ದುಡಿಮೆಗಾರರಣ್ಣ ನಾವು ದುಡಿಮೆಗಾರರು
ಎದೆಯ ತಂತಿ ಮೀಟಿ ನುಡಿವ ಹಾಡುಗಾರರು ||
ಕೆರೆಕುಂಟೆಗಳ ಕಟ್ಟುತ ನಾವು
ಬೆವರ ನೀರನು ಹರಿಸಿದೆವು
ಕಳೆಯ ಕೀಳುತ ಬೆಳೆಯ ಬೆಳೆಯುತ
ಒಡೆಯನ ಒಡಲನು ತುಂಬಿದೆವು ||
ಚಿಟ್ಟೆಕಂಗಳ ಬಟ್ಟೆಯ ನೇದು
ಬೆತ್ತಲೆ ಬದುಕನು ಉಂಡಿಹೆವು
ಕೊಳೆಯನು ತೊಳೆದು ಕಾಂತಿ ಕೊಟ್ಟವರು
ಬೆಳಕನು ಹುಡುಕಿ ಹೊರಟಿಹೆವು ||
ಕಾದ ಕಬ್ಬಿಣಕೆ ರೂಪಕೊಟ್ಟೆವು
ಸುಖದ ದಿನಕಾಗಿ ಕಾದಿಹೆವು
ಚಳಿ ಮಳೆ ಗಾಳಿಗೆ ಕಂಬಳಿ ನೇದೆವು
ಗಡಗಡ ನಡುಗುತ ಕೂತಿಹೆವು ||
ಸೂರು ಇಲ್ಲದೆ ಊರ ಕಾದೆವು
ಜೇಡರ ಬಲೆಯ ಜೇಡರ ಬದುಕು
ಬಲೆಗಳ ಬೀಸಿ ಮೀನು ಹಿಡಿದೆವು
ಮೀನಾದೆವು ನಾವೇ ಬಿಡುಗಡೆ ಬೇಕು ||
ಅರೆಗಳ ಹೊಡೆದವು ಹೊರೆಗಳ ಹೊತ್ತೆವು
ಮೆಟ್ಟು ಹೊಲೆಯುತ ಹಸಿಯಿತು ಹೊಟ್ಟೆ
ಕಾರ್ಖಾನೆಯ ಹೊಗೆಯಾಗಿ ಬಂದೆವು
ಹಗೆಯಾಯಿತೆ ಬಾಳು, ಬಾರದೆ ಪ್ರೀತಿ? ||
*****