ಶ್ರೀ ಚ.ಹ. ರಘುನಾಥ್ ಅವರು ‘ದೇವರನ್ನು ಕುರಿತು ಒಂದು ಲೇಖನ ಬರ್ಕೊಡಿ’ ಅಂತ ಕೇಳಿದಾಗ ನನಗೆ ಆಶ್ಚರ್ಯವಾಯ್ತು. ನನಗೆ-ದೇವರಿಗೆ ಎಲ್ಲಿನ ಸಂಬಂಧ ಅಂಡ್ಕೊಳ್ತಾ ಇರುವಾಗಲೇ ‘ಯಾವತ್ತಾದ್ರೂ ದೇವರು ಅಥವಾ ದೇವರ ಕಲ್ಪನೆ ಕಾಡಿರುತ್ತಲ್ಲ ಸಾರ್’ ಎಂದು ಸ್ಪಷ್ಟನೆ ನೀಡಿದರು. ನಿಜ; ದೇವರು ಇಲ್ಲ ಅಂಡ್ಕೊಂಡಾಗಲೂ ಕಾಡಿಸುವ ಕಲ್ಪನೆ ಇರುತ್ತೆ. ದೇವರನ್ನು ನಂಬದೇ ಇರುವವರೂ ಒಂದು ಕಾಲದಲ್ಲಿ – ಅಂದ್ರೆ ಬಾಲ್ಯದಲ್ಲಿಯಾದ್ರೂ – ದೇವರನ್ನು ನಂಬಿರೋದು ನಮ್ಮ ದೇಶದಲ್ಲಿ, ನಾವು ಬದುಕ್ತಿರೂ ಸಮಾಜದಲ್ಲಿ ಒಂದು ಸಹಜ ಕ್ರಿಯೆ. ನಾನೂ ಇದಕ್ಕೆ ಹೊರತಾಗಿರಲಿಲ್ಲ.
ನನ್ನನ್ನು ಕಾಡಿಸಿದ ‘ದೇವರು’ ಯಾರು ಅಂತ ನೆನಪಿನ ಬಾನಿಯನ್ನ ಬಾವೀಲಿ ಬಿಟ್ಟಾಗ ಅದು ತುಂಬಿಕೊಂಡು ಬಂದ ರಾಶಿ ನೀರಲ್ಲಿ ಮೊದಲು ಕಾಣಿಸಿದ್ದು ನಾಯಕನಹಟ್ಟಿ ತಿಪ್ಪೇಸ್ವಾಮಿ. ನಾಯಕನಹಟ್ಟಿ ಇರೋದು ಚಿತ್ರದುರ್ಗ ಜಿಲ್ಲೇಲಿ. ನನ್ನದು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕು. ಚಿತ್ರದುರ್ಗ ಜಿಲ್ಲೆಗೆ ಒಂದು ಕಡೆ, ಆಂಧ್ರದ ಮಡಕಶಿರಾ ತಾಲ್ಲೂಕಿಗೆ ಒಂದುಕಡೆ ಹೊಂದಿಕೊಂಡಿರೊ ಊರು ನನ್ನ ಬರಗೂರು, ಈ ಸುತ್ತಮುತ್ತೆಲ್ಲ ನಾಯಕನಹಟ್ಟಿ ತಿಪ್ಪೇಸ್ವಾಮಿಯ ಮಹಿಮೆಗೆ ಮಾರುಹೋದೋರು ಬಹಳ ಜನ. ಅವರಲ್ಲಿ ನಾನೂ ಒಬ್ಬ. ಹಾಗೆ ನೋಡಿದರೆ ನಾಯಕನಹಟ್ಟಿ ತಿಪ್ಪೇಸ್ವಾಮಿ ಸ್ವತಃ ದೇವರಲ್ಲ. ದೇವರ ಭಕ್ತ; ಶಿವಭಕ್ತ. ತಿಪ್ಪೇಲಿ ನಿಂತು ಶಿವನಾಮ ಜಪಿಸುತ್ತಾ ಇದ್ದ, ಮೈಗೆಲ್ಲ ತಿಪ್ಪೇಲಿದ್ದ ಸಗಣಿ ಬಳ್ಕೊಂಡು ಕುಣೀತಾ ಇದ್ದ, ಅದಕ್ಕೆ ಆತನಿಗೆ ತಿಪ್ಪೇಸ್ವಾಮಿ ಅಂತ ಹೆಸರು ಬಂತು ಅನ್ನೋ ಪ್ರತೀತಿ ಇದೆ. ಇದನ್ನು ನಮ್ಮ ಹಿರಿಯರು ಹೇಳ್ತಾ ಇದ್ದರು.
ನಮ್ಮ ಕಡೆ – ರಾತ್ರಿ ಹೊತ್ತು ಮನೆಯ ಪಡಸಾಲೇಲಿ ಅಥವಾ ಹೊರಗಡೆ ಅಂಗಳದಲ್ಲಿ ‘ತಿಪ್ಪೇಸ್ವಾಮಿ ಕತೆ ಓದ್ದೋದು’ ಒಂದು ಪದ್ಧತಿ. ತಿಪ್ಪೇಸ್ವಾಮಿಯ ಜೀವನ ಕುರಿತ ಹಾಡುಗಬ್ಬವು ನಮ್ಮ ಕಡೆ ಚಾಲ್ತಿಯಲ್ಲಿದೆ. ಅದು ಪುಸ್ತಕ ರೂಪದಲ್ಲೂ ಬಂದಿತ್ತು. ಬಾಯಿಪಾಠ ಮಾಡಿಕೊಂಡು, ಖಂಜರ ಬಡೀತಾ ಹಾಡ್ತಾ ಅರ್ಥ ಹೇಳ್ತಾ ಅನುಭವಿಸೊ ವ್ಯಕ್ತಿಯೊಬ್ಬರು ನಮ್ಮೂರಲ್ಲಿದ್ದರು. ಈ ಥರಾ ಇತರೆ ಊರಲ್ಲೂ ಇದ್ದರು. ಇವರಲ್ಲಿ ಯಾರನ್ನಾದ್ರೂ ಕರೆದು ಕತೆ ಓದ್ಸಿ ಕೊನೇಲಿ ಒಣಗೊಬರಿ ಸುಡಬೇಕು; ಸುಟ್ಟ ಒಣಗೊಬರಿಯ ಪುಡಿಯನ್ನು ಹಣೆಗೆ ಹಚ್ಚಬೇಕು. ಅದರಿಂದ ಒಳ್ಳೇದಾಗುತ್ತೆ ಅನ್ನೊ ನಂಬಿಕೆ. ನಮ್ಮ ಮನೇಲಿ ಅಪರೂಪಕ್ಕೊಮ್ಮೆ ತಿಪ್ಪೇಸ್ವಾಮಿ ಕತೆ ಓದ್ಸೋರು. ನಮ್ಮ ಕೇರಿ ಜನರನ್ನೆಲ್ಲ ಕರೆಯೋರು. ನಾವೆಲ್ಲ ಹುಡುಗರು, ದೊಡ್ಡರ ಜೊತೆ ಕೂತು ಕೇಳ್ತಾ ಇದ್ದೆವು. ನಾನು ನಮ್ಮಮ್ಮನ ಪಕ್ಕದಲ್ಲಿ ಕೂತು ಕತೆ ಕೇಳಿದ್ದೇ ಹೆಚ್ಚು. ಒಬ್ಬ ಸಾಮಾನ್ಯ ಹಳ್ಳಿಗನಾದ ತಿಪ್ಪೇಸ್ವಾಮಿ ಪುಣ್ಯಪುರುಷನಾಗಿ ಪೂಜಾರ್ಹನಾದ ಕತೆ ನನ್ನನ್ನು ಆಗ ಸಾಕಷ್ಟು ಕಾಡ್ತಾ ಇತ್ತು. ಕಷ್ಟಪಟ್ರೆ, ನಿಷ್ಠೆ ಇದ್ರೆ, ದೊಡ್ಡ ವ್ಯಕ್ತಿ ಆಗಬಹುದಲ್ಲವೆ ಅನ್ನೋ ಪ್ರಶ್ನೆಯಾಗಿ ಒಳಗೆ ಉಳಿದುಬಿಟ್ಟಿತ್ತು. ಆ ತಿಪ್ಪೇಸ್ವಾಮಿ ಹುಟ್ಟಾ ದೇವರಲ್ಲ, ಬೆಳೀತಾ ದೇವರು ಅನ್ನೊ ತಿಳುವಳಿಕೆಯಿಂದ ನನಗೆ ಹೆಚ್ಚು ಪ್ರಿಯವಾಗಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಆತ ನಮ್ಮ ಕೇರೀಲೆ ಓಡಾಡೊ ನಮ್ಮ ಮನುಷ್ಯ ಅನ್ನೋವಷ್ಟು ಹತ್ತಿರ ಆಗಿದ್ದ. ಹೇಗಿದ್ದರೂ ಆತ ಕಾಲ್ಪನಿಕ ವ್ಯಕ್ತಿ ಆಗಿರಲಿಲ್ಲ. ಬಾಳಿ ಬದುಕಿದ ಭಕ್ತಿಯ ಬೆಳಕಾಗಿದ್ದ ಆತ.
