ಹಣೆ ಬರಹದಣೆಕಟ್ಟು
ಜಾತಿ ಮತಗಳ ಸುಟ್ಟು
ಬಂದೇವು ಬಡವರು
ಹೊಸ ಪಂಜು ಹಿಡಿದು.
ಭೋರ್ಗರೆವ ನೀರೊಳಗೆ
ಬಡವರೊಂದಾದೇವು
ಹನಿ ಹನಿಯ ಕಿಡಿಗೊಳಿಸಿ
ಅಲೆಯಾಗಿ ಹರಿದೇವು.
ಅಪ್ಪಳಿಸಿ ಅಲೆಯಾಗ್ನಿ
ಬೆಟ್ಟ ಬೂದಿಯಾದೀತು
ಮಂತ್ರ ಹೇಳುವ ಮರ
ಮೊದಲೆ ಬಿದ್ದಿತು.
ರತ್ನಗಂಬಳಿ ಪೀಠ
ಸುಳ್ಳು ಸಂಸ್ಕೃತಿ ಪಾಠ
ಉರಿ ಉಕ್ಕುವ ನೆರೆಗೆ ಸಿಕ್ಕಿ
ಅತ್ತು ಕರೆದಾವು-
ಸತ್ತು ಹೋದಾವು.
ಕೊಚ್ಚಿ ಹಾಕುವ ಕಿಚ್ಚು
ಹುಚ್ಚಾಗದಂತೆ
ಸುಟ್ಟ ಹಾದಿಯ ತುಂಬ
ಹೊಸ ಹಾಡು ಹರಿದೀತು
ಹೊಸ ಮನಸು ಮೆರೆದೀತು.
*****