ಬಾಡದ ಹೂವು

ಅರಳುತಿಹ ಮೊಗ್ಗೊಂದು ಅರಳದೆಯೆ ಉರುಳಿದುದು
ಕಣ್ಣೀರನಿಡುತಿಹಳು ಹಡೆದ ತಾಯಿ
ಕಾಲನಾಟವೊ ಇಲ್ಲ ಕರುಬು ಕೂರಸಿ ಕೃತಿಯೊ
ಎಳೆಹೂವಿನಾತ್ಮವನು ಅಳಿಸಿದುದು ಇಂತು?

ಸುತ್ತ ಮುತ್ತಿಹ ಕ್ರೌರ್ಯಕಾನನದ ದಟ್ಟದಲಿ
ಶತ್ರುಗಳು ಮೆಟ್ಟುತಿರಲದನು ಕೆಳಗೆ
ಎತ್ತಿಮೇಲಕೆ ಮೊಗವ ಸುತ್ತ ಕಂಪನು ಬೀರಿ
ಜಗವ ತಣಿಯಿಸುವಾಸೆ ತುಂಬಿಬಂದಿರಲು

ನೆತ್ತಿ ಮೇಲೆತ್ತಿತ್ತು.  ಮೊಗ್ಗು ಅರಳುತಲಿತ್ತು,
ಹಿಗ್ಗಿನಲಿ ಸುತ್ತೆಲ್ಲ ನೋಡುತಿತ್ತು.   ೧೦
ಎನಿತೆನಿತೊ ದುಗುಡಗಳ ನಡುವೆ ಸುಖವನು ತರುವೆ
ಜಗಕೆ ಶಾಂತಿಯನೀವೆ ಎಂದು ಕುಣಿದಿತ್ತು.

ಮೃದುತೆ ದಳಗಳು ತೆರೆದು ಹೃದಯದಲಿ ಹುದುಗಿರುವ
ಸೌಂದರ್ಯ ಕಂಪುಗಳ ರಾಸಿ ತೋರಿ
ಕಿಲಕಿಲನೆ ನಗುನಗುತ ವಿಶ್ವಕಾನಂದವನು
ಒಯ್ಯಲಿಕೆ ಪವನನಿಗೆ ವೀಳ್ಯ ಕೊಡುತಿಹುವು.

ಮನಸಿನಲಿ ಮೂಡಿದ್ದ ಕನಸ ನನಸಾಗಿಸಲು
ಅನುದಿನವು ಯತ್ನಿಸಿರೆ-ಮೃತ್ಯುಬಂತು!
ಕನಸು ಕನಲಿಯೆಹೋಯ್ತು, ನನಸು ನಲುಗಿಯೆ ಹೋಯ್ತು
ಕಲಕಿಹೋಯಿತು ಶಾಂತಕೊಳದ ಪನ್ನೀರು!   ೨೦

ಅಷ್ಟರಲೆ ಬಂದೆರಗಿ ಮೃತ್ಯು ಮುತ್ತಿತು ಅದನು
ಸೊಕ್ಕಿನಲಿ ಕೊಂಡೊಯ್ದು ಹಿಸುಕಿ ಹಿಂಡೆ
ಉಪವನದ ಬಳ್ಳಿಗಳು ಕೊರಗಿನಲಿ ದೂಡಿದುವು
ಕರುಣೆಯಿಲ್ಲವೆ ಅದಕೆ?  ಅಂದವಿಧಿಯಾಳು!

“ಎಮ್ಮೊಡನೆ ಒಡನಾಡಿ ಕುಣಿದಾಡಿ ಕೆಲೆದಾಡಿ
ಹರಸಿದುದು ಹೊನಲಾಗಿ ಹೊಸತು ಕಂಪು
ನಿನಗೇನನೆಸಗಿತದು?  ಎಳೆಯ ಕಂದನನಿಂತು
ಮಸಣಕೊಯ್ವುದು ನಿನಗೆ ತರವಹುದೆ ವಿಧಿಯೆ?”

ಅವನಿಗಾಗಳುತಿರುವೆ! ಎನ್ನಾತ್ಮದಾನಂದ
ಮಡಿದವನ ಮುಡಿಯೊಡನೆ ಜಡವಾಯಿತು!   ೩೦
ವಿಶ್ವವನು ಕುಣಿಸಿದ್ದ ವಿಶ್ವಪ್ರೇಮಿಯು ಆತ
ಎನ್ನೆದೆಯ ಬೆಳಕಿಂದು ನಂದಿತವನೊಡನೆ!

