ತಿಂದೋಡಿ ತಿರುಗೋಡಿ ಚಿಂದೋಡಿ ಚಂಪಕ್ಕಾ
ಮಳೆಯಕ್ಕ ರೊಕಪಕ್ಕ ಉಗ್ಯಾಳೆ
ಗುಡುಗೂಡು ಗುಡುಗಮನಾ ಸುಡುಸೂಡು ಸುಡುನಮನಾ
ಸೆಕಿಯಲ್ಲಾ ಗಪಗಾರಾ ಮಾಡ್ಯಾಳೆ ||೧||
ನಡತುಂಬ ನಡುಕವ್ವ ತೊಡಿತುಂಬ ತುಡುಗವ್ವ
ಗೌರಕ್ಕ ಹೊಲದಾಗ ಬಸರಾಗೆ
ಗಂಗಕ್ಕ ಮುಗಲಾಗ ಶೀಗಕ್ಕ ಹೊಲದಾಗ
ಚಂಪಕ್ಕ ಚಿಗರ್‍ಯಾಗ ಹೆಸರಾಗೆ ||೨||
ಏಂಚಂದ ಈಚಲಾ ಚೌವಕ್ಕ ಗೊಂಚಲಾ
ಚೌಲ್ಗುಡ್ಡಾ ಚೌರೀಯ ಬೀಸ್ಯಾಳೆ
ಬೈಲ್ಗುಡ್ಡಾ ಬಳುಕ್ಯಾಡಿ ಥೈಲ್ಗುಡ್ಡಾ ಥಳುಕ್ಯಾಡಿ
ಮಿರಿಮೀರಿ ಮಿಂಚ್ಹೋರಿ ಏರ್‍ಯಾಳೆ ||೩||
ಸಿಡಿಲಾ ಸಂಪಿಗಿ ಸಂಪಾ ಮಿಂಚಾ ಮಾತಿನ ಕಂಪಾ
ಗರತೇರು ಹಾದರಕ ಹಿಗ್ಯಾರೆ
ಬಂತು ಬಂತಪ ತಂಪು ತಂಬೂರಿ ಮುಗಿಲಿಂಪು
ರಂಭೇರು ಮಿಂಡನ್ನ ಕೂಡ್ಯಾರೆ |೪||
*****
ಚಿಂದೋಡಿ ಚಂಪಕ್ಕಾ = ನಾನಾ ಜನ್ಮಗಳಲ್ಲಿ ತಿರುಗುವ ಆತ್ಮ; ಮಳೆಯಕ್ಕ-ದೈವಿಕೃಪೆ; ಗರತೇರು, ರಂಭೇರು=ಆತ್ಮ; ಹಾದರ = ಪರಮಾತ್ಮನ ಮಿಲನ; ಮಿಂಡ-ಪರಮಾತ್ಮ