ಆ ತಿಪ್ಪೇಸ್ವಾಮಿ ನನಗೆ ಎಷ್ಟು ಹತ್ತಿರ ಆಗಿದ್ದ ಅಂದ್ರೆ, ನನಗೇನಾದ್ರೂ ಜ್ವರಗಿರ ಬಂದ್ರೆ, ಮೊದಲು ನೆನಪಿಗೆ ಬರ್ತಾ ಇದ್ದೋನೇ ಆತ. ಒಂದ್ಸಾರಿ ನಂಗೆ ಜ್ವರ ಬಂದು ಹಜಾರದಲ್ಲಿ ಮಲಗಿದ್ದೆ. ಒಬ್ಬ ದಾಸಯ್ಯ ಬನವಾಸಿ ಹಿಡಕೊಂಡು ತಿಪ್ಪೇಸ್ವಾಮಿ ಫೋಟೊ ಸಮೇತ ಬಂದು ಜಾಗಟೆ ಬಾರಿಸಿದ. ನಾನು ನರಳುತ್ತಾ ಎದ್ದವನು ತಿಪ್ಪೇಸ್ವಾಮೀಗೆ ಕೈಮುಗಿದೆ. ತಕ್ಷಣ ಆ ದಾಸಯ್ಯ `ನಿಮ್ಮನೇಲಿ ತಿಪ್ಪೇಸ್ವಾಮಿ ಕತೆ ಓದ್ಸಿ’, ನನಗೆ ದಕ್ಷಿಣೆ ಕೊಡಿ; ತಿಪ್ಪೇಸ್ವಾಮಿ ಹೆಸರಲ್ಲಿ ಯಂತ್ರ ಮಾಡ್ಕೊಡ್ತೀನಿ. ನಿಮ್ಮ ಹುಡುಗನ ರಟ್ಟೆಗ್ ಕಟ್ಟಿ’ ಎಂದೆಲ್ಲ ಒಂದೇ ಸಮ ಹೇಳಿದ. ನನ್ನ ಅಪ್ಪ ಅಮ್ಮ ಅವತ್ತೇ ರಾತ್ರಿ ತಿಪ್ಪೇಸ್ವಾಮಿ ಕತೆ ಓದಿಸಿದರು. ಒಂದುವಾರ ಆದ್ಮಲೆ ಜ್ವರ ಬಿಟ್ಟರೂ ತಿಪ್ಪೇಸ್ವಾಮಿ ಮಹಿಮೆ ಮಾಸಿ ಹೋಗಲಿಲ್ಲ. ಅಂದಿನಿಂದ ನನಗೆ ಯಾವತ್ತು ಜ್ವರ ಬಂದ್ರೂ ತಿಪ್ಪೇಸ್ವಾಮಿ ಕತೆ ಓದ್ಸೋರು. ಬರುಬರ್ತಾ ಇದು ಹೇಗಾಯ್ತು ಅಂದ್ರೆ ತಿಪ್ಪೇಸ್ವಾಮಿ ಕತೆ ಕೇಳ್ಬೇಕು ಅನ್ನಿಸಿದಾಗೆಲ್ಲ ನನಗೆ ‘ಜ್ವರ ಬರೋದು’. ‘ಯಾಕೊ ಮೈ ಬೆಚ್ಚಗೈತೆ ಕಣಮ್ಮ’ ಅಂದ್ರೆ ಸಾಕು ತಿಪ್ಪೇಸ್ವಾಮಿ ಕತೆ ಹೇಳ್ಸೋಕೆ ನಮ್ಮಮ್ಮ ಅಪ್ಪಯ್ಯನ್ ಮೇಲೆ ಒತ್ತಡ ಹಾಕಿ ನನ್ನ ಆಸೆ ಈಡೇರ್ಸೋರು. ಕತೆಯ ಕೊನೇಲಿ ಸುಡೋಕೆ ಅಂತ ಕೊಬ್ಬರಿ ತಂದಿರೋರಲ್ಲ, ಅದರಲ್ಲಿ ಸ್ವಲ್ಪ ಮುರ್ಕೊಂಡು ತಿಪ್ಪೇಸ್ವಾಮಿ ಹೆಸರು ಹೇಳಿ ಕಣ್ಣಿಗೆ ಒತ್ಕೊಂಡು ತಿಂದಿದ್ದೇ ತಿಂದಿದ್ದು. ಹೆಂಗಿದ್ರೂ ತಿಪ್ಪೇಸ್ವಾಮಿ ಪ್ರಸಾದ ತಾನೆ?