ಅವನ ನುಡಿ ಮೊಳಗಿತ್ತು ಮೋಡದಲಿ.  ಮಿಂಚಿತ್ತು
ಮುಗುದೆಯರ ಮುಗುಳಿನಲಿ.  ಕಾಡು ನಾಡು
ಅವನ ವಾಣಿಯ ಗೀತ ಕೇಳೀ ಕುಣಿಯುತಲಿತ್ತು
ಇಂದೆಲ್ಲ ಮೌನದಲಿ ಮರುಗುತಿವೆ ಅವಗೆ!

ನೋಡಲ್ಲಿ ಬಾಲರವಿ ಕೆಂಪುಕಾವಿಯನುಟ್ಟು
ಸಂನ್ಯಾಸಕೊಂಡಿಹನು.  ಅವನ ಹೃದಯ
ರಕ್ತ ಕುದಿಯುತಲಿಹುದು.  ಸತ್ತ ತನ್ನಾತ್ಮಪ್ರಿಯ
ಪುತ್ರನೆಂದವನ ಮುಖ ಮಂಜು ಮುಸುಕಿಹುದು!   ೪೦

ಕೊಳಲಿನೊಳದನಿಯಿಲ್ಲ.  ಬರಿಕೊಳವೆಯಾಗಿಹುದು!
ಅಳಲಿನಲಿ ಅದರುಸಿರು ಉಡುಗಿಹೋಯ್ತು!
ತನಗುಸಿರ ಕೂಡಿಸುತ ಆತ್ಮದಾನಂದವನು
ಹೊರಚೆಲ್ದ ಕವಿಗಾಗಿ ಕೊರಗಿ ಕಾದಿಹುದು.

“ವಿಶ್ವ ಬಹುವಿಸ್ತಾರ, ಆದರೆನಗೆಡೆಯಿಲ್ಲ!
ಆರಿಗೊರೆಯಲಿ ಎನ್ನ ಎದೆಯ ದುಗುಡ?
ನೋವಿನಲಿ ಕುಲುಮೆಯಲಿ ಬೇಯುತಿದೆ ಎನ್ನೆದೆಯು
ಬಂಜೆಯಾದೆನೆ ಮತ್ತೆ” ಎನ್ನುತಿದೆ ನಾಡು.

“ಆತನಿರ್ದಾಗವನ ಮಾತುಗಳ ಮಾಧುರ್ಯ
ಪೂತಗೊಳಿಸುತಲಿತ್ತು ವಿಶ್ವದೆದೆಯ.   ೫೦
ಆತನಿಲ್ಲದೆ ಇಂದು ವಿಶ್ವ ತಬ್ಬಲಿಯಾಯ್ತು
ಆರೆಡೆಗೆ ಸಾಗುವುದೊ ಅಳಲ ತೋಡಲಿಕೆ?

ಜನಿಸಿದುದು ಬಡತನದಿ ಬೆಳೆದ ಬಲುಕಷ್ಟದಲಿ
ಬೇಡಲಿಲ್ಲವು ಅವನು ಭಾಗ್ಯಗಳನು!
ಇದ್ದುದಷ್ಟೇ ಸಾಕು ಇಷ್ಟಾರ್ಥ ಸಲ್ಲಿಸಲು
ಹೆಚ್ಚೇಕೆ ಬಯಸುವುದು ಎಂದು ಬೆಳೆದವನು!

ರೂಪ ಬಹಳೇನಿಲ್ಲ.  ಕುರುಳುಕೂದಲು ಇಲ್ಲ!
ಚೆಲ್ಲಾಟ ನಗುವಾಟ ಬಹಳವಿಲ್ಲ!
ತೊಟ್ಟಿಲಲಿ ಮೌನದಲಿ ಕಣ್ಮುಚ್ಚಿ ಮಲಗಿರಲು
ಹೃದಯದಲಿ ಹುದುಗುತಲಿ ಬೆಳಗುತಿದ್ದಾತ್ಮ   ೬೦

ಆಗಸದ ತಾರೆಯೊಲು ಪ್ರಭೆಯ ಬೀರುತಲಿತ್ತು.
ಬೇರಾವ ಹೊರರೂಪ ಕಾಂತಿ ಇಲ್ಲ!
ಉಳಿದ ಕೂಸುಗಳಂತೆ ಒರಲಾಟ ಚೀರಾಟ
ತೋರುತಿರಲಿಲ್ಲವನು.  ಹಿರಿಯ ವೇದಾಂತಿ!

‘ಮಂಕುಮಡ್ಡಿಯು ಅವನು’ ಎಂದೆಲ್ಲ ಅನ್ನುವರು
ಆದರದ ನುಡಿಯವನಿಗರಿವೆ ಇಲ್ಲ
ದೂಡಿದ್ದರಾತನನು ಮಡೆಯನೆಂದೊಂದೆಡೆಗೆ
ಅದುವೆ ಆತನಿಗಾಯ್ತು ಸಗ್ಗದರಮನೆಯು!

