‘ದಲಿತ’ ಪದ ಕನ್ನಡದ ಸಂದರ್ಭದಲ್ಲಿ ಈಚಿನದು. ಆದರೆ ಇದರೊಳಗಿನ ಪರಿಕಲ್ಪನೆ ಮಾತ್ರ ಭಾರತೀಯ ಜಗತ್ತಿನಲ್ಲಿ ಐದು ಸಾವಿರ ವರ್ಷಗಳ ಆಚೆಗೆ ತನ್ನ ಮೂಲವನ್ನು ಇರಿಸಿಕೊಂಡಿದೆ. ಅಂದಿನಿಂದ ಇಂದಿನವರೆಗೂ ಇದು ಅವ್ಯಾಹತವಾಗಿ ನಮ್ಮ ಸಂಸ್ಕೃತಿಯಲ್ಲಿ ಗಾಢವಾಗಿ ಬೆರೆತು, ಅನೇಕ ಸಮಾಜ ಸುಧಾರಕರಿಗೆ ಜನ್ಮವನ್ನು ಕೊಟ್ಟಿದೆ. ಈ ನಿಟ್ಟಿನಲ್ಲಿ ವಿಫಲ ಮತ್ತು ವಿಪುಲ ಕ್ರಾಂತಿ ಮಾಡುತ್ತಾ ಬಂದ ಬುದ್ಧ, ಬಸವ, ಅಂಬೇಡ್ಕರ್ ಮೊದಲಾದ ಅನೇಕ ಮಹಾನಾಯಕರನ್ನು ಗುರುತಿಸಿಕೊಳ್ಳಬಹುದಾಗಿದೆ. ಈ ನಾಯಕರ ಸಾಧನೆಗಳ ಬಗ್ಗೆ ನಮಗೆ ಗೌರವ ಇದೆಯಾದರೂ ಇವರ ಚಿಂತನೆಗಳಿಗೆ ಪ್ರೇರಣೆಯನ್ನಿತ್ತ ಸಾಮಾಜಿಕ ಅನಿಷ್ಟಗಳ ಕೂಪವಾದ ನಮ್ಮ ಸಂಸ್ಕೃತಿ-ಚರಿತ್ರೆಯ ಬಗೆಗೆ ಗೌರವ ಮೂಡಲಾರದು. ಇದು ಮೇರಾ ಮಹಾನ್ ಭಾರತದ ವಿಕೃತ ಸತ್ಯ!
ಭಾರತದ ಚರಿತ್ರೆಯಲ್ಲಿ ಬಣ್ಣಬಣ್ಣದ ಸಾಹಿತ್ಯ ಮೂಡಿದೆ. ಇದು ಸಂಸ್ಕೃತವನ್ನು ಒಳಗೊಂಡಂತೆ ಎಲ್ಲಾ ಭಾಷಾ ಸಂದರ್ಭಗಳ ಸತ್ಯ. ಈ ದೀರ್ಘ ಪರಂಪರೆಯಲ್ಲಿ ಬಹುತೇಕ ಮಧ್ಯಕಾಲದವರೆಗಿನ ಭಾರತದ ಯಾವುದೇ ಭಾಷಾ ಸಾಹಿತ್ಯದಲ್ಲಿ ದಲಿತರನ್ನು ಕುರಿತ ಪ್ರಸ್ತಾಪಗಳಿವೆಯೇ ವಿನಃ ಅವರ ಬಗೆಗಿನ ಪ್ರಾಮಾಣಿಕ ಚಿಂತನೆ ಮತ್ತು ಗಾಢ ಕಾಳಜಿಗಳು ವ್ಯಕ್ತವಾಗಿಲ್ಲ. ಅಪರೂಪಕ್ಕೆ ಶ್ವಪಚ, ಚಾಂಡಾಲ ಎಂಬ ವಿವರಣೆಗಳಲ್ಲಿ ದಲಿತರನ್ನು ಕುರಿತು ಪ್ರಸ್ತಾಪಿಸಲಾಗಿದೆ, ಅಷ್ಟೇ. ಆದರೆ ಇದರಿಂದಾಚೆಗೆ ಅವರನ್ನು ಕುರಿತ ತೀವ್ರ ಚಿಂತನೆ ಅಲ್ಲಿ ಸಾಧ್ಯವಾಗಿಲ್ಲ. ಅಂತಹ ಸಾಧ್ಯತೆ ಅದುವರೆಗೂ ಅಕಾಡೆಮಿಕ್ ವಲಯದ ಸಂವಹನ ಭಾಷೆಯಾದ ಸಂಸ್ಕೃತದಲ್ಲಿ ನಾವು ನಿರೀಕ್ಷಿಸುವುದಕ್ಕೂ ಸಾಧ್ಯವಿಲ್ಲ. ಕಾರಣ, ದಲಿತರ ಪ್ರಶ್ನೆ ಎಂಬುದು ಜನಮುಖಿಯಾದ ವಿಚಾರಗಳನ್ನೊಳಗೊಂಡ ಪ್ರಶ್ನೆಯಾದುದರಿಂದ ಅವರ ಉದ್ಧಾರದ ವಿಚಾರಗಳು ಬಂದಾಗ ಅಲ್ಲಿ ಸ್ವಾಭಾವಿಕವಾಗಿ ದಲಿತರ ಅಥವ ಜನರ ಭಾಷೆಗಳೇ ಸಂವಹನಕ್ಕೆ ಬಳಕೆಯಾಗುತ್ತವೆ. ಅಲ್ಲದೆ ಬಹುಜನ ದೂರವಾದ ಮತ್ತು ದೈವಭಾಷೆ ಎಂದು ಒತ್ತಾಯದಿಂದ ಕರೆಸಿಕೊಂಡ ಸಂಸ್ಕೃತವು ಅಲ್ಲಿ ಸಹಾಯಕವೂ ಆಗುವುದಿಲ್ಲ. ಆದ್ದರಿಂದ ಮಧ್ಯಕಾಲದವರೆಗೂ ಸಂಸ್ಕೃತ ಪ್ರಧಾನ ಭಾಷೆಯಲ್ಲಿ ಬಂದ ಸಾಹಿತ್ಯ ಕೆಲವು ಜನಪರ ನೆಲೆಗಳನ್ನು ಒಳಗೊಂಡಾಗಲೂ ಅದು ಅಕಾಡೆಮಿಕ್ ಎಂಬ ಸೀಮಿತ ವಲಯವನ್ನು ಕೇಂದ್ರ ಗಮನವನ್ನಾಗಿಸಿಕೊಂಡಿತ್ತೇ ವಿನಃ ಶ್ರಮದ ನೆಲೆಯಲ್ಲಿ ಪ್ರಾದೇಶಿಕ ಭಾಷೆಗಳ ಮೂಲಕವಾಗಿ ಅಭಿ;ವ್ಯಕ್ತಗೊಳ್ಳುತ್ತಿದ್ದ ಬಹುಜನಕ್ಕೆ ಅಭಿಮುಖಿಯಾಗಬೇಕು, ಅಲ್ಲಿ ಅವರ ಭಾಷೆಗಳನ್ನೇ ಬಳಸಬೇಕು ಎಂಬ ಜನಮುಖಿಯಾದ ನೆಲೆಗಳಿಗೆ ಅದು ಒತ್ತಾಸೆಯಾಗಲಿಲ್ಲ. ಈ ನೆಲೆಯಲ್ಲಿ ಮೂಡಿ, ವಿಕಾಸಗೊಂಡ ಸಂಸ್ಕೃತದ ಯಾವುದೇ ಪ್ರಕಾರದ ಸಾಹಿತ್ಯ ಅಕಾಡೆಮಿಕ್ ವಲಯದ ಆಚೆಗಿನ ಹಾಗೂ ಬೆವರಿನ ವಾಸನೆಯಿಂದ ಆವೃತರಾದ ದಲಿತ ಮೊದಲಾದ ಶೋಷಿತ ಸಮುದಾಯವನ್ನು ಮುಟ್ಟಿ, ತನ್ನ ಶುಭ್ರತೆಯನ್ನು ಹಾಳು ಮಾಡಿಕೊಳ್ಳಲು ಇಷ್ಟಪಡಲಿಲ್ಲ. ಈ ನಿಟ್ಟಿನ ಚರಿತ್ರೆ ಕಾಲಾಂತರದಲ್ಲಿ ಜನಪರ ವಿಚಾರಗಳನ್ನು ಅನ್ವೇಷಿಸಿ, ಅವು (ಚಾರ್ವಾಕ, ಮಾಧ್ಯಮಿಕ ಮೊದಲಾದವರಲ್ಲಿ) ಹೊಸ ಹೊಸ ವಿನ್ಯಾಸಗಳಲ್ಲಿ ಪ್ರಕಟವಾಯಿತಾದರೂ ‘ಬಹುಜನ ಮುಖಿ’ ಎಂಬ ನೆಲೆಯಿಂದ ದೂರವೇ ಉಳಿದದ್ದು ಸತ್ಯವಾಯಿತು. ಇಂತಹ ವಿನ್ಯಾಸದ ಚರಿತ್ರೆಯನ್ನೂ ಒಳಗೊಂಡ ಭಾರತದಲ್ಲಿ ಬುದ್ಧನ ಉಗಮ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಮಂಡಿಸಿದ ಅವನ ವಿಚಾರಗಳು ಏಕಕಾಲಕ್ಕೆ ಜನಪರವೇ ಅಲ್ಲದೆ ಜನಮುಖಿಯೂ ಆದ ನೆಲೆಯನ್ನು ಪಡೆದು, ತನ್ನ ಸಾಮಾಜಿಕ ಬದ್ಧತೆಯನ್ನು ಪ್ರಕಟಪಡಿಸಿತು. ಈ ವಿಚಾರಗಳು ಜನರ ಭಾಷೆಯಲ್ಲಿ ಸಂವಹನಗೊಂಡಿದ್ದರಿಂದ ಜನರ ಅಂತರಾಳವನ್ನು ಸುಲಭವಾಗಿ ಮುಟ್ಟುವಲ್ಲಿ ಯಶಸ್ವಿಯಾದವು. ಅಲ್ಲದೆ ಬಿಕ್ಕುಗಳ ಶ್ರಮದಿಂದ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸರಣಗೊಂಡವು. ಇಲ್ಲಿ ಸಂಸ್ಕೃತ ಸಾಮ್ರಾಜ್ಯಶಾಹಿ ಪೋಷಿಸುತ್ತಾ ಬಂದ ಸನಾತನ ಸಾಮಾಜಿಕ ಶ್ರೇಣೀಕೃತ ಜಡ ವ್ಯವಸ್ಥೆ ಆತಂಕಕ್ಕೀಡಾಯಿತು. ಪರಿಣಾಮವಾಗಿ ತನ್ನ ರಕ್ಷಣೆಯ ನಿಮಿತ್ತವಾಗಿ ಅಥವ ತನ್ನ ಅಸ್ತಿತ್ವವನ್ನೂ ಉಳಿಸಿ ಕೊಳ್ಳುವುದಕ್ಕಾಗಿ ಬೌದ್ಧ ತತ್ವಗಳನ್ನು ಪುಟ್‌ಬಾಲನ್ನಾಗಿ ಪರಿಗಣಿಸಿ, ಅದನ್ನು ಕಾಲಿನಿಂದ ಬಲವಾಗಿ ಒದೆಯಿತು. ಅದು ಎಷ್ಟೇ ಉದಾತ್ತ ತತ್ವಗಳನ್ನು ಒಳಗೊಂಡಿದ್ದರೂ ಅದು ಇಲ್ಲಿಯೇ ಹುಟ್ಟಿದ್ದರೂ ವೈದಿಕಶಾಹಿಯ ಕಾಲಿನ ಬಲವಾದ ಒದೆತಕ್ಕೆ ಗುರಿಯಾಗಿ ಸಮುದ್ರವನ್ನು ದಾಟಿ ಶ್ರೀಲಂಕಾಕ್ಕೆ ಹೋಗಿಬಿದ್ದಿತು. ಉತ್ತರದಲ್ಲಿ ಹಿಮಾಲಯವನ್ನು ದಾಟಿ ಚೀನಾ, ಜಪಾನ್‌ಗಳ ಆಶ್ರಯವನ್ನು ಪಡೆಯಿತು. ಹೀಗೆ ಬುದ್ಧನ ದಲಿತಪರವೂ ಆಗಿರುವ ವ್ಯಾಪಕ ಮನುಷ್ಯ ತತ್ವ ಪ್ರಣಾಲಿ ಅಥವ ಅವನೇ ಹೆಸರಿಸಿದ ಬೌದ್ಧ ಧರ್ಮ ಭಾರತದಲ್ಲಿ ನೆಲೆಯನ್ನು ಪಡೆಯಲು ಶಕ್ತವಾಗಲಿಲ್ಲ.
