ಹುಣ್ಣಿಮೆಯ ಚಂದ್ರಮನು ಮೋಡಗಳ ಬಲೆಯಿಂದ
ಮೆಲ್ಲಮೆಲ್ಲನೆ ಜಾರಿ ಮುಂದೆ ಓಡುತಲಿರಲು
ಉಷೆಯಕಡೆ ಕಾಲದಲ್ಲೋಲ ಸಾಗರದಿಂದ
ಒಂದಾದಮೇಲೊಂದು ಅಲೆಬಂದು ಅಳಿದಿರಲು
ಮೌನದಲಿ-ನಾನಿನ್ನು ಎಚ್ಚತ್ತು ಮಲಗಿರುವೆ!
ಹಿಂದೊಂದು ದಿನ ಇಂಥ ರಾತ್ರಿಯಲೆ ನಾನೆನ್ನ
ಒಲವಿನಕ್ಕನನೊಯ್ದು ಮಸಣದಲ್ಲುರಿಯುಡಿಗೆ
ಆಹುತಿಯನಿತ್ತಿದ್ದೆ-ಮೃತ್ಯುವಿಗೆ ಮೊದಲನ್ನ!
ನಿನ್ನ ಲೆನ್ನಯ ಅಳಿದ ಅಕ್ಕನದೆ ಮುಖಛಾಯೆ
ಮೂಡಿರಲು ನೀನೆನ್ನ ಸೋದರಿಯು ಎನ್ನುತಲಿ
ಮನ ನಿನ್ನನಾಶಿಸಿತು. ಆ ಒಲವಿನದೆ ಮಾಯೆ
ನನ್ನೆಲ್ಲವನು ಮುಸುಕಿದುಗುಡದಲಿ ದೂಡುತಲಿ
ಕ್ಷಣಕ್ಷಣಕು ನಿನ್ನನೇ ನೆನವಿಂಗೆ ತರುತಿಹುದು!
ಮೌನದಲಿ ಎಚ್ಚತ್ತ ಕಾಲದಲೆ ಸಾಗಿಹುದು!
*****