ಇಳಿದು ಬಾ ಮಳೆರಾಯ|
ನಮ್ಮೂರ ನೆಲ ಜಲಗಳೆಲ್ಲ
ಒಣಗಿ ಬತ್ತಿಹವು|
ಮರ ಗಿಡದೆಲೆಗಳೆಲ್ಲ ಉದುರುತ್ತಿಹವು
ಹಸು ಕರುಗಳಿಗೆಲ್ಲಾ
ಮೇವು ನೀರಿಲ್ಲದೆ ಸೊರಗುತಿಹವು||
ಮುನಿಸೇತಕೆ ನಮ್ಮಮೇಲೆ?
ಭೂತಾಯಿಯ ಸೇವೆ,
ಹಸು, ಕರುಗಳಸೇವೆಯ ಮಾಡುತ
ಲೋಕಕೆ ಅನ್ನವನು ಉಣಬಡಿಸುವೆವು|
ಹಸಿರನು ಬೆಳೆದು ಹಸುವಿಗೆ ನೀಡಿ
ಮಕ್ಕಳಿಗೆ ಹಾಲನು ನೀಡುವೆವು||
ರೈತನ ಮೇಲೆ ಕೋಪವದ್ಯಾಕೊ?
ಬೆನ್ನಮೇಲೆ ಹೊಡೆದರೆ
ಸಹಿಸಿ ಬದುಕಿಕೊಳ್ಳಬಹುದು
ಹೊಟ್ಟೆ ಮೇಲೆ ಹೊಡೆದರೆ
ದಹಿಸಿ ಬದುಕಲು ಸಾಧ್ಯವೇ?|
ನಮ್ಮ ಬೆವರಿಗೆ ನೀ
ಮಳೆಯ ಕರುಣಿಸು, ಕಣ್ಣೀರಿಗೆ
ಸುರಿಸುವುದು ತರವೇ?||
ರೈತನ ಹೆಂಡತಿ ಮಕ್ಕಳ ನೋಡು
ಕೂಳು ನೀರು ನಿದ್ದೆಗಳಿಲ್ಲದೆ
ಹೊಟ್ಟೆಯು ಬೆನ್ನಿಗೆ ಹತ್ತಿಹುದು|
ಮೈಯಲ್ಲಿ ಕಸುವು ಇಲ್ಲದೆ
ಕೈಯಾಗಿನ ಬಳೆ ತೋಳಿಗೇರುವವು|
ಕಣ್ಣಲಿ ಕಾಂತಿಯು ಇರದೆ
ಇಟ್ಟಿಹ ನೋಟ ನೆಟ್ಟಂತೆ ಇಹುದು||
*****