ಬಸಿರು ತುಂಬಿದ ಮೋಡ
ಕಾದು ಕರೆಯೊ ಭೂಮಿ-
ಮುಗಿಲಿನ ಗಂಡ;
ಮಳೆ ಮಗುವು ಎಲ್ಲೊ?
ತೊಟ್ಟಿಲ ಸಿಂಗರಿಸಿ
ಕಾದು ಕಣ್ಣರಳಿಸಿ
ಕೂತೆವು ನಾವು
ಕೂಸಂತು ಇಲ್ಲೊ.
ಮುಗಿಲ ಮೈಯಿಳಿಯಿತೆ?
ಕೆಟ್ಟ ಮುನಿಸಾಯಿತೆ?
ನೆಲ ಮುಗಿಲು ಗುದ್ದಾಡಿ
ಕಷ್ಟ ನಮಗೇ ಬಂತೆ?
ನಮ್ಮ ಹಿಂಡೋ ಮಿಂಡ
ಕಂಡಕಂಡೋರ ಗಂಡ
ಅಲ್ಲಿಗೂ ಹಾರಿದನೊ?
ಮುಗಿಲ ಕದ್ದಿಟ್ಟನೊ?
ಕೊರಳ ಮುರಿದಿಟ್ಟನೊ?
ಮುಗಿಲ ಮಾತೆಯ ಕೆಡವಿ
ಮ್ಯಾಲೆ ಬಿದ್ದೆಲ್ಲ ಪರಚಿ
ನೆಲದಲ್ಲಿ ನೆತ್ತರ ಕಲೆಯಾಯಿತೊ
ಚಿಂದಿ ಸೀರೆ ಉಟ್ಟು
ಹರಿದ ರವಿಕೆ ತೊಟ್ಟು
ಮುಖ ಮುಚ್ಚಿ ಅತ್ತದ್ದು
ಹನಿಯಾಯಿತೋ-
ಎರಡು ಹನಿಯಾಯಿತೊ
ಮಳೆ ಮಗುವಂತು ಕನಸಾಯಿತೊ-
ನಮಗೆ ಕನಸಾಯಿತೊ
*****