ಆಮೇಲೆ, ತಿಪ್ಪೇಸ್ವಾಮಿಯಿಂದ ಶಿವನ ಕಡೆ ನನ್ನ ಭಕ್ತಿ ತಿರುಗಿತು. ಹಾಗಂತ ತಿಪ್ಪೇಸ್ವಾಮೀನ ಮರೆತಿರಲಿಲ್ಲ; ಮರೆಯೋಕೆ ಸಾಧ್ಯವೂ ಇರಲಿಲ್ಲ. ಯಾಕೆ ಅಂದ್ರೆ ನನ್ನ ಮನಸ್ಸಲ್ಲಿ ಶಿವನನ್ನ ಕಾಣಿಸ್ದೋನು ಈ ತಿಪ್ಪೇಸ್ವಾಮೀನೇ
ನಮ್ಮೂರಲ್ಲಿ ಒಂದು ಶಿವ ದೇವಾಲಯ ಇದೆ. ‘ಈಶ್ವರನ್ ಗುಡಿ’ ಅಂತ ನಾವು ಕರೆಯೋದು. ಸ್ಕೂಲಲ್ಲಿ ಬೇಲೂರು ಹಳೇಬೀಡು ಅಂತೆಲ್ಲ ಓದಿ, ಆ ಥರಾ ದೇವಸ್ಥಾನ ನಮ್ ಹತ್ರ ಎಲ್ಲೂ ಇಲ್ಲವಲ್ಲ ಅಂತ ಕೊರುಗ್ತಾ ಇದ್ದ ನನಗೆ ನಮ್ಮೂರಿನ ಈಶ್ವರನ್ ಗುಡಿ ಒಳಗಡೆ ಇದ್ದ ದೊಡ್ಡ ದೊಡ್ಡ ಕಂಬಗಳು ಸಮಾಧಾನ ನೀಡಿದ್ದವು. ಜೊತೆಗೆ ಗುಡಿ ಒಳಗಡೆ ಈಶ್ವರ ಲಿಂಗಕ್ಕೆ ಎದುರಾಗಿ ಒಂದು ದೊಡ್ಡ ಬಸವನ (ನಂದಿ) ವಿಗ್ರಹ ಇತ್ತು. ಚಾಮುಂಡಿ ಬೆಟ್ಟದ ನಂದಿ ವಿಗ್ರಹದ ಬಗ್ಗೆ ಸ್ಕೂಲಲ್ಲಿ ಓದಿದ್ದ ನನಗೆ ‘ನಮ್ಮೂರಲ್ಲೂ ಒಂದು ದೊಡ್ಡ ನಂದಿ ವಿಗ್ರಹ ಇದ್ಯಲ್ಲ: ನಾವೇನ್ ಕಡಿಮೆ’ ಅನ್ನೊ ಹೆಮ್ಮೆ; ನಮ್ಮೂರು ತೀರಾ ಬರಡಲ್ಲ ಅನ್ನೋ ಸಮಾಧಾನ.
ಒಂದು ವಿಚಿತ್ರ ಪ್ರಸಂಗವನ್ನು ಇಲ್ಲಿ ಹೇಳಲೇಬೇಕು. ನಾವು ಚಿಕ್ಕ ಹುಡುಗರು ಶಿವನ ಬಗ್ಗೆ, ಶಿವನ ಭಕ್ತರ ಬಗ್ಗೆ ಅದೂ ಇದೂ ಕತೆ ಕೇಳಿ ಆಗಾಗ್ಗೆ ‘ಚರ್ಚೆ’ ಮಾಡ್ತಿದ್ದೆವು. ಒಮ್ಮೊಮ್ಮೆ ತಮಾಷೇನೂ ಮಾಡ್ಕೊಳ್ತಾನೂ ಇದ್ದೆವು. `ಓಂ ನಮಃ ಶಿವಾಯ’ ಅಂತ ತಪಸ್ಸು ಮಾಡ್ತಾರೆ ಅಂತ ಕೇಳಿದ್ದೆವಲ್ಲ – ಅದನ್ನೇ ಬಳಸಿಕೊಂಡು ನಾನು ‘ಓಂ ನಮಃ ಶಿವಾಯ । ಓಂ ಕಾಳ್‌ಬಜ್ಜಾಯ | ರಾಗಿ ಮುದ್ದಾಯ | ಗುಳ್ಕು ಗುಳ್ಕು ನುಂಗಾಯ |’ ಎಂದು ಅನೇಕ ಸಾರಿ ತಮಾಷೆ ಮಾಡಿದ್ದೆ. ನನ್ನ ಗೆಳೆಯರು ಹೆದರಿಸಿಬಿಟ್ರು. ‘ಹಿಂಗೆಲ್ಲ ಹೇಳಿದ್ದೀಯ ನಿನ್ನ ಶಿವ ಸುಮ್ನೆ ಬಿಡಲ್ಲ’ ಎಂದರು. ನಾನು ಹೇಳಿದ್ದನ್ನ ನಮ್ಮ ಕಡೆ ಅನೇಕರು ಹೇಳಿದ್ದರು. ಅವನ್ನೆಲ್ಲ ಶಿವ ಯಾಕೆ ಸುಮ್ಮನೆ ಬಿಟ್ಟ ಎಂದು ನಾನು ಪ್ರಶ್ನಿಸಿದೆ. ಆದರೂ ತಳಮಳ ನಿಲ್ಲಲಿಲ್ಲ. ಯಾರಿಗೆ ಹೇಳೋದು? ಆಮೇಲೆ ಅನ್ನಿಸ್ತು – ಯಾರಿಗಾದ್ರು ಯಾಕೆ ಹೇಳ್ಬೇಕು? ನಾನೇ ಪ್ರಾಯಶ್ಚಿತ್ತ ಮಾಡ್ಕೊಂಡ್ರಾಯ್ತು. ಅದಕ್ಕೆ ದಳ್ಳಾಳಿ ಯಾಕೆ? ಕೂಡಲೆ ಅಮ್ಮನ ಹತ್ರ ಹೋದೆ. ‘ಅಮ್ಮ ಪೆಪ್ಪರ್‌ಮೆಂಟ್ ತಗಳ್ಳಾಕೆ ಒಂದಾಣೆ ಕೊಡಮ್ಮ’ ಅಂದೆ. ಅಮ್ಮ ಸೆರಗಿನ ತುದೀಲಿ ಗಂಟುಹಾಕಿ ಬಚ್ಚಿಟ್ಟುಕೊಂಡಿದ್ದ ನಾಲ್ಕಾಣೇಲಿ ನನಗೆ ಒಂದಾಣೆ ಕೊಟ್ಟಳು. ಆನಂದದಿಂದ ಈಶ್ವರನ ಗುಡಿ ಹತ್ರ ಓಡಿದೆ. ಜಗಲಿ ಮೇಲೆ ಕೂತ್ಕಂಡೆ, ಗುಡಿಯ ಮುಖ್ಯದ್ವಾರದ ಎರಡೂ ಕಡೆ, ಗೋಡೆ ಮೇಲೆ ಒಂದೊಂದು ವಿಗ್ರಹ; ಒಟ್ಟು ಎರಡು ವಿಗ್ರಹ. ಅವಕ್ಕೆ ಮೇಣ ಮೆತ್ತಿದ್ದಾರೆ. ಹೀಗಾಗಿ ಏನಾದ್ರೂ ಮೇಲೆ ಒತ್ತಿದರೆ ಹಾಗೆ ಅಂಟಿಕೊಳ್ತಾ ಇತ್ತು. ನಾನು ಗುಡಿಯ ಜಗಲಿ ಮೇಲೆ ಕೂತವನು ಅತ್ತಿತ್ತ ನೋಡಿದೆ; ಮೆಲ್ಲಗೆ ಒಂದು ವಿಗ್ರಹದ ಹತ್ರ ಸರಿದೆ. ಯಾರಿಗೂ ಕಾಣದಂತೆ ಗಬಕ್ಕನೆ ಒಂದಾಣೆಯನ್ನು ವಿಗ್ರಹದ ಹಣೆಗೆ ಅಂಟಿಸಿದೆ. ನಿಟ್ಟುಸಿರುಬಿಟ್ಟೆ. ಅದು ಪ್ರಾಯಶ್ಚಿತ್ತದ ನಿಟ್ಟುಸಿರು; ಸಮಾಧಾನದ ನಿಟ್ಟುಸಿರು. ಆದರೆ `ಓಂ ನಮಃ ಶಿವಾಯ… ರಾಗಿಮುದ್ದಾಯ’ ಅನ್ನೋದು ನಿಲ್ಲಲಿಲ್ಲ. ರಾಗಿಮುದ್ದೆ ನಮ್ಮ ದೈನಂದಿನ ವಾಸ್ತವ ಅಲ್ವಾ? ಶಿವನಿಗೇ ರಾಗಿಮುದ್ದೆ ಅರ್ಪಿಸ್ದಂತೆ ಅಲ್ವ ಅಂತ ಯೋಚ್ನೆ ಮಾಡೋವಷ್ಟು ನನ್ನ ಬುದ್ಧಿ ಚಿಗುರ್ತಾ ಇತ್ತು. ಆದ್ರೇನಂತೆ, ಆಗಾಗ್ಗೆ ಪೆಪ್ಪರುಮೆಂಟಿನ ದುಡ್ಡು ದೇವರಿಗೆ ದಕ್ಷಿಣೆ ಆಗೋದು ಪೂರ್ತಿ ನಿಲ್ಲಲಿಲ್ಲ. ಅತ್ತ ಇತ್ತ ನೋಡಿ ಸುತ್ತಮುತ್ತ ಯಾರೂ ಇಲ್ಲ ಅಂತ ಖಾತ್ರಿ ಮಾಡ್ಕೊಂಡು ನಾನು-ನನ್ನ ದೇವರು ಇಬ್ಬರೇ ಅಂತ ಕಣ್ಮುಚಿ ಒಂದಾಣೆ ಎರಡಾಣೇನಾ ವಿಗ್ರಹದ ಹಣೆಗೆ ಅಂಟಿಸಿ ನನ್ನ ಹಣೇಬರಾ ಸರ್ಯಾಯ್ತು ಅಂದ್ಕೊಂಡು ಕಾಲ ತಳ್ಳಿದ್ದೇ ತಳ್ಳಿದ್ದು.
