ಬ್ಯಾಂಕಿನಲ್ಲಿ ನೌಕರಿ
ಹಡಗಿನಲ್ಲಿ ಚಾಕರಿ
ಎರಡೂ ಒಂದೇ ಸರಿ
ದೂರದಿಂದ ನೋಡಿ
ಅದರ ಸೌಂದರ್ಯ,
ತಿಳಿಯದೆ ಅಂತರ್ಯ,
ಸ್ಥಳ ಗಿಟ್ಟಿಸಲು ಹೋದವರು,
ಹೋಗಲು ಹಂಬಲಿಸಿದವರು
ಇದ್ದಾರು ಅಸಂಖ್ಯ ಜನರು.
ಒಳ ಹೊಕ್ಕು ಕುಳಿತವರಿಗೇ ಗೊತ್ತು
ಅಲ್ಲಿನ ವಿಶಿಷ್ಟ ಜಗತ್ತು
ನಿಂತ ನೆಲವೇ ಭದ್ರವಿಲ್ಲ
ಸದಾ ಕುಲುಕು ನಡಿಗೆ
ಹೊರಟಾಗಿದೆ. ಹಿಂತಿರುಗುವಂತಿಲ್ಲ,
ಮಧ್ಯೆ ಇಳಿಯುವ ಮಾತೇ ಇಲ್ಲ!
ತೇಲುತ್ತಿರುವ ಜಲವೇ ಉಕ್ಕಿ
ತನ್ನ ಒಡಲಲ್ಲಿ ಸೇರಿಸಿ
ಹೆಸರಿಲ್ಲದಂತೆ ಮಾಡೀತು.
ಅನಿರೀಕ್ಷಿತ ಬಂದ ತಿಮಿಂಗಿಲ
ಬುಡಮೇಲು ಮಾಡೀತು
ಕಡಲಗಳ್ಳರ ಕಾಟ ಒಂದೆಡೆ,
ಬಿರುಗಾಳಿಯ ಭೀತಿ ಮತ್ತೊಂದೆಡೆ.
ಶೇಖರಿಸಿರುವ ಊಟ, ನೀರು
ಮುಗಿಯುವ ಮುನ್ನ ಒಂದೂರು
ಸೇರುವ ನೆಲೆಸುವ ಆಸೆ ನೂರು
ಸೇರಿದರೆ ಸೇರೇವು,
ಕರೆ ಬಂದರೆ ಮತ್ತೆ ಹೊರಟೆವು
ದೀರ್ಘ ಪಯಣ ತಂದ ನಂಟು
ತಿಳಿಯದೆ ಹಾಕಿಕೊಂಡ ಗಂಟು
ತಂದೀತು ಅನಿಶ್ಚಿತತೆಯಲ್ಲೆ
ನಿಶ್ಚಿತ ಬಾಳಿನ ಲಂಗರು.
ನಮ್ಮಹಡಗು ಬ್ಯಾಂಕು
ಬಾಳು ದೀರ್ಘ ಪಯಣ
ಕೊನೆ ಮೊದಲಿಲ್ಲದ ವರ್ಗಗಳು
ಆಂತರಿಕ ಬಾಹ್ಯ ಒತ್ತಡಗಳು
ರಾಜಕೀಯ ವಶೀಲಿಗಳು
ದಿನ ನಿತ್ಯದ ನೂರೆಂಟು ಸಮಸ್ಯೆಗಳು
ಹುಟ್ಟೂರು ಬಿಟ್ಟು, ಕಳೆದು ದಶಕಗಳು
ಊರಿಂದೂರಿಗೆ ವಲಸೆ ಹೋದಲ್ಲಿ –
ಎಲ್ಲಿಯೋ ಮದುವೆಯಾಗಿ
ಬೇರೆಲ್ಲಿಯೋ ಮನೆ ಕಟ್ಟಿ
ದೇವರ ದಯೆಯಿಂದ,
ದೊಡ್ಡವರ ಆಶೀರ್ವಾದದಿಂದ
ಮರ್ಯಾದೆಯಾಗಿ ರಿಟೈರಾದರೆ
ಏಳೇಳು ಜನ್ಮಗಳ ಪುಣ್ಯ.
ನಿಜಕ್ಕೂ..ಬ್ಯಾಂಕಿನಲ್ಲಿ ನೌಕರಿ
ಹಡಗಿನಲ್ಲಿ ಚಾಕರಿ
ಎರಡೂ ಒಂದೇ ಸರಿ.
*****
೧೧-೦೬-೧೯೯೨