ಹೀಗೆ ಸಾಮಾಜಿಕ ಅಪಮಾನದ ನೋವನ್ನೇ ಬದುಕನ್ನಾಗಿಸಿಕೊಂಡ ದಲಿತರ ಮೌನಕ್ಕೆ ಮಾತಾದ ಬುದ್ಧನಿಗೆ ಇಲ್ಲಿ ನೆಲೆ ಅಥವ ಮಾನ್ಯತೆ ಸಿಕ್ಕಲಿಲ್ಲ ಎಂಬುದು ದಲಿತ ಪರವಾದ ವಿಚಾರಕ್ಕೆ ನೆಲೆ ಅಥವ ಮಾನ್ಯತೆ ಸಿಕ್ಕಲಿಲ್ಲ ಎಂಬ ಧ್ವನ್ವಾರ್ಥವನ್ನು ನೀಡುತ್ತದೆ. ಆದರೂ ದಲಿತ ಪರವಾದ ನೆಲೆಯಲ್ಲಿ ಮೊದಲು ವ್ಯಾಪಕವಾಗಿ ಚಿಂತಿಸಿ ಕಾರ್ಯೋನ್ಮುಖಗೊಂಡ ವ್ಯಕ್ತಿಗಳಲ್ಲಿ ಬುದ್ಧ ಮೊದಲನೆಯವನಾಗಿ ಕಾಣಬರುವುದರಿಂದ ಅವನಿಗೆ ಐತಿಹಾಸಿಕ ಮಹತ್ವ ಪ್ರಾಪ್ತವಾಗಿ ಅವನೇ ದಲಿತರ ಮೊದಲ ನಾಯಕ ಎಂಬ ಭಾವನೆಗೆ ಇಂಬು ದೊರೆಯುತ್ತದೆ.
ದಲಿತೋದ್ಧಾರದ ಇತಿಹಾಸದಲ್ಲಿ ವ್ಯಾಪಕ ಸೋಲನ್ನುಂಡ ಬುದ್ಧ ತದನಂತರದಲ್ಲಿ ದಲಿತೋದ್ಧಾರಕರು ಎಂದೂ ಕರೆಯಬಹುದಾದ ಅಸಂಖ್ಯ ಸಾಮಾಜಿಕ ಸುಧಾರಕರಿಗೆ ಅವಕಾಶ ಮಾಡಿಕೊಟ್ಟಿದ್ದಾನೆ. ಇವರ ಸಾಲಿನಲ್ಲಿ ಬಸವಣ್ಣ ಮೊದಲಾದ ಭಾರತದ ಭಾಷಾ ವಲಯಗಳಲ್ಲಿ ಕಾಣಬರುವ ವಚನಕಾರರು, ಕೀರ್ತನಕಾರರು, ಭಕ್ತಪಂಥದ ಸಂತರು, ತತ್ವಪದಕಾರರು ನಿಲ್ಲುತ್ತಾರೆ. ಇಷ್ಟು ದೊಡ್ಡ ಸಂಖ್ಯೆಯ ಇವರೂ ಸಹ ಅಂಬೇಡ್ಕರ್ ಅವರಿಗೆ ಸಾಕಷ್ಟು ಕೆಲಸವನ್ನೇ ಬಾಕಿ ಉಳಿಸುತ್ತಾರೆ. ಅಂಬೇಡ್ಕರ್ ಅವರು ಸಹ ದಲಿತಪರವಾದ ಗಣನೀಯ ಸಾಧನೆ ಮಾಡಿದಾಗಲೂ ಇನ್ನೂ ನೂರು ಅಂಬೇಡ್ಕರರಿಗೆ ಕೆಲಸದ ಅವಕಾಶವನ್ನು ಉಳಿಸಿಯೇ ಇದ್ದಾರೆ. ಅಥವ ಆ ಥರದ ಅವಕಾಶ ಇಂಡಿಯಾದ ಸಂದರ್ಭದಲ್ಲಿ ಕಾಲದಿಂದ ಕಾಲಕ್ಕೆ ಬೆಳೆಯುತ್ತಲೇ ಇದೆ. ಈ ಬಗೆಯ ಪ್ರಕ್ರಿಯೆ ಎಸ್.ಎಫ್. ನ್ಯಾಡಲ್ ಹೇಳುವ ಸಂಸ್ಕೃತಿಯ ವಿರೋಧಾಭಾಸಗಳಲ್ಲಿ ಒಂದಾದ ಸಂಸ್ಕೃತಿಯು ಏಕಕಾಲದಲ್ಲಿ ಸ್ಥಿರವೂ ನಿರಂತರ ಚಲನಶೀಲವೂ ಆದ ಸ್ಥಿತಿಯನ್ನು ಉಳಿಸಿಕೊಂಡಿರುತ್ತದೆ ಎಂಬ ಮಾತನ್ನು ನೆನಪಿಸುತ್ತ, ಮನಸ್ಸಿಗೆ ತಾತ್ಕಾಲಿಕ ಸಮಾಧಾನವನ್ನು ನೀಡುತ್ತದೆ. ಈ ಚರ್ಚೆ ಒಟ್ಟಾರೆ ಭಾರತೀಯ ಸಂದರ್ಭದ್ದು. ಇದನ್ನು ಈಗ ಕನ್ನಡದ ಸಂದರ್ಭಕ್ಕೆ ಜಾರಿಸಬೇಕಾಗಿದೆ.
