಸಿ ಮತ್ತೇನನ್ನು ಸಾಧಿಸಿದಂತಾಗುತ್ತದೆ? ಪೋಲೀಸರ ಕಾವಲಿರುವ ಯಾವುದೇ ಪ್ರಾರ್ಥನಾ ಮಂದಿರಕ್ಕೆ ಹೋಗಿ ವ್ಯಕ್ತಿ ಪ್ರಾರ್ಥನೆ ಸಲ್ಲಿಸುವಂತಾದರೆ ಅವನ ಮನ ಏಕಾಗ್ರತೆಯನ್ನು, ಶಾಂತಿಯನ್ನು ಹೊಂದಲು ಎಂದಾದರೂ ಸಾಧ್ಯವೇ ?
ಪ್ರಾರ್ಥನಾ ಮಂದಿರದ ಮೂಲ ಉದ್ದೇಶವೇ ಸಫಲವಾಗುವುದಿಲ್ಲವೆಂದ ಮೇಲೆ ಬರಿಯ ಜಾತಿ, ಧರ್ಮದ ಪ್ರತಿಷ್ಠೆಯ ಸಂಕೇತವಾಗಿಯಷ್ಠೇ ಪ್ರಾರ್ಥನಾ ಮಂದಿರಗಳು ನಿರ್ಮಾಣವಾಗಬೇಕೆ? ಸಾರ್ವಜನಿಕವಾಗಿ ಜಾತಿ, ಧರ್ಮದ ವಿಷಬೀಜವನ್ನು ಎಲ್ಲೆಡೆ ಹರಡುವ ಇಂತಹ ಪ್ರಯತ್ನಗಳ ಬದಲು ಸರ್ವಾಂತರ್ಯಾಮಿಯಾದ ಸರ್ವಶಕ್ತನನ್ನು ನಮ್ಮ ನಮ್ಮ ಮನೆಗಳಲ್ಲೇ ಶಾಂತಿಯಿಂದ ಏಕಾಗ್ರತೆಯಿಂದ ಪ್ರಾರ್ಥಿಸುವುದು ಸಾಧ್ಯವಿಲ್ಲವೇ ? ರಾಜಕಾರಣಿಗಳು ಅಧಿಕಾರಾಗಳಿಸಿಕೊಳ್ಳಲು, ಉಳಿಸಿಕೊಳ್ಳಲು, ಜನರ ಮತೀಯ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ನಾವು ಎಚ್ಚರದಿಂದಿರಬೇಕೆಂದು ನಮಗೇಕೆ ಅರ್ಥವಾಗುವುದಿಲ್ಲ?
ಸಖಿ, ಜಾತಿಯಿಂದಲೇ ವ್ಯಕ್ತಿಯ ಅರ್ಹತೆಯನ್ನು, ಪ್ರತಿಭೆಯನ್ನು, ಶಕ್ತಿಯನ್ನು ಮೇಲು ಕೀಳುಗಳನ್ನು ಅಳೆಯುವ ಪೂರ್ವಗ್ರಹ ನಮ್ಮ ಜನ ಸಮುದಾಯದಿಂದ ದೂರಾಗಬೇಕು. ಜಾತಿ ಧರ್ಮಗಳನ್ನು ಬಿಟ್ಟುಬಿಡಲು ಸಾಧ್ಯವಿಲ್ಲದಿದ್ದರೂ ಅದನ್ನು ಆದಷ್ಟು ನಮ್ಮ ವೈಯಕ್ತಿಕ ನೆಲೆಗಳಿಗೆ ಸೀಮಿತಗೊಳಿಸಿಕೊಂಡು, ಸಾರ್ವಜನಿಕವಾಗಿ ನಾವೆಲ್ಲರೂ ಒಂದೇ ಎಂಬ ಭಾವ ನಮ್ಮೆಲ್ಲರಿಗೂ ಮೂಡಿದಾಗಷ್ಟೇ ನಿಜವಾಗಿಯೂ ನಾವು ಮತ್ತೆ ನಮ್ಮ ದೇಶ ಜಾತ್ಯಾತೀತವಾಗಲು ಸಾಧ್ಯ ಅಲ್ಲವೇ?
*****