ಕಾಯಕ ಯೋಗಿ ಕಾರ್ಮಿಕ
ನಿನ್ನಯ ಬದುಕು ಸಾರ್ಥಕ ||ಪ||
ಭೂಮಿಯ ಒಡಲಲಿ ಚಿನ್ನದ ಗೂಡು
ಹುದುಗಿಹ ಚಿನ್ನದ ನಿಕ್ಷೇಪ ನೋಡು
ಹಟ್ಟಿಯ ಚಿನ್ನದ ಗಣಿಯಲ್ಲಿಹ ಬೀಡು
ಭಾರತ ದೇಶದ ಮುಕುಟವೇ ಈ ನಾಡು.
ತಲೆಯ ಮೇಲೆ ಮಂದಿ ದೀಪವ ಇತ್ತು
ಭೂಗರ್ಭದಿ ಇಳಿದೆ ಧೈರ್ಯವ ಹೊತ್ತು
ನಿನ್ನವರಿಗಾಗಿಯೇ ಪ್ರಾಣವನೇ ಪಣವಾಗಿ ಇತ್ತು
ಕೊರೆಯುತ ಸಾಗಿದೆ ಭೂಮಿಯ ಮೂರೊತ್ತು.
ಬೆವರನು ಸುರಿಸುತ ನೆತ್ತರು ಹರಿಸುತ
ಕಲ್ಲನು ಅಗೆಯುತ ಕುಟ್ಟತ ಬೀಸುತ
ಕಾಯಿಸಿ ಕರಗಿಸಿ ಹಾಕಿದೆ ಚಿನ್ನದ ಗಟ್ಟಿ
ಹಗಲಿರುಳು ದುಡಿಯುತ ನೀನಾದೆ ಜೆಟ್ಟಿ.
ಚಿನ್ನದ ಗಣಿಯಲ್ಲಿ ನಿತ್ಯದ ಕಾಯಕ
ಸಾಗಿದೆ ಜಗಕೆ ಚಿನ್ನ ನೀಡುವ ಕಾಯಕ
ಚಿನ್ನದ ಮೇಲೆ ಮೋಹವು ನಿನಗಿಲ್ಲ
ಚಿನ್ನದಂತಹ ಕಾರ್ಮಿಕ ನೀನಾಗಿಹೆಯಲ್ಲ.
*****