ಕನ್ನಡದಲ್ಲಿ ಮೊಟ್ಟಮೊದಲಿಗೆ ದಲಿತಪರವಾದ ಚಿಂತನೆ ವ್ಯಕ್ತವಾದದ್ದು ವಚನ ಸಾಹಿತ್ಯದಲ್ಲಿ. (ಈ ಮಾತನ್ನು ಶಿಷ್ಟ ಸಾಹಿತ್ಯ ಪರಂಪರೆಯನ್ನು ಅನುಲಕ್ಷಿಸಿ ಆಡುತ್ತಿದ್ದೇನೆ ಮತ್ತು ವಚನ ಸಾಹಿತ್ಯ ಎಂಬುದು ಮೂಲಭೂತವಾಗಿ ಸಾಹಿತ್ಯದ ಪರಿವೇಷ ತೊಟ್ಟು ಬಂದದ್ದಲ್ಲ; ಅದು ವಾಜ್ಮಯವಾಗಿ ಶರಣರಿಂದ ಹೊಮ್ಮಿದ್ದಾದ್ದರಿಂದ ಅದನ್ನು ಶರಣ ವಾಜ್ಮಯ ಎಂದು ಕರೆಯುವುದೇ ಹೆಚ್ಚು ಸೂಕ್ತ ಎಂದು ಭಾವಿಸುತ್ತಾ, ಅನಿವಾರ್ಯವಾಗಿ ನಾನು ಶೀರ್ಷಿಕೆಗೆ ಗಮನವನ್ನಿಟ್ಟು ಅದನ್ನು ವಚನ ಸಾಹಿತ್ಯ ಎಂದೇ ಮುಂದೆ ಬಳಸುತ್ತಾ ಸಾಗುತ್ತೇನೆ.) ದಲಿತಪರ ಚಿಂತನೆಯೇ ವಚನಕಾರರ ಕೇಂದ್ರ ಕಾಳಜಿಯಲ್ಲ. ಆದರೆ ಅವರ ಸಮಾನತೆಯ ಆಶಯಕ್ಕೆ ಪೂರಕವಾಗಿ ದಲಿತಪರ ಚಿಂತನೆ ಅವರಲ್ಲಿ ವ್ಯಾಪಕವಾಗಿ ಮೂಡುವುದು ಅನಿವಾರ್ಯವಾಗಿದೆ. ಎಷ್ಟರಮಟ್ಟಿಗೆಂದರೆ, ದಲಿತ ಅಥವ ಶೋಷಿತ ಸಮುದಾಯವನ್ನು ಕುರಿತು ಮಾತನಾಡದ ಯಾವ ಚಿಂತಕನನ್ನೂ ನಾವು ಆ ಯುಗದಲ್ಲಿ ಕಾಣಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ದಲಿತಪರವಾದ ಚಿಂತನೆ ಸಾಮಾಜಿಕ ಮೇಲ್ವರ್ಗಗಳ ಮತ್ತು ಕೆಳವರ್ಗದ ಎಲ್ಲಾ ವಚನಕಾರರಲ್ಲಿ ಮೂಡಿದೆ. ಅದರಲ್ಲಿ ಮೇಲ್ವರ್ಗದ ವಚನಕಾರರ ವೈಚಾರಿಕ ವಿನ್ಯಾಸಕ್ಕೂ ಕೆಳವರ್ಗದವರ ವೈಚಾರಿಕ ವಿನ್ಯಾಸಕ್ಕೂ ವ್ಯತ್ಯಾಸವಿದೆ. ಅದು ಸಹಜ. ಕಾರಣ, ದಲಿತ ಎಂಬ ಪರಿಕಲ್ಪನೆ ಒಬ್ಬರಲ್ಲಿ ನೋವಾಗಿ ಸ್ಫೋಟಗೊಂಡರೆ, ಇನ್ನೊಬ್ಬರಲ್ಲಿ ಅದು ಅನುಕಂಪವಾಗಿ ಅಷ್ಟೇ ಅಭಿವ್ಯಕ್ತಿಯನ್ನು ಪಡೆಯುತ್ತದೆ. ಆದ್ದರಿಂದ ಪ್ರಾತಿನಿಧಿಕವಾಗಿ ಬಸವಣ್ಣ ಮತ್ತು ಕಾಳವ್ವೆ-ಇವರ ದಲಿತಪರ ಚಿಂತನೆಯ ವಿನ್ಯಾಸಕ್ಕೆ ಭಿನ್ನತೆ ಸಾಧ್ಯವಾಗಿದೆ. ಏನೇ ವಿನ್ಯಾಸ ಅಲ್ಲಿದ್ದರೂ ಎಲ್ಲಾ ವರ್ಗದ ಶರಣರಿಂದ ಅಭಿ;ವ್ಯಕ್ತಿಗೊಂಡ ದಲಿತಪರ ಚಿಂತನೆ ಡೋಂಗಿ ಆಗಿರಲಿಲ್ಲ. ಇದಕ್ಕೆ ಸಮರ್ಥನೆಯನ್ನಾಗಿ ತಾವು ತಮ್ಮ ಅಭಿವ್ಯಕ್ತಿ ಪ್ರಕಾರಕ್ಕೆ ‘ವಚನ’ ಎಂದು ಕೊಟ್ಟುಕೊಂಡ ಹೆಸರನ್ನು ನಮೂದಿಸುತ್ತೇನೆ. ಅಲ್ಲದೆ ಅವರ ನುಡಿ ಮತ್ತು ನಡೆಗಳಲ್ಲಿ ಇದ್ದಂತಹ ಅಭಿನ್ನತೆ ಅವರ ಸೈದ್ಧಾಂತಿಕತೆಯನ್ನು ಗಟ್ಟಿಗೊಳಿಸಿದ್ದಷ್ಟೇ ಅಲ್ಲ ಕ್ಷಿಪ್ರ ಕಾರ್ಯಾಚರಣೆಗೂ ಜನರನ್ನು ಪ್ರೇರೇಪಿಸಿತ್ತು ಎಂಬುದನ್ನು ಇಲ್ಲಿ ಗಮನಕ್ಕೆ ತಂದುಕೊಂಡಿದ್ದೇನೆ. ಈ ಬಗೆಯ ಪ್ರಾಮಾಣಿಕತೆಯನ್ನು ಮೆರೆದ ವಚನಕಾರರು ಮತ್ತು ಅವರ ಸಾಹಿತ್ಯ ನಮ್ಮ ಪರಂಪರೆಯಲ್ಲಿ ಅಪೂರ್ವವೂ ಅತ್ಯಂತ ವೈಶಿಷ್ಟ್ಯಪೂರ್ಣವೂ ಎನ್ನಿಸಿಕೊಳ್ಳಲು ಸಾಧ್ಯ ಮಾಡಿಕೊಂಡಿದೆ.
ಹೀಗೆ ಕನ್ನಡದ ಸಂದರ್ಭದಲ್ಲಿ ಸಾಮಾಜಿಕವಾಗಿ ಅಸ್ಪೃಶ್ಯತೆಗೆ ಗುರಿಯಾಗಿದ್ದ ದಲಿತ ಸಮುದಾಯ ಅಕ್ಷರ ಮತ್ತು ಅದರ ಮೂಲದ ಶಿಷ್ಟ ಸಾಹಿತ್ಯಕ್ಕೆ ಅಸ್ಪೃಶ್ಯವೇ ಆಗಿ ಉಳಿದು ಬಂದದ್ದು ವಿಶೇಷವೇನಲ್ಲ. ಇಂತಹ ಅಸ್ಪೃಶ್ಯ ಸಮುದಾಯವನ್ನು ಮೊದಲು ಸ್ಪರ್ಶ ಮಾಡಿದ್ದು ವಚನ ಸಾಹಿತ್ಯ. ತಾನು ಅವರನ್ನು ಕುರಿತು ಮಾತನಾಡಿದ್ದು ಅಷ್ಟೇ ಅಲ್ಲ, ಅವರನ್ನು ಸಂಸ್ಕೃತಿಯ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್‌ಸ್ತರಕ್ಕೆ ತರಲು ಸಹ ಮೊದಲಿಗೆ ಯತ್ನಿಸಿತು. ಹೀಗೆ ವಚನಗಳ ಕ್ರಿಯಾಶೀಲತ್ವ ಕನ್ನಡ ಪರಂಪರೆಗೆ ಒಂದು ಘಟ್ಟದಲ್ಲಿ ಮಾನವನ್ನು ತಂದದ್ದು ಅಷ್ಟೇ ಅಲ್ಲ, ಕರ್ನಾಟಕವನ್ನೂ ಒಳಗೊಂಡ ಭಾರತದ ಬದುಕು ಮತ್ತು ದಲಿತರ ಚರಿತ್ರೆಯಲ್ಲಿ ವಿಶಿಷ್ಟ ಮತ್ತು ಐತಿಹಾಸಿಕ ಮಹತ್ವದ ಅಧ್ಯಾಯವಾಗಿ ಸಹ ಅಸ್ತಿತ್ವವನ್ನು ಪಡೆಯತೊಡಗಿತು.
