ಕಲ್ಲಿನಂತಿದ್ದ ಹಲ್ಲನ್ನು
ಕಾಣದ ಕ್ರಿಮಿಗಳು ತಿಂದು
ಬೆಳಕಿನ ದಳದಂಥ ಹಲ್ಲು ಹುಳಿತು ಕಪ್ಪಾಗಿ ಹೋಯಿತು.
ಕಬ್ಬು ಸಿಗಿದ ಯಂತ್ರ ಕಡಲೆಪುರಿಗೆ ಬೆದರಿ
ನಿಂತರೆ ನೋವು, ಕೂತರೆ ನೋವು
ಮುಖ ಬಾತು ಮೂತಿ ಕುಂಬಳಕಾಯಾಯಿತು.
ಕಂಡ ಸ್ನೇಹಿತರೆಲ್ಲ ಕಷ್ಟಪಟ್ಟು ಗುರುತಿಸಿ
“ಏನೋ ಹನುಮಂತರಾಯ
ಹೆಸರು ನಿಜಮಾಡಿಕೊಂಡೆಯಲ್ಲೋ
ಯಾರ ಪ್ರಸಾದವಪ್ಪಾ” ಎಂದು ಕಿಚಾಯಿಸಿದರು!
ವಿಚಾರವೆಲ್ಲ ತಿಳಿದು –
“ಹಲ್ಲಿನ ಹಳ್ಳ ಮುಚ್ಚಿಸಿಬಿಡು ಅಥವಾ
ಹಾಳು ಹಲ್ಲೇ ಕಿತ್ತಿಸಿಬಿಡು
ಜೊತೆಗೇ ವಕ್ರ ಹಲ್ಲೆಲ್ಲ ಎತ್ತಿಸಿಬಿಡು!”
ಡೆಂಟಿಸ್ಟ್ ಜವರಪ್ಪ ಗೊತ್ತಲ್ಲ
ಮಹಾಪ್ರಚಂಡ
ಪಿಯುಸಿಲಿದ್ದಾಗಲೇ ಮೆಡಿಕಲ್ ಸೀಟು ಗಿಟ್ಟಿಸಿ
ತೊಂಬತ್ನಾಲ್ಕು ಪರ್ಸೆಂಟಿಗೇ ಟಾಂಗು ಕೊಟ್ಟ ಪಿಂಡ!
ಬಹಳ ವರ್ಷ ಓದಿದ್ದಾರೆ
ಬಹಳ ಪರೀಕ್ಷೆ ಬರೆದಿದ್ದಾರೆ
ಬಂದ ಕೇಸು ಎಂಥದೇ ಇರಲಿ
ಚೂರೂ ಉಳಿಯದಂತೆ ಕೀಳುತ್ತಾರೆ
ಹೋಗು, ಇಡಿಯ ಬಾಯೇ ಸರಿ ಮಾಡುತ್ತಾರೆ”
ಅಂತ ನಗುತ್ತ ಸಲಹೆ ಕೊಟ್ಟು
ಟಾಟಾ ಗುಡ್‌ಬೈ ಫೇರ್‌ವೆಲ್ ಎಲ್ಲ ಕಿರಿಚಿ ಹೋದರು.
ಬೆಳಿಗ್ಗೆ ಎದ್ದವನೇ ಡಾಕ್ಟರಲ್ಲಿಗೆ ಓಡಿದೆ.
ಸೋಡಾ ಸೀಸೆ ಕನ್ನಡಕದ
ಸೇಡಿನ ಛಾಯೆ ಮುಖದ
ಆರಡಿ ಸೈಂಧವ ಡಾಕ್ಟರನ್ನು ನೋಡಿ
ಒಳಗೇ ಜೀವ ನಡುಗಿತು.