ನಮ್ಮೂರಿನ ಈಶ್ವರನ ಗುಡಿ ತುಂಬಾ ಮಹತ್ವದ್ದು ಅಂತ ನನಗೆ ಗೊತ್ತಾಗಿದ್ದು ಎಂ.ಎ. ಓದೋಕ್ ಬಂದ್ಮಲೆ. ‘ಗ್ರಂಥ ಸಂಪಾದನೆ’ ಕೃತೀನಲ್ಲಿ ಡಿ.ಎಲ್. ನರಸಿಂಹಾಚಾರ್ ಅವರು ನಮ್ಮೂರಿನ ಈಶ್ವರ ದೇವಾಲಯದ ಪ್ರಸ್ತಾಪ ಮಾಡಿದ್ದಾರೆ. ಸ್ತಂಭದಲ್ಲಿ ಚೌಕಾಕಾರದಲ್ಲಿ ಕೆತ್ತಿದ ಶಾಸನಕ್ಕೆ ಉದಾಹರಣೆಯಾಗಿ ನಮ್ಮೂರ ಈ ಗುಡಿಯಲ್ಲಿರೊ ಸ್ತಂಭ ಶಾಸನವನ್ನು ಉದಾಹರಿಸಿದ್ದಾರೆ. ಅದನ್ನು ಓದಿದ ನನ್ನ ಸಂಭ್ರಮ ಹೇಳತೀರದು. ಓಹ್! ನಮ್ಮೂರಿಗೂ ಒಂದು ಚರಿತ್ರೆ ಇದೆ! ಎಂಥ ಸಂತೋಷ ಅಂತ ಊರಿಗೆ ಹೋದವನೇ ಹೊರಗಡೆ ಎರಡು ವಿಗ್ರಹಗಳ ಕಡೆ ನೋಡದೆ ಒಳಗೆ ನುಗ್ಗಿದೆ. ಆ ವಿಗ್ರಹಗಳಿಗೆ ದಕ್ಷಿಣೆ ದಕ್ಕದೆ ದಂಗಾಗಿದ್ದವು ಅಂತ ಕಾಣುತ್ತೆ. ಒಳಗೆ ಹೋದವನೇ ಆ ಸ್ತಂಭವನ್ನು ನೋಡಿ, ಮತ್ತೆ ಮತ್ತೆ ಮುಟ್ಟಿದೆ; ಓದಲು ಕಷ್ಟವಾದ ಶಾಸನದ ಅಕ್ಷರಗಳ ಮೇಲೆ ಬೆರಳುಗಳನ್ನು ಇಟ್ಟು ಸವರುತ್ತಲೇ ಇದ್ದೆ. (ಆನಂತರ ಎರಡನೇ ಎಂ.ಎ.ನಲ್ಲಿ ಶಾಸನ ಶಾಸ್ತ್ರವನ್ನು ವಿಶೇಷ ಅಧ್ಯಯನಕ್ಕೆ ಆರಿಸಿಕೊಂಡೆ. ಆದರೆ ಎಂ.ಎ. ತರಗತಿಗೆ ಪಾಠ ಮಾಡೋಕಾಗಿ ಜಾನಪದವನ್ನು ಸ್ವಯಂ ಅಧ್ಯಯನ ಮಾಡಿ ಸಿದ್ಧನಾದೆ. ಅದೆಲ್ಲ ಬೇರೆ ಕತೆ; ಬಿಡಿ).
ಈಶ್ವರನ ಗುಡಿ ನನಗೊಂದು ಸಂಭ್ರಮ ತಂದಂತೆಯೂ ನಮ್ಮೂರ ಆಂಜನೇಯನ ಗುಡಿ ನನಗೆ ಸಂಭ್ರಮಿಸುವಂತೆ ಮಾಡಿತ್ತು. ಯಾಕೆಂದರೆ ಅದರ ಮುಂಭಾಗ, ಗೋಪುರ ಎಲ್ಲವೂ ಬಣ್ಣಬಣ್ಣದ ರೂಪವಿನ್ಯಾಸ ಪಡೆದು ಹೊಳೀತಾ ಇದ್ದವು. ವಿಗ್ರಹಗಳು ಜೀವಂತಿಕೆಯಿಂದ ಕಾಣ್ತಿದ್ದವು. ಜೊತೆಗೆ ಆಗಾಗ್ಗೆ ತೇರು ಎಳೆಯೊ ಸಂಭ್ರಮಾಚರಣೆ ಬೇರೆ ಇತ್ತು. ನಮ್ಮೂರಲ್ಲೂ ಒಂದು ಸುಂದರ ದೇವಾಲಯ ಇದೆ ಅನ್ನೋ ಹೆಮ್ಮೆ ತಂದಿತ್ತು.
