ಪ್ರಿಯ ಸಖಿ,
ಮನುಷ್ಯನ ಬದುಕಿನಲ್ಲಿ ಯಾವುದು ನಿತ್ಯ ಹಸಿರಾಗಿರುತ್ತದೆ? ಮತ್ತೆ ಯಾವುದು ಬೇಗ ಬಾಡಿಹೋಗುತ್ತದೆ? ನಿನಗೆ ಗೊತ್ತೇ? ಚಿಂತಕ ಮುಸೋಲಿನಿ ಹೀಗೆ
ಹೇಳುತ್ತಾನೆ.
Beauty, Strength, Youth
are flowers but,
fading soon
duty, faith, love
are roots and
evergreen
ಸೌಂದರ್ಯ, ಶಕ್ತಿ ಮತ್ತು ಯೌವ್ವನ ಹೂವುಗಳಿದ್ದಂತೆ, ಆದರೆ ಬೇಗ ಬಾಡಿ ಹೋಗುತ್ತವೆ. ಕರ್ತವ್ಯ, ನಂಬಿಕೆ, ಶ್ರದ್ಧೆ, ಪ್ರೀತಿ ಬೇರುಗಳಿದ್ದಂತೆ. ಅವು ನಿತ್ಯ ಹಸಿರಾಗಿರುತ್ತವೆ.
ದಿನಕಳೆದಂತೆ ಕಳೆಗುಂದುವ ಅಲ್ಪಾಯುವಾದ ಸೌಂದರ್ಯ ಶಕ್ತಿ ಮತ್ತು ಯೌವನವನ್ನು ವೃದ್ಧಿಗೊಳಿಸುವತ್ತ ನಮ್ಮ ಗಮನವನ್ನು ಕೇಂದ್ರೀಕರಿಸಿದರೆ ಅದರಿಂದ ಪ್ರಯೋಜನವೇನೂ ಇಲ್ಲ. ಅದು ಸಮಯ ಕಳೆದಂತೆ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ ಆದರೆ ಕರ್ತವ್ಯ, ಶ್ರದ್ಧೆ, ಪ್ರೀತಿ ಎಂಬ ಬೇರುಗಳನ್ನು ಗಟ್ಟಿಗೊಳಿಸುತ್ತಾ ಸಾಗಿದರೆ ಅದರಿಂದ ಬದುಕು ಸುಂದರವಾಗುತ್ತದೆ. ಜೊತೆಗೆ ಶಾಶ್ವತ ಆಂತರಿಕ ಬೆಳವಣಿಗೆಯೂ ಸಾಧ್ಯವಾಗುತ್ತದೆ. ತನ್ನ ಕರ್ತವ್ಯ, ಶ್ರದ್ಧೆ ಮತ್ತು ಪ್ರೀತಿಯಲ್ಲಿ ವಿಶ್ವಾಸವಿರಿಸಿರುವ ವ್ಯಕ್ತಿ ಸದಾ ಗೆಲ್ಲುತ್ತಲೇ ಹೋಗುತ್ತಾನೆ. ಅವನಿಗೆ ಸೋಲೆಂಬುದೇ ಇಲ್ಲ. ನಿಜವಾದ ಬದುಕಿನ ಮರ್ಮ ಅಡಗಿರುವುದೂ ಕ್ಷಣಿಕ. ಬಾಡಿಹೋಗುವ ಸೌಂದರ್ಯ, ಶಕ್ತಿ, ಯೌವನದಲ್ಲಿ ಅಲ್ಲ. ಇದನ್ನೂ ಮೀರಿ ಬದುಕಿನಲ್ಲಿ ಅನೇಕ ಮೌಲಿಕ ವಿಚಾರಗಳಿವೆ. ಅವುಗಳ ಅಳವಡಿಕೆಯಿಂದ ಮಾತ್ರ ನಾವು ಪರಿಪೂರ್ಣ ಮಾನವರಾಗಲು ಸಾಧ್ಯ ಎನ್ನುವುದನ್ನು ಅರಿತ ವ್ಯಕ್ತಿಯೇ ನಿಜಕ್ಕೂ ಧನ್ಯ. ಅಲ್ಲವೇ ಸಖಿ?
*****