ಬ್ಯಾಸ್ಕೆಟ್‌ಬಾಲ್ ಕ್ಯಾಪ್ಟನ್ನಿನಂತಿದ್ದ ಡಾಕ್ಟರು
ಕುರ್ಚಿಗೆ ನನ್ನನ್ನು ತಳ್ಳಿ
ಕಣ್ಣೆತ್ತರಕ್ಕೇರಿಸಿಕೊಂಡರು
ಮರದ ಸಣ್ಣ ಸುತ್ತಿಗೆ ಎತ್ತಿಕೊಂಡು
ತಲೆಗೆ ಸರ್ಚ್‍ಲೈಟ್ ಬಿಟ್ಟರು.
ಸುತ್ತಿಗೆಯಿಂದ ಮೆತ್ತಗೆ ನೆತ್ತಿ ಮೇಲೆ ಬಡಿದರು
ಕತ್ತಿನ ಕೆಳಗೆ ಬಡಿದರು
ಕುತ್ತಿಗೆ ಪಕ್ಕ ಬಡಿದರು.
ಗಾಬರಿಯಾಗಿ ‘ಡಾಕ್ಟರೇ!’ ಎಂದೆ.
‘ಯೋಚನೆ ಬೇಡಿ ಎಲ್ಲ ನಿರ್ನಾಮ ಮಾಡಿಬಿಡುತ್ತೇನೆ’ ಎಂದರು
‘ಅಲ್ಲಲ್ಲ ಡಾಕ್ಟರೇ, ಇಲ್ಲಿ ಹಲ್ಲು’ ಎಂದೆ.
‘ಹಯ್ಯೋ ಅಜ್ಞಾನವೆ!
ಅಲ್ಲಿಗೆ ಇಲ್ಲಿಗೆ ಹಲ್ಲಿಗೆ
ನಡುನೆತ್ತಿಯಿಂದ ಎಲ್ಲೆಂದರಲ್ಲಿಗೆ
ಎಲ್ಲದಕ್ಕೂ ಸಂಬಂಧವಿದೆ ಇವರೆ
ಇಲ್ಲಿ ತಟ್ಟಿದರೆ ಅಲ್ಲಿ ಅಲುಗಬೇಕು, ಕೇಳಿಲ್ಲವಾ
You cannot stir a stone
without disturbing a star’ ಎಂದರು!
ಒಳ್ಳೆ ಗ್ರಹಚಾರವಾಯಿತಲ್ಲ ಎನ್ನಿಸಿತು.
ಚಾಕು ಸೂಜಿ ಕತ್ತರಿ ಎಲ್ಲ
ನನ್ನೆದುರೇ ಕುದಿಸಲು ಹಾಕಿ
ಕೂತಿರಿ ಹೊರಗೆ ಮತ್ತೆ ಕರೆಯುತ್ತೇನೆ ಒಳಗೆ
ಎಂದರು ಡಾಕ್ಟರು.
ಅದುರುವ ಎದೆ ಹಿಡಿದು ಕೂತು
ಎದುರಿಗಿದ್ದ ಪೇಪರ್ ಎತ್ತಿಕೊಂಡರೆ
ಮುಖಪುಟದಲ್ಲೇ ವೈದ್ಯರ ಚಳುವಳಿ
ಕ್ಯಾಪಿಟೇಷನ್ ರದ್ದು ಮಾಡಿ ಕತ್ತೆಗಳನ್ನು ಹೊರದೂಡಿ
ಎಂಬ ದಪ್ಪಕ್ಷರದ ಕಳಕಳಿ!
ಪರಿಸ್ಥಿತಿ ಅರ್ಥವಾಯಿತು.
ಕುದಿಯುವ ಪದಾರ್ಥಗಳನ್ನು ಬದಿಯಲ್ಲಿದ್ದವರಿಗೆ ಬಿಟ್ಟು
ಹೇಳದೆ ಕೇಳದೆ ಡಾಕ್ಟರಿಗೆ
ಹಾರಿ ಹೊರಬಂದೆ ಬೀದಿಗೆ!
*****