ಮೇಲ್ವರ್ಗದ ವಚನಕಾರರ ದಲಿತಪರ ಚಿಂತನೆ
ದಲಿತೋದಯದ ಪ್ರಶ್ನೆ ಕೇವಲ ದಲಿತರಿಂದಷ್ಟೇ ಸಾಧ್ಯವಾಗದ ಪ್ರಶ್ನೆಯಾಗಿದೆ. ಇದಕ್ಕೆ ಅನ್ಯವರ್ಗದವರ ಮನುಷ್ಯಪರ ಕಾಳಜಿಯೂ ಕ್ರಿಯಾಶೀಲವಾಗಬೇಕು. ಅಂಥಲ್ಲಿ ಮಾತ್ರ ಸಮಾನತೆಯ ಬದುಕು ಮೂಡಲು ಸಾಧ್ಯ. ಈ ನೆಲೆಯಲ್ಲಿ ಚಿಂತಿಸಿದವರು ವಚನಕಾರರು. ಈ ಭಾಗದ ಉಪಶೀರ್ಷಿಕೆಗೆ ಸಂಬಂಧಿಸಿ ಹೇಳುವುದಾದರೆ ಅವರು ಮೇಲ್ವರ್ಗದ ವಚನಕಾರರು. ಇವರಲ್ಲಿ ಬಸವಣ್ಣನೇ ಮುಖ್ಯವಾಗಿ ಅನೇಕರು ಮಾತನಾಡುತ್ತಾರೆ. ಇವರ ಮಾತುಗಳಲ್ಲಿ ದಲಿತ ಸಂಬಂಧಿ ಕಾಳಜಿ ಇದೆ. ಅದರಲ್ಲಿ ಪ್ರಾಮಾಣಿಕತೆ ಇದೆ. ಆ ಮೂಲಕ ತಮ್ಮ ‘ವಚನ’ಕ್ಕೆ ಬದ್ಧರಾಗುತ್ತಾರೆ. ಈ ನೆಲೆಯಲ್ಲಿ ದಲಿತ ಸಮುದಾಯಗಳು ತಮ್ಮ ಜಾತಿಗಳ ವಿಚಾರದಲ್ಲಿ ಇಟ್ಟುಕೊಂಡಿದ್ದ ಕೀಳರಿಮೆಯನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಅದರ ಭಾಗವಾಗಿ ಅವರ ಜಾತಿಗಳ ಮೂಲವನ್ನು ಸಪ್ತರ್ಷಿಗಳಲ್ಲಿ ಸಮೀಕರಿಸಲು ಯತ್ನಿಸುತ್ತಾರೆ. ಉದಾಹರಣೆಗೆ,
ವ್ಯಾಸ ಬೋಯಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು, ಸಾಕ್ಷಾತ್ ಅಗಸ್ತ್ಯ ಕಬ್ಬಿಲ,
ದೂರ್ವಾಸ ಮಚ್ಚಿಗ, ಕಶ್ಯಪ ಕಮ್ಮಾರ,ಕೌಂಡಿಲ್ಯನೆಂಬ ಋಷಿ
ಮೂರು ಭುವನವನರಿಯೆ ನಾವಿದ ಕಾಣಿಭೋ
ನಮ್ಮ ಕೂಡಲ ಸಂಗಮದೇವನ ವಚನವಿಂತೆಂದು ಶ್ವಪಚೋಪಿಯಾದರೇನು?
ಶಿವಭಕ್ತನೇ ಕುಲಜನು.
ಇಲ್ಲಿ ಸಂಶೋಧನ ನೆಲೆಯ ಪ್ರಜ್ಞೆ ಇದೆ ಎಂದು ನಾನು ಹೇಳುತ್ತಿಲ್ಲ. (ಬಹುಶಃ ವಚನಕಾರರೂ ಹಾಗೆ ಹೇಳಲಾರರು). ಆದರೆ ಈ ಮಾತುಗಳ ಒತ್ತಾಸೆಯಲ್ಲಿ ಕೆಳವರ್ಗದವರಿಗೆ ತಮ್ಮ ಜಾತಿಗಳ ಹಾಗೂ ಕಸುಬುಗಳ ಪರವಾದ ಉತ್ತಮಿಕೆಯ ಪ್ರಜ್ಞೆಯನ್ನು ತರುವ ಯತ್ನವಿದೆ ಎಂಬುದನ್ನು ಒಪ್ಪಬೇಕು ಎನ್ನಿಸುತ್ತದೆ. ಈ ಮೂಲಕವಾಗಿ ಅವರಲ್ಲಿ ಆತ್ಮವಿಶ್ವಾಸವನ್ನು, ಸ್ಥೈರ್ಯವನ್ನು ತುಂಬಲು ಯತ್ನಿಸುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಜಾತಿಗಳ ಪರವಾದ ಮೇಲರಿಮೆಯಲ್ಲಿ ಹುಟ್ಟಿದ ಪಾಪಪ್ರಜ್ಞೆಯು ತಮ್ಮ ಜಾತಿಗಳ ಅಪಮೌಲ್ಯೀಕರಣಕ್ಕೆ ವರ್ತನೆಗೆ ಸಹ ತಮ್ಮನ್ನು ಎಳಸುತ್ತದೆ.
ಹೀಗೆ ಮೇಲ್ವರ್ಗದ ವಚನಕಾರರು ದಲಿತರ ಸಾಮಾಜಿಕ-ಆರ್ಥಿಕ ಉನ್ನತಿಗಾಗಿ ಪ್ರಾಮಾಣಿಕವಾಗಿ ನುಡಿಯುತ್ತಲೇ, ಕುಲಕ್ಕೆ ಸಂಬಂಧಿಸಿದಂತೆ ಹೊಸ ಮೀಮಾಂಸೆಯನ್ನು ಮಂಡಿಸುತ್ತಾರೆ.
ಕೊಲುವನೇ ಮಾದಿಗ, ಹೊಲಸು ತಿಂಬುವನೇ ಹೊಲೆಯ
ಕುಲವೇನೋ ಆವಂದಿರ ಕುಲವೇನೋ?
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲ ಸಂಗನ
ಶರಣರೇ ಕುಲಜರು.
ಇವರ ವಿಪರೀತಗಳು ಏನೇ ಇರಲಿ, ಅಂತೂ ಹಿಂಸಾತ್ಮಕವಲ್ಲದ ನೆಲೆಯಲ್ಲಿ ದಲಿತ ಬದುಕನ್ನು ಕಟ್ಟಲೆಳಸುವ ಚಿಂತನೆಗಳು ಇಲ್ಲಿ ಪ್ರಾಮಾಣಿಕವಾಗಿ ಮೂಡಿವೆ ಎಂಬುದು ಗಮನಾರ್ಹ. ಸಾಂಸ್ಥಿಕ ಧರ್ಮಗಳ ಮೇಲಾಟವಿದ್ದ ಕಾಲದಲ್ಲಿ, ಅಹಿಂಸೆಯನ್ನು ಎಲ್ಲಾ ಧರ್ಮಗಳೂ ಸೈದ್ಧಾಂತಿಕ ಸ್ಥಿತಿಯಲ್ಲಾದರೂ ತಮ್ಮ ಒಂದು ಮುಖ್ಯ ತತ್ವವೆಂದು ಪರಿಗಣಿಸಿದ್ದ ಸನ್ನಿವೇಶದಲ್ಲಿ ಹಾಗೂ ಈ ತತ್ವ ತನಗೂ ಒಪ್ಪಿತಗೊಂಡ ವಚನ ಧರ್ಮಕ್ಕೆ ಮೇಲ್ಕಾಣಿಸಿದ ಮಾತನ್ನು ಆಡಿದ್ದು ತಪು ಎಂದೆನ್ನಿಸಿಲ್ಲ. ಶ್ರಮವನ್ನೇ ಬದುಕನ್ನಾಗಿಸಿಕೊಂಡ ಹಾಗೂ ಆಧ್ಯಾತ್ಮ ಜ್ಞಾನ ಪಡೆಯಲು ಪುರುಸೊತ್ತು ಮತ್ತು ವ್ಯವಧಾನ ದೂರವಾಗಿದ್ದ ದಲಿತ ಸಮುದಾಯಕ್ಕೆ ಇದು ವಿಪರೀತ ಎಂದೆನ್ನಿಸಿದರೂ, ಅದರಲ್ಲಿ ತನ್ನ ಅನನ್ಯತೆ ಎಲ್ಲಿ ಎಂದೆನ್ನಿಸಿದರೂ ಅದು ಆದರ್ಶದ ಪ್ರಶ್ನೆಯಾಗಿ, ಅನೇಕರಲ್ಲಿ ಅನುಭಾವದ ಪ್ರಶ್ನೆಯೂ ಆಗಿ ಮೂಡಿ ನಿಲ್ಲುತ್ತದೆ. ಇದು ಮೇಲ್ವರ್ಗದ ವಚನಕಾರರಿಂದ ಹೇರಲ್ಪಟ್ಟ ಎಂಬುದಕ್ಕಿಂತ ಹೇಳಲ್ಪಟ್ಟ ಜಾತಿ ಮೀಮಾಂಸೆ.
ದಲಿತ ವಚನಕಾರರ ಚಿಂತನೆಯ ವಿನ್ಯಾಸ
ದಲಿತ ವಚನಕಾರರದು ಮುಖ್ಯವಾಗಿ ಸ್ಫೋಟ ಪ್ರತಿಭೆ. ಈ ರೀತಿಗೆ ಸ್ಥೂಲವಾದ ನೆಲೆಯಲ್ಲಿ ಮಾತ್ರ ಒಪ್ಪಬಹುದಾದ ವರ್ಣಾಶ್ರಮ ವ್ಯವಸ್ಥೆಯ ದಮನಕಾರಿ ನೀತಿ ಕಾರಣವಾಗಿದೆ. ಆದ್ದರಿಂದಲೇ ದಲಿತ ವಚನಕಾರರ ಸಾಮಾಜಿಕ ಚಿಂತನೆಗಳು ಸ್ಫೋಟ ಗುಣವನ್ನು ಪಡೆಯಲು ಸಾಧ್ಯವಾದದ್ದು. ಇದು ಅನ್ಯರಿಗೆ ಮಾರಕವಾದ ಸ್ಫೋಟವಲ್ಲ; ತಮ್ಮ ಹಕ್ಕಿನ ಪರವಾದ ಜಾಗೃತ ನೋಟ. ಇಲ್ಲಿ ಇವರು ಅನುಭವಿಸಿದ ಸಾಮಾಜಿಕ ಅಪಮಾನ ತಮ್ಮ ಜಾತಿಗಳ ಪರವಾಗಿ ಮೂಡಿಸಿಕೊಂಡ ಕೀಳರಿಮೆಗೆ ಕಾರಣ ಎಂಬ ಪರೋಕ್ಷ ಸತ್ಯವೂ ವೇದ್ಯವಾಗುತ್ತದೆ. ಈ ಹಂತದಲ್ಲಿ ತಮ್ಮ ಜಾತಿಗಳಿಗೆ ಪಾವಿತ್ರ್ಯತೆಯನ್ನು ತರಲು ಯತ್ನವನ್ನು ಮಾಡುತ್ತಾರೆ.
ಆಚಾರವೇ ಕುಲ ಅನಾಚಾರವೇ ಹೊಲೆ
ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಗ, ದೂರ್ವಾಸ ಮಚ್ಚಿಗ, ದದೀಚಿ ಕೀಲಿಗ
ಕಶ್ಯಪ ಕಮ್ಮಾರ…
ಇಂತೀ ಸಪ್ತ ಋಷಿಗಳೆಲ್ಲರೂ ಸತ್ಯದಿಂದ ಮುಕ್ತರಾದರೆಂಬುದನರಿಯದೆ
ಅಸತ್ಯದಲ್ಲಿ ನಡೆದು ನಾವು ವಿಪ್ರರು, ನಾವು ವಿಪ್ರರು, ನಾವು ಘನವೆಂದು ಹೋರುವ
ಹೊತ್ತು ಹೋಕರ ಮಾತೇತಕ್ಕೆ?
ಅದರ ಜೊತೆಗೆ ಮೇಲ್ವರ್ಗದವರು ತಮ್ಮ ಜಾತಿಗಳ ಪರವಾಗಿ ಇಟ್ಟುಕೊಂಡ ‘ಅಹಂ’ನ ಟೊಳ್ಳು ಸತ್ಯಗಳನ್ನು ಸಹ ಕಷ್ಟಪಟ್ಟು ನಿರಾಕರಿಸುತ್ತಾರೆ. ಪರಿಣಾಮವೇನೇ ಇರಲಿ, ಅಂತಹ ದೊಡ್ಡ ಸಫಲ ಪ್ರಯತ್ನವನ್ನಂತೂ ಅವರು ಮಾಡಿಯೇ ತೀರುತ್ತಾರೆ. ಕೊನೆಗೆ ವಾಸ್ತವದಲ್ಲಿ ಅವರೇ ತೀರುತ್ತಾರೆಯೇ ವಿನಃ ಆ ಜಾತಿ ಮೂಲದ ಅಹಮಿಕೆಗಳು ಆಧುನಿಕ ಯುಗದ ಹೊತ್ತಿಗೂ ವಿರಾಟ ರೂಪದಲ್ಲಿ ಅಟ್ಟಹಾಸಗೈಯುವಷ್ಟರ ಮಟ್ಟಿಗೆ ಪಡೆದ ವಿಜಯದ ಎದುರಿನಲ್ಲಿ ತಮ್ಮ ವ್ಯಾಪಕ ಸೋಲನ್ನೂ ಅನುಭವಿಸುತ್ತಾರೆ.
