ವಠಾರ ಮೊದಲಿಗೆ ಪ್ರಕಟವಾದದ್ದು ಕಾಸರಗೋಡಿನ ನವ್ಯ ಸಾಹಿತ್ಯ ಸಂಘದ ಮೂಲಕ ಏಪ್ರಿಲ್ ೧೯೬೯ ರಲ್ಲಿ. ಆಗ ಅಚ್ಚುಹಾಕಿಸಿದ್ದು ಕೆಲವೇ ಪ್ರತಿಗಳು. ಅದ್ದರಿಂದ ಅಕ್ಷರ ಪ್ರಕಾಶನದ ಮೂಲಕ ಈಗ ಮತ್ತೊಮ್ಮೆ ಪ್ರಕಟಣೆ.
ಈ ಸಂಕಲನದ ಹದಿನಾರು ಕವಿತೆಗಳು ೧೯೬೮-೧೯೬೯ರಲ್ಲಿ ಬರೆದವು. ಮತ್ತು ಇದು ನನ್ನ ಮೊದಲ ಕವನ ಸಂಕಲನವಾದ “ಮುಖವಾಡಗಳ” ಬೆನ್ನ ಹಿಂದೆಯೇ ಬಂತು. ಇದಕ್ಕೆ ಪ್ರೇರಣೆ “ಮುಖವಾಡಗಳು” ನನ್ನ ಪರಿಸರದಿಂದ ತಂದುಕೊಟ್ಟ ಕಿರುಕುಳ. ವಠಾರದಲ್ಲಿ ಕಂಡುಬರುವ ಹಲವು ಪ್ರತಿಮೆಗಳನ್ನು ಧ್ವನಿಗಳನ್ನು ಈ ದೃಷ್ಟಿಯಿಂದ ಗಮನಿಸಬೇಕು.
‘ವಠಾರ’ ಅಥವಾ ‘ಪರಿಸರ’ ಎಂಬ ಪದ ಕಳೆದ ಕೆಲವು ವರ್ಷಗಳಿಂದ ಹೊಸ ಅರ್ಥ ಪಡೆದುಕೊಂಡದ್ದು ಕಂಡು ಬರುತ್ತದೆ. ವಾತಾವರಣ ಮಾಲಿನ್ಯದ ಕುರಿತು ಹೊಸ ಜಿಜ್ಞಾಸೆ ನಡೆದಿದೆ. ನಾಗರಿಕತೆಯ ಪರಿಣಾಮವಾಗಿ ಒಂದು ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಬದುಕುವುದಕ್ಕೆ ಬಿಡಿ ಎಂದು ಮನುಷ್ಯ ಕೂಗುವಂತಾಗಿದೆ. ನಾನು ‘ವಠಾರ’ ಎಂಬ ಪದವನ್ನು ಈ ಪಾರಿಭಾಷಿಕ ಅರ್ಥದಲ್ಲಿ ಉಪಯೋಗಿಸಿದ್ದರೂ ಇದೊಂದೇ ಅರ್ಥದಲ್ಲಲ್ಲ. ಕೊಳೆಯುತ್ತಿರುವ ಪರಿಸರ ಸಮೂಹ ವ್ಯಕ್ತಿತ್ವದ ಮೇಲೆ ಯಾವ ಪರಿಣಾಮ ಉಂಟುಮಾಡುತ್ತಿದೆ? -ಎಂಬಿತ್ಯಾದಿ ಪ್ರಶ್ನೆಗಳು ಒಂದಲ್ಲ ಒಂದು ಹಂತದಲ್ಲಿ ಇಲ್ಲಿನ ಕವಿತೆಗಳಲ್ಲಿ ಕಾಣಿಸಬಹುದು. ಇವುಗಳನ್ನೋದಿದಾಗ ಒಂದು ರೀತಿಯ ರೊಚ್ಚು, ಸಿಡುಕು, ತಮಾಷೆ, ಅವಹೇಳನದ ಅಸಂಬದ್ಧ ಮೂಡು ಉಂಟಾದರೆ ಅದು ನಾನು ನನ್ನ ವಠಾರವನ್ನು ಅರ್ಥವಿಸುವ ಬಗೆ. ಮನುಷ್ಯ ಹುಚ್ಚನಾಗುವುದನ್ನು ತಪ್ಟಿಸುವುದು ಹೇಗೆ-ಎಂಬ ವಿಚಾರವನ್ನು ಓದುಗರಲ್ಲಿ ಎಬ್ಬಿಸುವುದಕ್ಕಾಗಿ ಈ ಹೊಸ ಮುಖವಾಡ. ಅಲ್ಲಲ್ಲಿ ಬರುವ ತೀರ ಹಗುರವಾದ ಟೋನ್ ಬೇಕೆಂದೇ ಉಪಯೋಗಿಸಿದ್ದು.
ಈ ಕವಿತೆಗಳಿಗೆ ವಿಚಾರದ. ಶೈಲಿಯ ಬೇರೆ ಬೇರೆ ಸ್ತರಗಳನ್ನು ಕೊಡುವುದಕ್ಕೆ ಪ್ರಯತ್ನಿಸಿದ್ದೇನೆ. ಇಲ್ಲಿಯ ರೊಚ್ಚಿನಲ್ಲೂ ಅನುಕಂಪವಿದೆ. ಸಾಧಾರಣವೆನಿಸುವ ಸಾಲುಗಳಲ್ಲಿಯೂ ಅಲ್ಲಲ್ಲಿ ಘಾತಗಳಿವೆ. ರೂಢಿ ಮಾತುಗಳಿಗೆ ಹೊಸ ತಿರುವನ್ನು ಕೊಡಲಾಗಿದೆ.
ಮುಖವಾಡಗಳು ಸ್ವಲ್ಪಮಟ್ಟಿಗೆ ಅನುಕರಣ ಶೀಲತೆಯನ್ನು ಹೊಂದಿರುವುದು ಅನಿವಾರ್ಯವಾಗಿತ್ತು. ಅದರಲ್ಲಿಯೂ ನನ್ನದೇ ಲಯಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೆ. ವಠಾರ ಅಂತಹ ಇನ್ನೊಂದು ಪ್ರಯತ್ನ. ಇದೊಂದು ಮಹತ್ವಾಕಾಂಕ್ಷೆಯ ಕೃತಿಯೇನೂ ಅಲ್ಲ. ವಠಾರ ನನ್ನ ಓದುಗರಲ್ಲಿ ಒಂದಿಷ್ಟು ನಗರ ಪ್ರಜ್ಞೆಯನ್ನೂ ಪರಿಸರ ಬೋಧವನ್ನೂ ಉಂಟುಮಾಡಿದರೆ ಅಲ್ಲಿಗೆ ಅದು ಅರ್ಥಪೂರ್ಣ.
*****