ಪ್ರತಿ ಮುಂಜಾನೆ…
ಪತ್ರಿಕೆಗಳಲ್ಲಿ ಸುದ್ದಿ… ಜಾಹೀರಾತು,
ಪ್ರತಿ ದಿನ… ಆಕಾಶವಾಣಿಯಲ್ಲಿ
ಪ್ರತಿ ಸಂಜೆ… ದೂರದರ್ಶನದಲ್ಲಿ
ತಪ್ಪದೆ ಬಿತ್ತರಿಸುವ ಕಾರ್ಯಕ್ರಮ –
ಕಾಣೆಯಾದವರು!
ಬರಿಯ ನಮ್ಮೂರಿನಲ್ಲಿಯೇ
ದಿನಕ್ಕೆ ನಾಲೈದು ಜನ.
ಬೇರೆ ಬೇರೆ ಕೇಂದ್ರಗಳಲ್ಲಿ
ನೂರಾರು ಜನ ಪ್ರತಿ ದಿನ.
ತಿಂಗಳಿಗೆ-ವರ್ಷಕ್ಕೆ?
ಕಾಣೆಯಾಗುವರೆ
ಸಾವಿರ ಸಾವಿರ ಜನ?
ಆಬಾಲ ವೃದ್ಧರವರೆಗೆ
ಗಂಡು-ಹೆಣ್ಣು
ಸುಂದರ-ಕುರೂಪ
ನಿರಾಸೆ-ನಿರ್ಲಿಪ್ತ
ಬಗೆ ಬಗೆಯ ಮುಖಗಳು
ನೀಳ ಮೂಗು- ಕೋಲು ಮುಖ
ಗೋಧಿ ಬಣ್ಣ, ಎಣ್ಣೆಗೆಂಪು ಬಣ್ಣ
ತೇಜೋರಹಿತ, ಕಳಾಹೀನ ಕಣ್ಣ
ನಿತ್ರಾಣ, ನಿರಾಧಾರ ಮನುಜರು
ಮಾನಸಿಕ ಅಸ್ವಸ್ಥರು
ಪರೀಕ್ಷೆಗಳಲ್ಲಿ ಫೇಲಾದವರು
ಸಾಲ ತೀರಿಸಲಾಗದೆ ತಲೆಮರೆಸಿಕೊಂಡವರು
ಭಗ್ನ ಪ್ರೇಮಿಗಳು, ಹೇಡಿಗಳು
ಗೃಹ ಕಲಹದಗ್ನಿಯಲ್ಲಿ ದಹಿಸಿದವರು
ಶೀತಲ ಯುದ್ಧದಲ್ಲಿ ಸೋತು ನೋಂದವರು
ಓಡಿಹೋದವರು, ಕಳುವಾದವರು
ಎಷ್ಟೆಲ್ಲ ಜನ… ಕಾಣೆಯಾದವರು!
ಸಾಕಾಯಿತೆ ಸಂಸಾರ ಸಾಗರ
ಸಾವು ನೋವಿನ ಘೋರ ಸಮರ
ಹರಿಯಿತೆ ಆತ್ಮೀಯತೆಯ ಮೋಹ
ಕಡಿದೇ ಹೋಯಿತೇ ಬಾಳ ಬಂಧನ?
ಇಲ್ಲಿನದಕ್ಕಿಂತ ಅಲ್ಲಿನದು
ಅಲ್ಲಿನದಕ್ಕಿಂತ ಮತ್ತೊಂದು
ಸೊಗಸೆಂಬ ಭ್ರಮೆಯೆ?
ತನ್ನ ದೆಲ್ಲವ ತೊರೆದು
ಇಟ್ಟ ಹೆಸರನೂ ಬಿಟ್ಟು
ದೂರ ಹೋಗುವ ಸಮಯ –
ಪ್ರಾಣ ಪ್ರಯಾಣ ಸಮಯ
ಬರುವ ನಿರೀಕ್ಷೆಯ ಕೋಶಾವಸ್ಥೆಯೇ?
ಸ್ಥಿತ ಪ್ರಜ್ಞನ ಸಮಾಧಿ ಸ್ಥಿತಿಯೇ?
ಜನಸಾಗರದಲ್ಲಿ ಕೊಚ್ಚಿ ಹೋದ
ಜೀವಚ್ಛವವೇ?
*****
೨೯-೦೮-೧೯೯೩