ಜಗಕಾತ ಏಕಾಕಿ!  ಕಣಸಿನಲಿ ಬಲುಮಂದಿ
ಕೆಳೆಯರನು ವಿಶ್ವಗಳ ಕೂಡಿಸುತಲಿ   ೭೦
ಕುಣಿಸುತಲಿ ಕುಣಿಯುತಲಿ ಕಲಿತು ಬಾಳಿನ ಗೀತ
ಹೃದಯದಲೆ ಹಾಡುವನು ಹಿಗ್ಗಿ ಹೊಸತಾಗಿ!

ಒಮ್ಮೊಮ್ಮೆ ಬೆಳಗಿನಲಿ ಮೋಡ ಮುಸುಕಿದ ಮಲೆಯ
ಮೇಲ್ಮುಸುಕ ನೋಡುತಲಿ ಮೈಮರೆಯುತ
ಮನಸಿನಲಿ ಬಲುಬಗೆಯ ಸೌಂದರ್ಯ ಸೃಷ್ಟಿಸುತ
ಹೊಸಜಗವ ಸೇರುವನು ಕುಣಿಯುವನು ಅಲ್ಲಿ!

ಪ್ರಕೃತಿ ಮಾತೆಯ ತೊಡೆಯ ಮೇಲೆ ಮಲಗಿದ ಕಂದ
ಎದೆಹಾಲನೀಂಟಿದನು ತೊರೆಗಳಿಂದ
ಉಣಿಸೆಲ್ಲ ಸೃಷ್ಟಿಸೊಗ ಉಡಿಗೆ ಸೃಷ್ಟಿಯು ನೇಯ್ದ
ಸೌಂದರ್ಯ ಶೃಂಗಾರ ಬಾನ್ಮುಗಿಲಿನುಡುಪು!   ೮೦

ಇಂತೆ ಬೆಳೆದವನವನು ಪ್ರಕೃತಿಮಾತೆಯ ಮಡಿಲ
ಮಣಿಯಾಗಿ, ಜಗಕೆಲ್ಲ ಮೌನಿಯಾಗಿ.
ಅರಿಯಲಾರದೆ ಅವನ ಅರಿವಿನಾಳವ ಜಗವು
ವಿಷದಬೇವನು ಬಿತ್ತಿ ಬೆಳೆಯಿಸಿತು ದಿನವು.

ಬೆಳೆದಂತೆ ಬೆಳೆದಿತ್ತು ವಿಶ್ವಬಿತ್ತಿದ ಬೇವು
ನೋವು ಬಂದವನಾತ್ಮ ಮುತ್ತಿ ಕುಕ್ಕಿ
ಕಾವರಾರಿಲ್ಲೆಂದು ಕಾಡಿತವನಾತ್ಮವನು
ಕಾಡುಪಾಲಗಿಸುವೆ ಹೂವನಿದನೆಂದು.

ಆದರೂ ಹೃದಯದಲಿ ಬೆಳಗುತಿದ್ದಿತು ಬೆಳಕು.
ನೋವೆಲ್ಲ ಕಾವೆಂದು ಕಾವೆನೆಂದು   ೯೦
ಬರಮಾಡಿ ಬರಸೆಳೆದು ಅಪ್ಪಿಕೊಂಡನು ಅದನು
ನೋವೆ ಆತನ ಜೀವಗೆಳತಿಯಂತಾಯ್ತು!

ಬೇರೇನು ಇರಲಿಲ್ಲ.  ಭಂಗಾರವಿರಲಿಲ್ಲ.
ಬಡತನವೆ ಅವನೊಡವೆ-ಅದುವೆ ಎಲ್ಲ!
ಇರ್ದುದವನಿಗೆ ಒಂದೆ, ವಿಶ್ವವನೆ ಪ್ರೇಮಿಸುವ
ವಿಸ್ತಾರ ಹೃದಯದಲಿ ಕರುಣೆ ತುಂಬಿತ್ತು.

