ಹುಟ್ಟಿನಿಂದ ಕಟ್ಟಕೊನೆಗೆ ಕಾಯಬೇಕು ಕಾಯಿ || ಪ ||
ಗಿಡವ ಹಾಕಿ ಫಲವ ಬೇಡಿ ಕಾಯಬೇಕು ಕಾಯಿ
ದುಡಿದ ಮೇಲೆ ಫಲವಕೇಳಿ ಬೇಡಿ ಬೇಡಿ ಸಾಯಿ || ೧ ||
ಕಾಯಿ ಮಾಗಿ ಹಣ್ಣದಾಗಿ ಬೀಳ್ವವರೆಗೆ ಕಾಯಿ
ಸೋಯದಂತೆ ಗಿಡದ ಹಣ್ಣು ಸೇರಬೇಕು ಬಾಯಿ || ೨ ||
ಗುಡ್ಡವನು ಹತ್ತಲಿಕ್ಕೆ ಕೆಳಗಿನಿಂದ ಕಾಯಿ |
ಮತ್ತೆ ಇಳಿದು ಕೆಳಗೆ ಬರಲು ಕಾಯಿ ಹಣ್ಣುಗಾಯಿ || ೩ ||
ಅಡಿಗೆ ಮಾಡಿ ಉಣ್ಣಲೆಂದು ಒಲೆಯ ಮೇಲೆ ಕಾಯಿ
ತುಮುಲ ತುಡಿತ ಒಳಗಿದ್ದರು ಆಶೆಗಿಲ್ಲ ಬಾಯಿ || ೪ ||
ಒಡನೆ ಜೋಡಿ ಹೆಣ್ಣು ಬರುವವರೆಗೆ ಎಲ್ಲ ತಾಯಿ
ಅಮರ ಭಾವ ತುಂಬಿದ್ದರು ಆಕಾಂಕ್ಷೆಯೆ ಸೈಯಿ || ೫ ||
ವೃಕ್ಷವಾಗಿ ಬೀಜ ಮೇಲೆ ಏಳಲಿಕ್ಕೆ ಕಾಯಿ
ನಕ್ಷತ್ರವು ಕೆಳಗೆ ಬೀಳೆ ಸುಮ್ಮನೇನು ನೋಯಿ || ೬ ||
ಭೂಮಿ ನೀರು ಗಾಳಿ ಬೆಂಕಿ ಕಾಯುತಿಹವು ಕಾಯಿ
ಕಾಯಲೆಂದು ನಿನ್ನ ಎಲ್ಲ ಕಾಯುತಿಹವು ಕಾಯಿ || ೭ ||
ಕಾಯ್ದು ಕಾಯಿ ಹಣ್ಣಾಗಲು ಕಾಯಬೇಕು ಕಾಯಿ
ಆಯ್ದು ಬುಟ್ಟಿ ಸೇರಲಿಕ್ಕೆ ಕಾಲಕಾಗಿ ಕಾಯಿ || ೮ ||
*****