ಅಮ್ಮನಿಗಿಂತಾ ದೇವರು ಇಲ್ಲ
ಅಪ್ಪನಿಗಿಂತಾ ದೊಡ್ಡೋರಿಲ್ಲ
ಟೀಚರ್‌ಗಿಂತಾ ಒಳ್ಳೇವ್ರಿಲ್ಲ ಅಲ್ವೇನೇಮ್ಮಾ?
ನಾವು ಒಳ್ಳೇವ್ರಾಗ್ಲಿ ಅಂತ
ವಿದ್ಯೆ ಬುದ್ದಿ ಬರ್‍ಲಿ ಅಂತ
ಎಷ್ಟೊಂದ್ ಕಷ್ಟ ಪಡ್ತಾರಲ್ವೇ ಅಪ್ಪ ಅಮ್ಮ?
ಬೆಳಿಗ್ಗೆ ಬೇಗ ಎದ್ಬಿಟ್ಟು
ಪಾಠ ಎಲ್ಲಾ ಒದ್ಬಿಟ್ಟು
ದಿನಾ ಸ್ಕೂಲಿಗ್ ಹೋಗೋಣಾಪ್ಪ ಸರಿಯಾದ್ ಹೊತ್ತಿಗೆ.
ವಿದ್ಯೆ ಕಲ್ತು ದೊಡ್ಡೋರಾಗಿ
ಅಪ್ಪ ಅಮ್ಮಂಗ್ ತಕ್ಕೋರಾಗಿ
ಒಳ್ಳೇ ಹೆಸರು ತರೋಣಾಪ್ಪ ಮನೆಗೆ ಸ್ಕೂಲಿಗೆ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.