ಪ್ರಿಯ ಸಖಿ,
ಅದೂ ಬೇಕು ಇದೂ ಬೇಕು
ಎಲ್ಲವೂ ಬೇಕು ನನಗೆ
ದಾರಿ ನೂರಾರಿವೆ ಬೆಳಕಿನರಮನೆಗೆ
ಕವಿ. ಜಿ.ಎಸ್. ಶಿವರುದ್ರಪ್ಪನವರ ‘ಹಿನ್ನುಡಿ’ ಎಂಬ ಕವನದ ಈ ಸಾಲುಗಳನ್ನು ಓದಿರುವೆಯೊ ಸಖಿ? ವ್ಯಕ್ತಿ ನನಗೆ ಇದೇ ಸಾಕು ‘ಇಷ್ಟೇ ಸಾಕು’ ಈ ಸಿದ್ಧಾಂತವೇ ಸರಿ; ತನ್ನ ಧರ್ಮವೇ ‘ಶ್ರೇಷ್ಠ’ ಎಂಬೆಲ್ಲಾ ಮಿತಿಗಳಿಗೆ ಬಿದ್ದಾಗ ಅವನ ಮನಸ್ಸು ಸಂಕುಚಿತಗೊಳ್ಳುತ್ತಾ ಸಾಗುತ್ತದೆ. ಆದ್ದರಿಂದಲೇ ಕವಿ ‘ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ’ ಎನ್ನುತ್ತಾರೆ ಮುಂದುವರೆಯುತ್ತಾ ಹೀಗೆಂದುಕೊಳ್ಳುತ್ತಾರೆ.
ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ
ನನಗಿಲ್ಲ ಇದೇ ಸರಿ ಇಷ್ಟೇ ಸರಿ ಎನ್ನುವ ಪಂತ
ನಾ ಬಲ್ಲೆ ಇವು ಎಲ್ಲ ಏರುವೆಯ
ಒಂದೊಂದು ಹಂತ
ಮನಸ್ಸು ವಿಶಾಲವಾದಾಗ ಎಲಾ ತತ್ವ ಸಿದ್ಧಾಂತಗಳಲ್ಲೂ ತನಗೆ ಬೇಕಾದ ಒಳಿತನ್ನು ಹುಡುಕಲಾರಂಭಿಸುತ್ತದೆ. ಬೆಳಕಿನರಮನೆ ಒಂದೇ? ವಿವೇಕ ಮತ್ತು ಜ್ಞಾನದ ಗುರಿ ಒಂದೇ ಆದರೂ ಅದನ್ನು ತಲುಪಲು ನೂರಾರು ದಾರಿಗಳಿವೆ. ಇವುಗಳೆಲ್ಲವೂ ಅರಿವಿನ ಒಂದೊಂದು ಮೆಟ್ಟಿಲುಗಳು. ತನ್ನದೇ ಸರಿ ಎಂಬ ಅಹಂಕಾರದ ಮಿತಿಯನ್ನು ಹಾಕಿಕೊಂಡಾಗ ವ್ಯಕ್ತಿ ಬಾವಿ ಕಪ್ಪೆಯಾಗಿ ಬಿಡುತ್ತಾನೆ. ಆ ಮಿತಿಯೇ ಅವನ ಸೋಲಾಗುತ್ತದೆ ಕವನದ ಕೊನೆಯಲ್ಲಿ ಕವಿ,
ನೂರಾರು ಭಾವದ ಬಾವಿ; ಎತ್ತಿಕೋ
ನಿನಗೆ ಬೇಕಾದಷ್ಟು ಸಿಹಿನೀರ
ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ
ನಮಗೆ ಬೇಕಾದದ್ದು ದಾಹ ಪರಿಹಾರ!
ಎನ್ನುತ್ತಾರೆ. ಎಂಥಹಾ ಅರ್ಥಪೂರ್ಣ ಮಾತಲ್ಲವೇ ಸಖೀ? ನಮಗೆ ಬೇಕಾಗಿರುವುದು ಸಿಹಿ ನೀರಷ್ಟೆ ! ಆದರೆ ನಾವು ಪಾತ್ರೆಯಾಕಾರಗಳ ಕುರಿತು ವ್ಯರ್ಥ ಜಗಳ ಶುರುವಿಟ್ಟುಕೊಂಡು ಎಷ್ಟೊಂದು ತತ್ವ, ನೀತಿ, ಮೌಲ್ಯ, ಧರ್ಮ, ಗುಣಗಳಿದ್ದೂ ‘ನಮ್ಮದೇ ಸರಿ’ ಎಂಬ ಒಣ ಪ್ರತಿಷ್ಠೆಯನ್ನು ಮುಂದೆ ಮಾಡಿಕೊಂಡು ಒಳತಿರುಳನ್ನು ಬಿಟ್ಟು ಮೇಲಿನ ಕರಟಕ್ಕಾಗಿ ಕಾದಾಡಿ ನಿರ್ವೀರ್ಯರಾಗುತ್ತಿದ್ದೇವೆ. ನಮಗೆ ಬೇಕಾದದ್ದು ದಾಹ ಪರಿಹಾರ. ಅದಕ್ಕೆ ಯಾವಾಗ ಯಾವ ಬಾವಿಯ ಸಿಹಿ ನೀರಾದರೇನು? ಅಲ್ಲವೆ ಸಖಿ?
*****