ವಿಶ್ವವನ್ನಾವರಿಸಿ ತುಳಿಯುತಿಹ ಕತ್ತಲೆಯ
ತೊಲಗಿಸುತ ಜಗಕೆಲ್ಲ ಬೆಳಕನಿತ್ತು
ಜೀವಜೀವಕೆ ಪ್ರೇಮಬಳ್ಳಿಯನು ಹಬ್ಬಿಸುತ
ಶಾಂತಿಯನು ಹರಹುವೆನು ಎಂಬ ಬಯಕೆಯಲಿ   ೧೦೦

ಹೊರಹೊರಟ ತನ್ನೆಲ್ಲ ಸುಖವ ತ್ಯಜಿಸುತಲಾತ
ಬಲಿಕೊಟ್ಟ ತನ್ನಾತ್ಮ ಜಗದ ಸುಖಕೆ
ಮಾನವನು ಮೇಲ್ಮೆಗಾಗೆಲ್ಲವನು ವರ್ಜಿಸಿದ
ತನಗಾಗಿ ತಾನಿಲ್ಲ ಉಳಿದರಿಗೆ ಎನುತ!

ಕತ್ತಿಮಸೆದರು ಕೆಲರು.  ಕುತ್ತಿಗೆಗೆ ನೇಣೆಸೆದು
ಕೊಚ್ಚಲಿಕೆ ಬಂದವರು ಮತ್ತೆ ಕೆಲರು!
ಎತ್ತೆತ್ತ ನೋಡಿದರು ಆರಿಗಾಗವನೆಲ್ಲ
ಬಲಿಯಿತ್ತನೋ ಅವರೆ ಬಂದು ಬಡಿಯುವರು!

ಪ್ರಗತಿಯೊಳಗಡಿಯಿಟ್ಟ ಮಾನವನ ಜೀವನವು,
ಬೆಂಕಿಯಲಿ ಮೀಯುತಲಿ ಹೊರಗೆ ಬಂದು   ೧೧೦
ಎಚ್ಚತ್ತ ಕಾಂತಿಯಲಿ ಕಿರಣವನು ಹೊರಚೆಲ್ಲಿ
ರವಿಯನೇ ನಾಚಿಸುತ ಜಗವ ಬೆಳಗಿಪುದು.

ಅಂತೆ ಅವನಿರವಾಯ್ತು.  ಎದುರಾಳಿಗಳನೆಲ್ಲ
ಎದುರಿಸಿದ.  ಎದೆತುಂಬ ವಿಶ್ವಪ್ರೇಮ!
ಬಲವನಿಮ್ಮಡಿಸಿತ್ತು, ಒಲವಿನಲಿ ಗೆದ್ದನವ
ಎಲ್ಲರನು ತಣಿಯಿಸಿದ ಪ್ರೇಮ ವರ್ಷದಲಿ!

ಎಡರುಗಳು ಎನಿತೆನಿತೊ ಅಲೆಮೇಲೆ ಅಲೆಯಂತೆ
ಮರುಳು ಮಾಡಲಿಕೆಂದು ಮುತ್ತುತಿರಲು
ಒತ್ತರಿಸಿ ಅವುಗಳನು ಕಾವ್ಯವನು ಮೇಲೆತ್ತಿ
ಕನ್ನಡಕೆ ಜೀವವನು ತುಂಬಿ ನಿಲ್ಲಿಸಿದ!   ೧೨೦

ಮುಸುಕುತಿಹ ಮಂಜನ್ನು ಮರ್ದಿಸುತ ಮೇಲೇರಿ
ಜಗಕೆಲ್ಲ ಜವ್ವನವ ಹಂಚುತಿರುವ
ರವಿಯಂತೆ ಅವನಾಗಿ ಬಂದ ಮುಳ್ಕಂಟಿಗಳ,
ಮುರಿದೆಸೆದು ಕ್ಷಣವೊಂದು ಕ್ಷಣದಿ ಮುಂಬಂದ!

ಅಂಥ ಎನ್ನೊಡಲಮಣಿ ಇಂದು ಇಲ್ಲದೆ ಹೋದ
ಬಂಜೆಯಾದೆನೆ ಅವನ ಹೆತ್ತ ನಾನು?
ಅಂತಹರ ಮತ್ತೊಮ್ಮೆ ಹಡೆಯುವೆನೆ ಪಡೆಯುವೆನೆ?
ನಿರ್ಭಾಗ್ಯೆ!  ಕೊರಗೆನ್ನ ಕರುಳಕೊರೆಯುತಿದೆ!

ಸಂಜೆಯಾಗಸದಲ್ಲಿ ರಂಜಿಸುತ ಚಣಕಾಲ
ಜಗಕೆಲ್ಲ ಸಿಂಗರದ ಊಟವಿಕ್ಕಿ   ೧೩೦
ಕುಣಿಕುಣಿದು ಆನಂದದೆಲರ ಹೊರಕಳುಹುತಲಿ
ವಿಶ್ವವೆಲ್ಲವ ಕಂಪಿನಲ್ಲಿ ಮುಳುಗಿಸಿದ

ಹೊಳೆವ ಮಲ್ಲಿಗೆ ಮೋಡ ಮರುಚಣವೆ ಕತ್ತಲಲಿ
ಮುಗಿಲಿನಲಿ ಮಾಯವಾಗುವ ತೆರದಲಿ
ನಾಡನೆಲ್ಲವ ತನ್ನ ಪುಂಗಿಯಾ ಗುಂಗಿನಲಿ
ಮೈಮರೆಸಿ ಕುಣಿಸಿದವ ಮರೆಯಾದನಿಂದು!