ಒಟ್ಟಾರೆ ದಲಿತ ವಚನಕಾರರು ತಮ್ಮ ಜಾತಿಗಳ ಮೂಲವನ್ನು ಪವಿತ್ರೀಕರಿಸುತ್ತಾ, ತಮ್ಮ ಸಂವೇದನೆಗಳಿಗೆ ಘನತೆಯನ್ನು ತಂದುಕೊಳ್ಳುವ ಯತ್ನವನ್ನು ಮಾಡುತ್ತಾ ಸಾಗುತ್ತಾರೆ. ಈ ನೆಲೆಯಲ್ಲಿ ತಮ್ಮ ಜಾತಿಗಳಲ್ಲಿಯೂ ಇರುವ ಹಿಂಸಾತ್ಮಕ ನೆಲೆಗಳಿಗೆ ಪರೋಕ್ಷ ಸಮರ್ಥನೆಯನ್ನು ಸಹ ಕೆಲವು ವಚನಕಾರರು ನೀಡುತ್ತಾರೆ. ಮತ್ತೂ ಕೆಲವರು ಈ ನೆಲೆಯನ್ನು ದಾಟಿದ ಅಹಿಂಸಾ ನೆಲೆಯ ತಮ್ಮ ತತ್ವವನ್ನು ವಚನದ ಪರಿಧಿಗೆ ಸೇರಿಸುತ್ತಾರೆ. ಈ ಬಗೆಯ ವೈವಿಧ್ಯಮಯ ಚಿಂತನೆ ದಲಿತಪರವಾದ ನೆಲೆಯಲ್ಲಿ ಕಾಣಬರುತ್ತದೆ.
ಶಿವ ಸಂವೇದನೆಯಲ್ಲಿ ಕರಗಿದ ದಲಿತ ಸಂವೇದನೆ
ಒಟ್ಟು ಭಾರತೀಯ ಸಂಸ್ಕೃತಿ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯನ್ನು ಒಪ್ಪಿ, ಆಚರಿಸುತ್ತಾ ಬಂದಿದೆ ಎಂಬುದನ್ನು ಈಗಾಗಲೇ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದೇನೆ. ಈ ವ್ಯವಸ್ಥೆಯಲ್ಲಿ ವಿವಿಧ ಜಾತಿಗಳ ಅಥವ ವರ್ಗ ಅಥವ ವರ್ಣಗಳ ಚಲನೆ ಇರುವುದು ಮೇಲ್ಮುಖವಾಗಿ. ಒಂದು ಧರ್ಮ ಅಥವ ಜಾತಿಗೆ ತನ್ನ ಮೇಲ್‌ಸ್ತರದಲ್ಲಿ ಇರುವ ಧರ್ಮ ಅಥವ ಜಾತಿಯೇ ಅಂತಿಮ ಆದರ್ಶ. ಅದರ ಪರಿಣಾಮವಾಗಿಯೇ ವೈದಿಕ ಧರ್ಮಕ್ಕೆ ವಿರೋಧವಾಗಿ ಹುಟ್ಟಿದ ಜೈನಧರ್ಮ ಅಂತಿಮವಾಗಿ ಮತ್ತೊಂದು ವೈದಿಕ ಧರ್ಮವಾಗಿ ಮಾರ್ಪಟ್ಟದ್ದು. ಅಂತೆಯೇ ಶೈವಧರ್ಮವೂ ಅನೇಕ ಆಚರಣೆಗಳನ್ನು ಶೋಧಿಸಿಕೊಂಡು, ಸಂಸ್ಕೃತದಲ್ಲಿಯೂ ಮಂತ್ರ, ಶ್ಲೋಕಗಳ ರೂಪದ ತನ್ನ ಅಭಿ;ವ್ಯಕ್ತಿಯನ್ನು ಸಾಧಿಸಿಕೊಂಡದ್ದು. ಅದಕ್ಕೆ ಪೋಷಕವಾಗಿ ಮಂದಿರ, ಶಾಸ್ತ್ರಗಳೂ ಪೂಜನೀಯವಾದದ್ದು. ಇದು ಇಂಡಿಯಾದ ಸಂದರ್ಭದಲ್ಲಿ ಅನೇಕ ಧರ್ಮಗಳನ್ನು ಕುರಿತ ನೋವಿನ ಮಾತು. ಇತ್ತೀಚಿನ ದಿನಗಳಲ್ಲಿ ಗಾಯಿತ್ರಿ ವ್ರತ, ಸತ್ಯನಾರಾಯಣ ಪೂಜೆ ಮೊದಲಾದ ಸಂಪ್ರದಾಯಗಳಿಗೆ ಬಾಗಿಲು ತೆರೆಯುತ್ತಿರುವ ಶೂದ್ರರಿಗೂ ಆಳದಲ್ಲಿ ಈ ಜೂನಿಯರ್ ಬ್ರಾಹ್ಮಣರಾಗುವ ಪ್ರಜ್ಞೆ; ಇರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು.