ಇಷ್ಟೆಲ್ಲ ಹೇಳಿದ್ಮೇಲೆ ನಮ್ಮೂರ ಈರಮ್ಮ ಮತ್ತು ಕರಿಯಮ್ಮ ದೇವರ ಬಗ್ಗೆ ಹೇಳದಿದ್ರೆ ತಪ್ಪಾಗುತ್ತೆ. ಬರಗೂರು ಈರಮ್ಮನನ್ನು ಕುರಿತು ಕೆಲವು ಜನಪದ ಗೀತೆಗಳು ಹುಟ್ಟಿವೆ. ಇನ್ನು ಕೆಲವು ಜನಪದ ಗೀತೆಗಳಲ್ಲಿ ಬರಗೂರು ಈರಮ್ಮನ ಪ್ರಸ್ತಾಪ ಬರುತ್ತದೆ. ಇಂತಹ ಭಾಗ್ಯ ಕರಿಯಮ್ಮನಿಗೆ ಇಲ್ಲದಿದ್ದರೂ ಚಿಕ್ಕಂದಿನಲ್ಲಿ ನಮಗೆ ಸಾಕಷ್ಟು ಸಂತೋಷ, ಸಂಭ್ರಮ, ರೋಮಾಂಚನ ಕೊಟ್ಟಿದ್ದು ನಮ್ಮ ಕರಿಯಮ್ಮ ದೇವರು. ಯಾವುದಾದ್ರೂ ಹಬ್ಬ ಹರಿದಿನ ಬಂದಾಗ ಕರಿಯಮ್ಮ ದೇವರನ್ನು ಹೊರಡಿಸೋ ಪದ್ಧತಿ ಇತ್ತು. ‘ದೇವರು ಹೊರಡಿಸೋದು’ ಅಂದ್ರೆ ಅಟ್ಟಕಟ್ಟಿ ಅದರ ಮೇಲೆ ಉತ್ಸವ ಮೂರ್ತಿ ಕೂಡ್ಸಿ ನಾಲ್ವರು ಹೊತ್ತುಕೊಂಡು ಹೋಗೋದು. ಅಥವಾ ಒಮ್ಮೊಮ್ಮೆ ತೆರೆದ ಪೆಟ್ಟಿಗೇಲಿ ಕೂಡ್ಸಿ ಒಬ್ಬರೇ ಹೊರೋದು. ಅರೆ ಬಡ್ಕೊಂಡು ಊರೆಲ್ಲ ಸುತ್ತೋದು. ಹೀಗೆ ಸುತ್ತುತ್ತಾ ಇರುವಾಗ ಒಮ್ಮೊಮ್ಮೆ ಕರಿಯಮ್ಮ ಮುನಿಸ್ಕೊಂಡು ಓಡೋಕ್ ಶುರು ಮಾಡೋಳು. ಅರೆ ಬಡಿಯೋರೂ; ಪೂಜಾರಪ್ಪ ಹಿಂದೆ ಹಿಂದೇನೆ ಓಡೋದು. ನಾವು ಹುಡುಗರೆಲ್ಲ ಓಡ್ತಾ ಇದ್ವಿ. ಕರಿಯಮ್ಮನ್ನ ಹಿಡಿದು ನಿಲ್ಸಿದ್ ಮೇಲೆ ಪೂಜಾರಪ್ಪ ‘ಯಾಕಮ್ಮ ಹಿಂಗ್ ಮುನಿಸ್ಕಂತೀಯಾ? ಏನಮ್ಮಾ ತಪ್ಪಾತು’ ಎಂದು ನಿವೇದನೆ ಮಾಡೋದನ್ನ ನೋಡೋದೇ ನಮಗೊಂದು ಅನುಭವ. ಕರಿಯಮ್ಮ ಮುನಿಸ್ಕೊಂಡು ಓಡೋದೇ ಒಂದು ರೋಮಾಂಚನ, ಒಂದೊಂದ್ಸಾರಿ ನಮ್ಮಲ್ಲೇ ಗೆಳೆಯರಲ್ಲಿ ಚರ್ಚೆ : ‘ದೇವರನ್ನ ಹೊಡ್ಕೊಂಡಿರೋರೇ ಏನಾದ್ರೂ ಓಡೊ ನಾಟಕ ಮಾಡ್ತಾರ?’ – ಅಂತ. ಇಲ್ಲ ಹಾಗೆಲ್ಲ ಮಾಡಲಾರರು ಅಂತ ಉತ್ತರ. ಹಾಗಾದ್ರೆ ದೇವರ ಉತ್ಸವ ಹೊರಟ ಎಲ್ಲಾ ಸಂದರ್ಭದಲ್ಲೂ ಯಾಕೆ ಓಡೋಲ್ಲ? – ಅನ್ನೋ ಅನುಮಾನ. ‘ಪೂಜಾರಪ್ಪ ಯಾವ್ದೊ ಗಿಡ ಮೂಲಿಕೆ ತಂದು ದೇವರ ಪಕ್ಕ ಇಟ್ಟಿದ್ದಾನಂತೆ. ಅವತ್ತು ಮಾತ್ರ ಓಡುತ್ತಂತೆ’ ಅಂತ ಕೆಲವರ ಸಂಶೋಧನೆಯ ಸಮಾಧಾನ. ಒಟ್ಟಿನಲ್ಲಿ ಕರಿಯಮ್ಮ ನನಗೆ ಸಂಭ್ರಮ, ಸಂತೋಷ, ರೋಮಾಂಚನ ಕೊಡ್ತಾನೆ ಪ್ರಶ್ನೆಗಳನ್ನೂ ಹುಟ್ಟು ಹಾಕಿದ್ದು ನಿಜ; ತಿಪ್ಪೇಸ್ವಾಮಿ ಥರಾ ಅಲ್ಲದೆ ಇದ್ರೂ ಬೇರೆ ರೀತಿ ಕಾಡ್ಸಿದ್ದು ನಿಜ. ಅವತ್ತು ತಿಪ್ಪೇಸ್ವಾಮಿ ಭಾವವಲಯದಲ್ಲಿ ಬಂದು ನಿಂತಿದ್ದ. ಆನಂತರ ಕರಿಯಮ್ಮ ದೇವರು ಭಾವದಿಂದ ಬುದ್ಧಿಗೆ ಬಂದು ಪ್ರಶ್ನೆ ಆದಳು; ಪ್ರಶ್ನೆ, ಪ್ರಕ್ರಿಯೆ ಆಗ್ತಾ ಬಂತು. ಆ ಪ್ರಕ್ರಿಯೆ ನನ್ನನ್ನು ಇಲ್ಲವರ್ಗೂ ತಂದು ನಿಲ್ಲಿಸ್ತು.