ಸೋದರಿಯರೆನಿತಿಹರು, ಆದರದಲೆನ್ನೊಡಲ
ಬಾಧೆಯನು ತಗ್ಗಿಸಲು ಆಪರೇನು?
ಕಲ್ಗುಡ್ಡಗಳು ಕೂಡ ಕೊರಗಿನಲಿ ಮರುಗುತಲಿ
ಮೌನದಲಿ ಮುದುಡಿಹುವು.  ಮಾಳ್ಪುದೇನಿನ್ನು?   ೧೪೦

ನುಡಿಗಳಲಿ ಎನ್ನಳಲ ಪೇಳೆಂತೋ ಅರಿಯೆ
ಒಡಲ ಕಡಲಿನ ಮೊರೆತ ತಡೆಯಲಾರೆ.
ಉಕ್ಕುಕ್ಕಿ ಮೇಲೇರಿ ಬಿಕ್ಕುತಿದೆ ಕೊರಗಿನಲೆ
ಕೂಡುತಿದೆ ಮೇಲೆಸೆದ ಕೊರೆನೊರೆಯ ಪರಿಸೆ!

ಕನ್ನಡದ ನಾಡಿಂತು ಕೊರಗಿ ಸೊರಗುತಲಿಹುದು
ಕಳೆದ ತನ್ನಯ ಎಳೆಯ ಕೂಸಿಗಾಗಿ
ಮೇಲ್ಮುಸುಕು ಬಿದ್ದಿಹುದು ಮುಖವ ಮರೆಮಾಡಿಹುದು.
ಕಣ್ಣೀರು ತೊಟ್ಟಿಕ್ಕಿ ಕಾವೇರಿಯಾಗೆ!

“ಒಂದಿರುಳು ಒಂದುದಿನ ಜೀವನದ ಮಿತಿಯಾಯ್ತು
ಪ್ರೇಮದಲೆ ಅದನೆಲ್ಲ ಕಳೆದೆವಾವು   ೧೫೦
ಮುಂದೆ ಪಯಣವ ಬೆಳೆಸಿ ಇಂದೆನ್ನ ಮರೆತಿರುವೆ
ಎದೆಯಿಂದು ಮಿದಿಮಿದಿದು ಕುದಿಯುತಿದೆ ರಕ್ತ!

ನೀನು ಆಡಿದ ಆಟ, ನೀನು ಮಾಡಿದ ಮಾಟ
ನೀನು ನಕ್ಕಾ ನಗೆಯು ಮರುಳುಗೊಳಿಸಿ
ಬಳಿಗೆ ಸೆಳೆಯಿತು ಎನ್ನ!  ನಿನ್ನ ಆಲಿಂಗನದಿ
ಭ್ರಾಂತಿಗೊಳಿಸಿತು ಎನ್ನ, ಮೈಮರೆತೆ ನಾನು!

ವಿಶ್ವಪ್ರೇಮದ ಹೂವ ಮುಡಿಸುತೆನ್ನಯ ಜಡೆಗೆ,
ಕಂಗಳಿಗೆ ತಾರೆಗಳ ಬೆಳಕನಿತ್ತೆ.
ಸತ್ಯ ಸೌಂದರ್ಯಗಳ ಜರತಾರಿ ಉಡಿಗೆಗಳ
ನಿತ್ಯತೆಯ ಯೌವನದ ಬಾಸಿಂಗವಿತ್ತೆ.   ೧೬೦

ವೀಣೆಯಿಂಚರವೆನ್ನ ನುಡಿಯ ಬಾಳುವೆಯಾಯ್ತು
ಮೋಡಗಳ ಹೊನ್ನಂಚೆ ವಾಹನವಿರೆ
ಮನಸೆಳೆವ ಮುಗುದೆಯರ ಮುಗುಳುನಗೆ ದೃಷ್ಟಿಯೆನೆ
ಉಪವನದ ಹೊಸ ಕಂಪೆ ಎನ್ನ ಉಸಿರಾಯ್ತು.

