ಇಷ್ಟಿಷ್ಟೆ ಭಜನೆ ಇಷ್ಟಿಷ್ಟೆ ಧ್ಯಾನ
ಇಷ್ಟದಲಿ ಹಾಡು ಗಾನ
ಇಷ್ಟಿಷ್ಟೆ ಶ್ರವಣ ಇಷ್ಟಿಷ್ಟೆ ಮನನ
ಕಷ್ಟದಲಿ ಸುಖದ ತಾನ || ೧ ||
ಹೀಗೊಮ್ಮೆ ತಲೆಯ ತೂಗುತ್ತ ಒಲಿದು
ಹಾಗೊಮ್ಮೆ ತಲೆಯನೆತ್ತಿ
ಬೀಗುತ್ತ ಹೆಣ್ಣ ಮರೆಯದೆಯೆ ಕಣ್ಣ
ಸಾಗಿಸುತ ಮನವನೊತ್ತಿ || ೨ ||
ಝಂಝನನ ಝನನ ತಾಳದಲಿ ಕಲೆತು
ಭಂಜನೆಯ ಬುದ್ದಿ ಹಿಡಿದು
ತರನಾನ ತನನ ಗಾನದಲಿ ಬೆರೆತು
ವರದೇವರನ್ನು ಕರೆದು || ೩ ||
ಹಾಡಿನಲಿ ಮುಳುಗಿ ಅರ್ಥಗಳ ಮುತ್ತು
ಆರಿಸುತ ಮಗುವಿನಂತೆ
ಹಾಡುವರ ಮುಖವ ನೋಡುತ್ತ ಅವರ
ಜಾಡನ್ನು ಹಿಡಿಯುವಂತೆ || ೪ ||
ಇಷ್ಟಗಳು ಮನವ ಅತ್ತಕಡೆ ಎಳೆಯೆ
ಕಷ್ಟದಲಿ ಇತ್ತ ಜಗ್ಗಿ
ಅಷ್ಟಿಷ್ಟು ಕೂಡಿ ಭಕ್ತಿಯಿದು ಬಳೆಯೆ
ಅಷ್ಟರಲೆ ಬಹಳ ಹಿಗ್ಗಿ || ೫ ||
ಥಕಥೈಯ ಎಂದು ನಾದಕ್ಕೆ ಲಯವ
ಸಕಲರಲಿ ಸೇರಿ ದನಿಯ
ವಿಕಲತೆಯ ಅಳಿಯ ಬಾರೆಂದು ಬೇಡಿ
ಅಕಳಂಕನೆಡೆಗೆ ಕೈಯ || ೬ ||
*****