ಇವತ್ತು ಅವತ್ತಿನ ಭಾವನೇಲಿ ನಾನು ದೇವಸ್ಥಾನಗಳಿಗೆ ಹೋಗೊಲ್ಲ. ಹೋಗೋದಾದ್ರೆ ದೇವಸ್ಥಾನಗಳನ್ನ ಚಾರಿತ್ರಿಕ – ಸಾಂಸ್ಕೃತಿಕ ಸ್ಮಾರಕಗಳು ಅಂತ ನೋಡೋಕ್ ಹೋಗ್ತೇನೆ. ಪೂಜೆಗಾಗಿ ಅಲ್ಲ; ಯಾಕೇಂದ್ರೆ ಅವತ್ತು ಒಳಗಿದ್ದ ದೇವರು ಇವತ್ತು ಹೊರಗೋಗಿದ್ದಾನೆ/ಳೆ. ಪೂಜೆ ಮಾಡೋ ಎಷ್ಟೋ ಜನರ ಒಳಗಡೇನೂ ದೇವರು ಇರೊ ನಂಬಿಕೆ ನನಗಿಲ್ಲ. ದೇವರು ಇದಾನೊ(ಳೊ) ಇಲ್ಲವೊ ಅನ್ನೋದು ಹಿಂದಿನಿಂದ ಇವತ್ತಿನವರೆಗೂ ನಡೀತಿರೊ ಜಿಜ್ಞಾಸೆ. ನನಗೆ ದೇವರಲ್ಲಿ ನಂಬಿಕೆ ಇಲ್ಲ. ಹಾಗಂತ ದೇವರಲ್ಲಿ ನಂಬಿಕೆ ಇಲ್ಲದೆ ಇರೋದೇ ದೊಡ್ಡ ಗುಣ ಅಂತ ನಾನು ತಿಳ್ಕೊಂಡಿಲ್ಲ. ದೇವರು ಇದಾನೊ(ಳೋ) ಇಲ್ಲವೊ ಅನ್ನೊ ಜಿಜ್ಞಾಸೆ ನಡೀತಾನೇ ಇರುತ್ತೆ. ಆದರೆ ಈ ಜಿಜ್ಞಾಸೆಯನ್ನು ಮೀರಿ – ದೇವರು – ಧರ್ಮದ ಹೆಸರಲ್ಲಿ ಜನರನ್ನು ಒಡೆಯೊ ಕೆಲ್ಸ, ವಂಚನೆ ಮಾಡೊ ಕೆಲ್ಸ ನಡ್ಯುತ್ತಲ್ಲ – ಅದನ್ನು ವಿರೋಧಿಸೋಣ. ದೇವರ ಹೆಸರಲ್ಲಿ ದ್ವೇಷ ಬಿತ್ತೋ ಬುದ್ಧಿವಂತರಿಗೆ ದೇವರು, ಧರ್ಮ ಅನ್ನೋದು ವಿಷ ತುಂಬಿರೊ ಅಸ್ತ್ರಾನೇ ಹೊರತು ಅಂತಃಕರಣ ಅಲ್ಲ ಅಂತ ಅರಿವು ಮೂಡ್ಸೋಣ. ಸತ್ಯ ಅಂದರೆ – ಅವತ್ತಿನ ನನ್ನ ತಿಪ್ಪೇಸ್ವಾಮಿ, ಕರಿಯಮ್ಮ ಹೀಗೆಲ್ಲ ಅಸ್ತ್ರ ಆಗಿದ್ದಿಲ್ಲ. ಇವತ್ತೂ ಅವರದು ಅದೇ ಸ್ಥಿತಿ. ಇಲ್ಲೇ ಇರೋದು ದೇವರ ಗುಟ್ಟು!
*****