ಮೋಡದಲಿ, ಮಿಂಚಿನಲಿ, ಕಾಡಿನಲಿ, ನಾಡಿನಲಿ
ತೊರೆಗಳಲಿ, ಕರೆಗಳಲಿ, ತೆಂಗು ಕಂಗು
ತರುಗಳಲಿ, ಬಳ್ಳಿಯಲಿ, ಮೃಗಗಳಲಿ ಖಗಗಳಲಿ
ಪ್ರೇಮವನು ಕಂಡೆನ್ನ ಮಡಿಲ ತುಂಬಿಸಿದೆ.

ಎಳಹರೆಯದಲಿ ಹೂವು ಮೊಗೆಮೊಗೆದು ಹೊರಚೆಲ್ಲಿ
ಹಾಯಾಗಿ ಕಂಪನ್ನು ಹರಡುವಂತೆ   ೧೭೦
ನಿನ್ನಾತ್ಮ ಪ್ರೇಮವನು ಮೊಗೆಮೊಗೆದು ಹರಹಿತ್ತು
ಜಗಕೆಲ್ಲ ಸಂದೇಶ ಪ್ರೇಮತಂದಿತ್ತು.

ಅಂದು ಹಿಂದಿನ ಅರಿವು, ಮುಂದಕೇನಿಹುದೆಂಬ
ಚಿಂತೆ ಬರಲಿಲ್ಲೆನಗೆ-ಅಂದೆ ಸುಖವು!
ಇಂದು ಪ್ರೇಮಾಶ್ರುಗಳ ಜ್ವಾಲೆ ತಗ್ಗಿಪರಿಲ್ಲ
ಹರಿಯುತಿದೆ ಎನ್ನೊಲವು ಕೇಳ್ವವರೆ ಇಲ್ಲ!

ಎನಗೆಲ್ಲ ತುಂಬಿಸಿದೆ.  ಪುಷ್ಪಗಳ ರಸವನ್ನು
ಹೀರಿ ಹೆರರಿಗೆ ಹೊತ್ತು, ಜೀವ ತೆತ್ತು
ಜೇನು ಮರೆಯಾಗುವೊಲು ಮರೆಯಾದೆ ಜಗದಿಂದ
ಮತ್ತಾರು ಉಳಿದಿಹರು ನಿನ್ನ ಸರಿಸಮರು?”   ೧೮೦

ಇಂತು ಎದೆಯೊಡೆವಂತೆ ಕಾವ್ಯಕನ್ನಿಕೆ ಕುಳಿತು
ಕಳೆದ ನಲ್ಲನಿಗಾಗಿ ಅಳುತಲಿಹಳು.
ಗಿಡಗಳಲಿ ನಡುನಡುವೆ ಸುಳಿಯುತಿಹ ಮೆಲ್ಲೆಲರು
ಮಾರ್ದನಿಯ ಕೊಡುತಲಿದೆ-ಸುಂಯ್ಗುಡುತಲಿಹುದು!

“ಸುಖದುಃಖ ಬೆಂಬತ್ತಿ ಬೆಳಕು ಕತ್ತಲೆಯಂತೆ
ಬಾಳನೆಲ್ಲವ ಮುಸುಕಿ ಹಿಸುಕುತಿಹುವು.
ಸುಖ ಮೂಡುವುದರಲ್ಲೆ ದುಃಖ ದೂಡುವುದದನು
ಜೀವ ಬರಿ ಸೆಣಸಾಟ ಸುಖದುಃಖಗಳಿಗೆ!

ನಾಲ್ಕು ದಿನಗಳ ಜೀವ.  ಒಂದುಚಣ ಸುಖನಾದ
ಮರುಚಣವೆ ತಂತಿಯದು ಚೂರುಚೂರು!   ೧೯೦
ಕರ್ಕಶದ ದನಿಹೊರಟು ಕಿವಿಗಳನು ಕಿವಿಚುವುದು
ತಾಳುವುದೆ ಬಾಳುವುದು ಎಂದರಿತನವನು!

ಎಮ್ಮೊಳಗೆ ಬಲುಜ್ಞಾನಿ, ಮೌನದಲಿ ಮಾತಿನಲಿ
ಮಾಧುರ್ಯಮುತ್ತುಗಳ ಬಿತ್ತಿಬಿತ್ತಿ
ಎದೆಯೊಳಗೆ ಆನಂದಸುಗ್ಗಿಯಾಗಿಸುತಿರ್ದ
ಉಳುವರಿಲ್ಲದೆ ಇಂದು ನೆಲವು ಬರಡಾಯ್ತು!”