ಒಟ್ಟಾರೆ ಸಾಂಸ್ಥಿಕ ಧರ್ಮಗಳ ಮೇಲಾಟ ಇಂಡಿಯಾದಲ್ಲಿ ಯಾವತ್ತೂ ಇದೆ. ಇಲ್ಲಿ ಅವುಗಳ ಮತ್ತು ಜಾತಿಗಳ ಹೆಸರಿನಲ್ಲಿ ಶೋಷಣೆ ಬಲಯುತವಾಗಿ ನಡೆದಿದೆ. ಪರಿಣಾಮವಾಗಿ ಇಲ್ಲಿ ಮಾನವ ಸಂಪನ್ಮೂಲವೂ ಸೊರಗಿ ದೇಶವೂ ಬೌದ್ಧಿಕವಾಗಿ ಅಲ್ಲದೆ ಭೌತಿಕವಾಗಿಯೂ ಬಡವಾಗಿದೆ. ಇಂತಹ ನೆಲೆಯಲ್ಲಿ ಮೇಲ್ಜಾತಿ, ವರ್ಗಗಳು ಕೆಳಸ್ತರಕ್ಕೆ ಇಳಿಯುವುದು ದುರ್ಲಭವೆಂದು ಗ್ರಹಿಸಿದ ವಚನಕಾರರ ಮನಸ್ಸು ದಲಿತರು ಅಥವ ಒಟ್ಟು ಶೋಷಿತರನ್ನೆ ಸಾಮಾಜಿಕ ಉನ್ನತಿಗೆ ತರುವ ಚಿಂತನೆಯನ್ನು ಮಾಡಿದೆ. ಈ ಚಿಂತನೆ ಅನೇಕ ತಂತ್ರಗಳನ್ನು ಸಹ ತನ್ನದನ್ನಾಗಿ ಮಾಡಿಕೊಂಡಿದೆ. ಇದರ ಭಾಗವಾಗಿ ಲಿಂಗಧಾರಣೆ ಮಾಡಿದವರೆಲ್ಲ ಶ್ರೇಷ್ಠರು ಶಿವನನ್ನು ಒಪ್ಪಿದವರೆಲ್ಲ ಒಂದೇ ‘ಕುಲ’ಜರು, ಅಂತಹ ‘ಭಕ್ತ’ ಜಾತಿ ‘ಭವಿ’ಗಳ ಜಾತಿಗಿಂತ ಭಿ;ನ್ನ ಮತ್ತು ಸಾಧಿತ ಶ್ರೇಷ್ಟ-ಎಂಬ ಮಾತು ಮತ್ತು ಕ್ರಿಯೆಗಳು ಅಲ್ಲಿಂದ ಜಾರಿಯಾಗ ತೊಡಗಿದವು.
ಹೀಗೆ ಶಿವ ಪಾರಮ್ಯವನ್ನು ಪ್ರತಿಷ್ಠಾಪಿಸಿದ ವಚನ ತತ್ವ ಮಾರಿ, ಮಸಣಿ ಮೊದಲಾದ ದೈವ ಮತ್ತು ಅವನ್ನು ಆರಾಧಿಸುವ ಜನ ಸಂಸ್ಕೃತಿಗಳನ್ನು ಒಂದು ಹಂತದಲ್ಲಿ ನಿರಾಕರಿಸಿತು. ಈ ವಿಕೇಂದ್ರೀಕೃತ ಸಾಮಾಜಿಕ ಸಂಸ್ಕೃತಿಗಳು ಏಕೀಕೃತ ಶಿವ ಸಂಸ್ಕೃತಿಯಲ್ಲಿ ಲೀನವಾಗಬೇಕೆಂದು ಅಪೇಕ್ಷಿಸಿತು. ಇಲ್ಲಿ ಕಾಯಕ ಯಾವುದೇ ಇರಲಿ, ಎಲ್ಲಕ್ಕೂ ಪಾವಿತ್ರ್ಯತೆಯನ್ನು ತಂದಿತು. ಹಾಗಾಗಿ ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ ಮೊದಲಾದ ನೂರಾರು ವಚನಕಾರರು ತಮ್ಮ ವೃತ್ತಿಗಳನ್ನುಳಿಸಿಕೊಂಡೇ ಏಕೀಕೃತ ನೆಲೆಯಲ್ಲಿ ವೀರಶೈವರಾಗಲು ಸಾಧ್ಯವಾಯಿತು.
ಇಂತಹ ದಾಟುವಿಕೆಗಳು ದಲಿತ ವಚನಕಾರರಲ್ಲಿ ವಿಶೇಷವಾಗಿ ಕಾಣಿಸಿಕೊಂಡವು. ಇಲ್ಲಿ ಇವರು ತಮ್ಮ ಸಂಸ್ಕೃತಿಯ ನೈಜ ನೆಲೆಗಳನ್ನು ದಾಟಿದ್ದು ಅಥವ ವಚನ ತತ್ವ ಅದಕ್ಕೆ ಒತ್ತಾಯಿಸಿದ್ದೂ ಪ್ರಜಾಪರವಲ್ಲದ ಕ್ರಮವೇ? ಅಥವ ಹಾಗೆ ದಾಟುತ್ತ ವಿಕೇಂದ್ರೀಕೃತವಲ್ಲದ ಏಕೀಕೃತ ವಿನ್ಯಾಸಕ್ಕೆ ಬಲವಾಗುತ್ತಾ, ಸಂಘಟಿತ ಹೋರಾಟದ ನೆಲೆಯಲ್ಲಿ ಛಿದ್ರೀಕೃತವಲ್ಲದ ಒಕ್ಕೂಟಾತ್ಮಕ ವಚನ ತತ್ವಕ್ಕೆ ಪಕ್ಕಾದದ್ದು ಸರಿಯಾದ ಕ್ರಮವೇ? ಎಂಬ ಪ್ರಶ್ನೆಗಳು ಏಳಬಹುದು. ಈ ಪ್ರಶ್ನೆಗಳು ತತ್ವಕ್ಕೆ ಹಿನ್ನೆಲೆಯಾದ ಸಮಾಜೋಧಾರ್ಮಿಕ ವ್ಯವಸ್ಥೆಯ ಸಂರಚನೆಯನ್ನು ಅರ್ಥಮಾಡಿಕೊಳ್ಳಬೇಕು. ಹಾಗಾದಾಗ ಅವರ ಕ್ರಮದ ಬಗೆಗೆ ಸಹಾನುಭೂತಿ ಮೂಡಿ, ಅದು ಇಂಡಿಯಾದ ಶ್ರೇಣೀಕೃತ ವ್ಯವಸ್ಥೆಯ ಒತ್ತಡದಲ್ಲಿ ಮೂಡಿದ ಚಾರಿತ್ರಿಕ ಅನಿವಾರ್ಯ ಎಂಬ ಒಳನೋಟವನ್ನು ನಮ್ಮಲ್ಲಿ ಮೂಡಿಸುತ್ತದೆ.
ಬಸವಪಧ, ಜುಲೈ ೨೦೦೨
ವಿಸ್ತೃತ ಲೇಖನ : ಸಂಕ್ರಮಣ, ಸಂ. ೩೭, ಸಂ.೨.
ಒತ್ತಾಸೆ : ಬಸವ ಸಮಿತಿ ಮತ್ತು ಸ್ನಾತಕೋತ್ತರ ಕೇಂದ್ರ ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಕೋಲಾರದಲ್ಲಿ ವ್ಯವಸ್ಥೆ ಮಾಡಿದ್ದ ‘ವಚನ ಸಾಹಿತ್ಯದ ಸಾಂಸ್ಕೃತಿಕ ಮೌಲ್ಯಗಳು’ ಎಂಬ ವಿಚಾರ ಸಂಕಿರಣದಲ್ಲಿ ಆಡಿದ ಮಾತುಗಳ ಪ್ರಬಂಧ ರೂಪವಿದು.
*****