ಬಡವನ ಹೆಂಡತಿ
ಒಡೆದ ಮಡಕೆಯ ಬಾಳು
ಸೋರಿ ಹೋಗುವ ಸುಖ
ಹೆಂಗೆ ತೆಡೆದಾಳೊ ತಾಯಿ
ಹೆಂಗೆ ಪಡೆದಾಳೊ?
ಒಡೆಯನ ಒಡಲಿಗೆ
ಜೀತಗಾರನು ಗಂಡ
ಸಂಜೀಕೆ ಬಂದಾನು
ಹೊತ್ತು ತಂದಾನು
ಗೊಟಕೆನ್ನುವ ಮಕ್ಕಳಿಗೆ
ಗುಟುಕು ಕೊಟ್ಟಾನು.
ಬಯಕೆ ಬಾಗಿಲ ಬಳಿ ತವಕದ ತವರು
ಸೀರೆ ತುಂಬಽ ಕಣ್ಣು ಹರಿದ ಆಸೆ
ನಿಟ್ಟುಸಿರು ತುಂಬಿ ನಿಟ್ಟುಬಿದ್ದ ಸೂರು
ನೆಲ ಕಚ್ಚಿ ಮಕ್ಕಳು ಜೀವ ಹಿಡಿದಾವೊ
ಹೊಟ್ಟೆ ಹೊಕ್ಕು ನಿಂತ ಹಸಿವಿನ ಅಬ್ಬರ
‘ಬಲಿ ಕೊಡುವಿರೊ ಇಲ್ಲ ತಲೆ ಕೊಡುವಿರೊ?’
ಹೊತ್ತೇಸು ಆದರೂ ಗಂಡ ಬರಲಿಲ್ಲ
ಬಾಯ್ತೆರೆದ ಹಸಿವಿಗೆ ಬಲಿಯ ತರಲಿಲ್ಲ.
ಬಡವನ ಹೆಂಡತಿ, ಕತ್ತಲ ಭೀತಿ
ನಿದ್ದೆ ಬೀದಿಗೆ ಬೆಳಕ ಚೆಲ್ಲವ್ಳೆ
ಗಂಡನ ಬರವಿಗೆ ಕಾದು ನಿಂತವ್ಳೆ
ಬಡಗಂಡ ಬಂದಾಗ
ಒಳಗೆ ಕಾಲಿಟ್ಟಾಗ
ಬರದ ಭೂಮಿಗೆ ನೆರೆ ಬಂತು
ಉದ್ದ ನಾಲಗೆ ಚಾಚಿ
ಹದ್ದು ಮೀರಿತು ಹಸಿವು
ಬುಡ್ಡಿ ಬೆಳಕಾಗೆ ನರಳಿ ನೋಡ್ಯಾಳೊ
ಹೊತ್ತು ತಂದಿದ್ದ ಮೈ ತುಂಬ ಮನ ತುಂಬ
ಹೆಂಡತಿ ಮಕ್ಕಳಿಗೆ ಹಂಚಿದರೂ ಉಳಿದೀತು
ದಿನಾ ಕುಂತುಂಡರೂ ಒರತೆ ಉಕ್ಕಿತು
ಒಡೆಯನ ಕೊಡುಗೆ ಬಾಸುಂಡೆ ಮೇವು
ಸಾಯಲಾರದ ಹಿಂಸೆ, ಬೆಳೆವ ನೋವು.
*****