ಕಾವ್ಯಸೋದರರಿಂತು ಕೊರಗುತಿಹರವಗಾಗಿ
“ಹೋದನೇ ಹಕ್ಕಿಯೊಲು ಹಾಡಿದಾತ!
ವಿಶ್ವಕೆಲವ ಪ್ರೇಮ ಕಲಿಸಿದವನೇ ವಿಷಮ
ಜ್ವಾಲೆಯಲಿ ಬಿದ್ದಿಂದು ಬೂದಿಯಾಗಿಹನೆ?”   ೨೦೦

ಜೀವದಿಂದಿರ್ವವನ ‘ಹುಚ್ಚ! ಹುರುಳಿಲ್ಲದವ!’
ಎಂದೆಲ್ಲ ಹಳಿದಿರ್ದರವನ ಜನರು
ಹಾಡಲೆತ್ತಿದ ಕೊರಳ ನುಡಿಯನೇಣಲಿ ಬಿಗಿದು
ಕೊಲೆಮಾಡೆ ಯತ್ನಿಸಿದವರನ ಜತೆಯವರು!

ಉಸಿರು ಹೊರಡಲು ಎಡೆಯನಿನಿತಾದರೂ ಬಿಡದೆ
ಬಯಕೆಯನು ಬಸಿರಿನಲೆ ಬಡಿದು ಕೊಂದು
ಸಾವ ದವಡೆಗೆನೂಕಿ “ಕೃತಕಾರ್ಯ” ರಾಗುತಲಿ
ತಲೆದೂಗಿ ಹಿಗ್ಗಿದರು ಒಡಲ ಕಿಚ್ಚಿನಲಿ!

ಇಂದವನ ನುಡಿಯಡಗಿ ಉಸಿರು ನಿದ್ರಿಸುತಿರಲು
ಹೂಮಾಲೆ ತರುತಿಹರು ಶವದ ಬಳಿಗೆ   ೨೧೦
ಹಾವಹೆಡೆ ತೋರುತಲಿ ಸಾವಿನಲಿ ದೂಡಿದರು
ಹೀನತೆಯ ದಾನವರು!  ಮಾನವರೆ ಅವರು?

ಅವನು ಹಾಡಿದ ಹಾಡು ಅರಿಯದೆಯೆ ಕುಹಕದಲಿ
ಕೂಗನೆಬ್ಬಿಸಿ ಕಿರಿಚಿ ಕರುಳ ಕೊಯ್ದು
-ನಿಲ್ಲಲಿಕು ನೆರಳಿಲ್ಲ! – ಇರವಿಗೇ ಬರಬಂತು! –
ಸಾವನಪ್ಪುವವರೆಗು ಬಿಡಲೆ ಇಲ್ಲವರು!

ಇಂದವನ ಒಲುಮೆಯಲಿ ಬಲುಮೆ ಕಾಣುತಲಿಹರು
ಅಂದು ಮುಚ್ಚಿದ ಮಂಜು ಮಾಯವಾಗಿ
ನಂಜುಹೃದಯವು ಇಂದು ನಲ್ಮೆನವಿಲಾಗಿಹುದು
ಕಣ್ಣೀರು ಕರೆಯುತಲಿ ಬರುತಲಿಹರವರು!   ೨೨೦

ಸುಖದುಃಖ ಬಿಸಿಲುಮಳೆ ಕೈಗೆ ಕೈ ಕೂಡಿಸುತ
ವಿಶ್ವವನು ಮುಚ್ಚಿರಲು ಆತಮಾತ್ರ
ಬಾಳಬಾನಲಿ ಮೂಡಿ ಹೊಳೆಯುತಿಹ ಕಾಮಧನು
ಕಂಡು ಆನಂದದಲಿ ಕುಣಿದು ನಲಿದಿರ್ದ

ಬಾಳಿನಿಂದೇನನೂ ಬಯಸಲಿಲ್ಲವು ಆತ
ಬಂದುದೆಲ್ಲವ ಬಳಿಗೆ ಕರೆದ ಮಾತ್ರ!
ಸುಖದಸಿರಿ ದುಃಖದರಿ ಎಲ್ಲ ಸಮವಾಗಿತ್ತು
ಪ್ರೇಮವನು ಬೆಳಗಿಸುವ ಸಾಲುದೀಪಗಳು!

*   *   *

ಸತ್ತನೆಂದೆನಬೇಡಿ. ಸತ್ತಿಲ್ಲ.  ಬದುಕಿರುವ.
ಸತ್ತನೆನ್ನುವ ಸೊಲ್ಲು ಬೇಡ!  ಬೇಡ!   ೨೩೦
ಸಾವಿನಲು ಜೀವವಿದೆ!  ಜೀವದೊಳಗಿಲ್ಲದುದು
ಸಾವಿನಲಿ ಜೀವಿಸಿದೆ!  ಕಣ್ಣೀರ ನಿಲಿಸಿ!

