ಶಬ್ದ ಸತ್ತಿತು ವಾಕ್ಯ ಸತ್ತಿತು
ಕಾವ್ಯ ಸತ್ತಿತ್ತು ಅಳಿಯಿತು
ಸತ್ತಿತೆಂಬಾ ಶಬ್ದ ಸತ್ತಿತು
ಸತ್ಯ ಮಾತ್ರವೆ ಉಳಿಯಿತು ||೧||
ತಿಳಿಯ ತಿಂಗಳ ಹೊಳೆಯ ಅಂಗಳ
ತಂಪು ತನನನ ನುಡಿಯಿತು
ಆತ್ಮ ಗೋಪುರ ಮೌನ ರೂಪುರ
ಸಂಪು ಪವನನ ಹಾಡಿತು ||೨||
ಮಧುರದಿಂದಾ ಮಧುರ ತೂಗಿತು
ಜೇನು ಜೇನನು ತಬ್ಬಿತು
ಚಲುವಿನಿಂದಾ ಚಲುವು ಹಬ್ಬಿತು
ಚಂದ ಮಾತ್ರವೆ ಉಳಿಯಿತು ||೩||
ಮಧ್ಯ ರಾತ್ರಿಯ ಮದಿರೆ ತಂದಾ
ಮದಿರೆ ಸುಂದರಿ ಸತ್ತಳು
ಅವಳ ಕುಡಿದಾ ಅರುಹು ಸತ್ತಿತು
ಸತ್ತು ಸಂಪಿಗೆಯಾದಳು ||೪||
*****