ಹೂವು ಬಾಡಿದರದರ ಕಂಪು ಬಾಡುವುದೇನು?
ಗೀತಮುಗಿದರೆ ಅದರ ಇಂಪು ಹೋಯ್ತೆ?
ಕತ್ತುರಿಯು ಇಲ್ಲದಿರೆ ಗಂಧ ಇಲ್ಲದೆಹೋಯ್ತೆ
ಹೊರದೇಹ ಸಾಗಿದೊಡೆ ಚಿರ ಆತ್ಮಕಳಿವೆ?

ಸತ್ತಿಲ್ಲ!  ಸತ್ತಿಲ್ಲ!  ಚಂದನವು ಉರಿಯುತಲಿ
ಬೆಂಕಿಹೊಗೆಕಾವುಗಳ ರೂಪವಾಂತು
ವಿಶ್ವಸೇವೆಯನೆಸಗಿ ಉಳಿಯುವೊಲು ಉಳಿದಿಹನು
ಸಾವವನ ಜೀವವನು ಒಯ್ಯಲೆಂತಹುದು?   ೨೪೦

ಸಾವು ಜೀವದ ನಾಡಿ.  ಜೀವ ಸಾವಿನ ಮೋಡಿ.
ಮೂಡಿಹುದು ಮೂಡಲಲಿ ರವಿಯ ಬೆಳಕು!
ಸಂಜೆಸಾವಲಿ ಮುಳುಗಿ ಸಾವಿನಿಂ ಹೊರಬಿದ್ದು
ಜೀವ ಹಂಚುತಲಿರುವ-ಉದಯರವಿ ನೋಡಿ!

ಜೀವನದಮೇಲಿರುವ ಮಾಯೆ ಸಾವಿನದಿತ್ತು
ಹರಿಯಿತದು ಇಂದೀಗ ಮುಸುಕು ಸರಿದು
ಜೀವಕಾಂತಿಯು ಪೆರ್ಚಿ ಇಮ್ಮಡಿಸಿ ಮುಮ್ಮಡಿಸಿ
ವಿಶ್ವವನು ಬೆಳಗಿಸಿದೆ-ಸತ್ತಿಹನೆ ಅವನು?

ಬಾಳುತಿಹ ಬಾಳಿನಲಿ ಮೋಡದಲಿ ನೀರಾಗಿ
ನೀರಿನಲಿ ಹನಿಯಾಗಿ, ಹನಿಯಲಣುವು!   ೨೫೦
ನಾಳನಾಳದಲವನ ಬಾಳಗೀತವು ಮಿಡಿದು
ಹಾಡಿನಲಿ ಇಂಪಾಗಿ ಜೀವಿಸಿಹನವನು!

ಹೂವಿನಲಿ ಮಧುವಾಗಿ, ಹಕ್ಕಿಯಲಿ ಹಾಡಾಗಿ
ಮುಗುದೆಯರ ಮನಸಿನಲಿ ಮುಗುಳು ಆಗಿ,
ಮಗುವಿನೆಳನಗುವಾಗಿ, ಬೆಳಕಕಿರಣಗಳಾಗಿ
ಪವನನಲಿ ತಂಪಾಗಿ ಉಳಿದಿರುವನವನು.

ಮೊಗ್ಗಾಗಿ ಉರುಳಿದುದು ತಾರೆಯಾಗರಳಿಹುದು
ಜಗಕೆ ಬೀರುತಲಿಹುದು ವಿಶ್ವಪ್ರೇಮ.
ಹಾಯಾಗಿ ಹರಡಿರಲು ಹಾಲ್ಚೆಲ್ಲಿದಾನಂದ
ತಾರೆ ಕುಣಿಯುತಲಿಹುದು-ಹೃದಯಾಂತರಾಳ!   ೨೬೦

ಕವಿಯಾತ ಮಡಿದನೆಂದೆಲ್ಲ ಮರುಗುವುದೇಕೆ?
ಮನಸಿನಲಿ ಮೂಡಿರಲು ಅವನ ನೆನಪು
ಎಂದು ಬಾಡದ ಹೂವು ಆತ ನುಡಿಸಿದ ಗೀತ!
ಕವಿಗೆ ಮರಣದ ಸೋಂಕೆ?  ಚಿರಜೀವಿಯಾತ!  ೨೬೪

(೧೯೪೪ರಲ್ಲಿ ವಿಶ್ವವಿದ್ಯಾನಿಲಯುದಿಂದ ಬಿ.ಎಂ.ಶ್ರೀಯವರ ರಜತೋತ್ಸವ ಸ್ವರ್ಣಪದಕ ಪಡೆದುದು.)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿತ್ಯ ಹಸಿರು
Next post ಕೊರಡು ಕೊನರುವದು

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…